– ಬೆಂಗಳೂರಿನ ಪೋಲಿಸರ ಕೈಗೆ ಸಿಕ್ಕಿಬಿದ್ದ ಖದೀಮರು
ತುಮಕೂರು: ಸುಮಾರು 30 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿದರೂ ಪ್ರಕರಣ ದಾಖಲಿಸಿದ ಪಿಎಸ್‍ಐಯನ್ನು ಅಮಾನತು ಮಾಡಲಾಗಿದೆ.
ಜಯನಗರ ಠಾಣೆಯ ಪಿಎಸ್‍ಐ ಮುತ್ತುರಾಜ್‍ನನ್ನು ಅಮಾನತು ಮಾಡಲಾಗಿದೆ. ಶಾಂತಿನಗರದ ಬನಶಂಕರಿ ಮುಖ್ಯ ರಸ್ತೆಯಲ್ಲಿನ ಶಿಲ್ಪಶ್ರೀ ಜ್ಯೂಯಲರ್ಸ್ ಅಂಗಡಿಯಲ್ಲಿ 25 ರಿಂದ 30 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಇರುವ ಬ್ಯಾಗ್‍ಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದರು. ಆದರೂ ಈ ಪ್ರಕರಣವನ್ನು ದಾಖಲಿಸಿಕೊಳ್ಳದೆ ವಂಚಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಎಸ್‍ಪಿ ಕೋನ ವಂಶಿಕೃಷ್ಣ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಘಟನೆ ವಿವರ:
ನವೆಂಬರ್ 16 ರಂದು ಶಿಲ್ಪಶ್ರಿ ಜ್ಯೂಯಲರ್ಸ್ ಅಂಗಡಿ ಮಾಲೀಕ ಟಿ.ಪಿ.ನಾಗರಾಜ್ ರಾತ್ರಿ ಅಂಗಡಿ ಬಂದ್ ಮಾಡಿ ಚೀಲದಲ್ಲಿ ಚಿನ್ನಾಭರಣ ತುಂಬಿಕೊಂಡು ಮನೆಗೆ ಹೋಗುತಿದ್ದರು. ಆಗ ಡಿಯೋ ಬೈಕಿನಲ್ಲಿ ಬಂದಿದ್ದ ಇಬ್ಬರು ಚಿನ್ನಾಭರಣವಿದ್ದ ಚೀಲವನ್ನು ದೋಚಿದ್ದರು. ತಕ್ಷಣ ನಾಗರಾಜ್ ಜಯನಗರ ಠಾಣೆ ದೂರು ನೀಡಿದ್ದಾರೆ. ಆದರೆ ದೂರು ಸ್ವೀಕರಿಸಲು ಪಿಎಸ್‍ಐ ಮುತ್ತುರಾಜ್ ನಿರಾಕರಿಸುತ್ತಾರೆ. ಅಲ್ಲದೇ ದಾಖಲಿಸದೆ ತನಿಖೆ ಆರಂಭಿಸುತ್ತಾರೆ. ಹೀಗಾಗಿ ಇದರ ಹಿಂದೆ ಅಂಗಡಿ ಮಾಲೀಕನಿಗೆ ವಂಚಿಸುವ ಹುನ್ನಾರ ಇತ್ತು ಎನ್ನಲಾಗಿದೆ.
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಖತರ್ನಾಕ್ ಖದೀಮರು
ತುಮಕೂರು ನಗರದ ಬನಶಂಕರಿ ಮುಖ್ಯ ರಸ್ತೆಯಲ್ಲಿ ಎರಡು ಬ್ಯಾಗ್ ದೋಚಿಕೊಂಡು ಪರಾರಿಯಾಗಿದ್ದ ಖದೀಮರು ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇಲ್ಲಿನ ಪೊಲೀಸರು ತುಮಕೂರಿನ ಎಸ್‍ಪಿ ಕೋನಾ ವಂಶಿಕೃಷ್ಣ ಅವರಿಗೆ ಚಿನ್ನಭಾರಣ ದೋಚಿಕೊಂಡು ಪರಾರಿಯಾಗಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನಂತರ ಈ ಬಗ್ಗೆ ನಗರದ ಡಿವೈಎಸ್‍ಪಿ ತಿಪ್ಪೇಸ್ವಾಮಿ ಮತ್ತು ಇನ್ಸ್ ಪೆಕ್ಟರ್ ಪಾರ್ವತಮ್ಮ ಅವರ ಬಳಿ ಕೇಳಿದ್ದಾರೆ. ಆದರೆ ಯಾರ ಬಳಿಯೂ ಅದರ ಬಗ್ಗೆ ಮಾಹಿತಿ ಇರಲಿಲ್ಲ.
25 ರಿಂದ 30 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿದ ಖದೀಮರು ಬೆಂಗಳೂರಿನ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇಲ್ಲಿ ನೋಡಿದರೆ ಯಾವ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿಲ್ಲ ಎಂದ ಕೂಡಲೇ ಅಂಗಡಿಯ ಮಾಲೀಕ ನಾಗರಾಜ್‍ರನ್ನು ಕರೆಸಿ ಎಸ್‍ಪಿ ವಿಚಾರಣೆ ನಡೆಸಿದ್ದಾರೆ. ಆಗ ಘಟನೆಯ ವಿವರ ಕೇಳಿ ಎಸ್‍ಪಿ ಶಾಕ್ ಆಗಿದೆ. ನಂತರ ಪ್ರಕರಣ ದಾಖಲಿಸಿಕೊಳ್ಳದ ಪಿಎಸ್‍ಐ ಮುತ್ತುರಾಜ್‍ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.