ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಪುತ್ರಿ ಐಶ್ವರ್ಯ ಮನೆಯ ಕಳ್ಳತನಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸುದ್ದಿ ಹೊರ ಬರುತ್ತಿವೆ. ಸ್ವತಃ ಆ ಮನೆಯಲ್ಲಿ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಈಶ್ವರಿ (Ishwari) ಎನ್ನುವ ಹೆಂಗಸು, ಅದೇ ಮನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶಂ (Venkatesham) ಸಹಾಯ ಪಡೆದು ಅಪಾರ ಪ್ರಮಾಣದ ಚಿನ್ನ, ವಜ್ರ, ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದಳು. ಆಭರಣಗಳನ್ನು ಮಾರಿ ಕೋಟಿ ರೂಪಾಯಿ ಬೆಲೆಬಾಳುವ ಮನೆ ಖರೀದಿಸಿದ್ದಳು ಎಂದು ತನಿಖೆಯಲ್ಲಿ ಬಯಲಾಗಿದೆ.
ಐಶ್ವರ್ಯ ರಜನಿಕಾಂತ್ ಮನೆಯಲ್ಲಿ ಕಳ್ಳತನವಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಹಾಗೂ ವಜ್ರದ ಉಡುಗೊರೆಯನ್ನು ದೋಚಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ದೂರನ್ನು ಆಧರಿಸಿ ಪೊಲೀಸರು ಕಳ್ಳರ ಬೆನ್ನು ಹತ್ತಿದ್ದರು. ಕೊನೆಗೂ ಕಳ್ಳರನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ನಟನೆಯ `ಬ್ಯಾಡ್ ಮ್ಯಾನರ್ಸ್’ ಫಸ್ಟ್ ಸಾಂಗ್ ಔಟ್
ಚಿನ್ನಾಭರಣ ಇರುವ ವಿಚಾರ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಗೊತ್ತಿತ್ತು ಎಂದು ಐಶ್ವರ್ಯ ಅನುಮಾನ ವ್ಯಕ್ತ ಪಡಿಸಿದ್ದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದವರನ್ನು ವಿಚಾರಿಸಿದಾಗ ಮನೆ ಕೆಲಸದಾಕೆ, ಕಾರು ಚಾಲಕನ ಸಹಾಯ ತೆಗೆದುಕೊಂಡು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಮಾರಿದ್ದ ಆಭರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ವಾರದ ಹಿಂದೆಯಷ್ಟೇ ಐಶ್ವರ್ಯ ತಮ್ಮ (Aishwarya) ಮನೆಯಲ್ಲಿ ಕಳ್ಳತನವಾಗಿದೆ ಎಂದು ತೆನಾಂಪೇಟೆ (Tenampet) ಪೊಲೀಸರಿಗೆ ದೂರು ನೀಡಿದ್ದರು. ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ದುಬಾರಿ ವಸ್ತುಗಳನ್ನು ಖದೀಮರು ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ಕಳ್ಳರಿಗಾಗಿ ಪೊಲೀಸ್ ಬಲೆ ಬೀಸಿದ್ದರು.
ಐಶ್ವರ್ಯ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಮಯವನ್ನು ನೋಡಿಕೊಂಡ ಕಳ್ಳರು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ದೋಚಿದ್ದಾರೆ. ಫೆಬ್ರವರಿಯಲ್ಲೇ ಈ ಕಳ್ಳತನ ನಡೆದಿದ್ದು, ಇದೀಗ ಸುದ್ದಿ ಬಹಿರಂಗವಾಗಿದೆ. ಐಶ್ವರ್ಯ ಅವರು ಕೊಟ್ಟಿರುವ ದೂರಿನಲ್ಲಿ ಲಾಕರ್ ನಲ್ಲಿ ಇರಿಸಿದ್ದ ಆಭರಣದ ಬಗ್ಗೆ ಮನೆಯ ಕೆಲವು ಕೆಲಸದವರಿಗೆ ಗೊತ್ತಿತ್ತು ಎಂದು ಬರೆಯಲಾಗಿತ್ತು. ಅದರ ಆಧಾರದಲ್ಲಿ ಪೊಲೀಸರು ಕಳ್ಳರ ಹಿಂದೆ ಬಿದ್ದಿದ್ದರು.
ಎಫ್ ಐಆರ್ ಪ್ರಕಾರ ’60 ಪವನ್ ಚಿನ್ನ, ಮೂರು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳು, ವ್ರಜದ ಆಭರಣ ಹಾಗೂ ಸಹೋದರಿಯ ಮದುವೆಗೆ ಬಳಸಿದ್ದ ಒಡವೆಗಳನ್ನೂ ಕಳ್ಳರು ದೋಚಿದ್ದಾರೆ. ಫೆಬ್ರವರಿ 10 ರಂದು ಐಶ್ವರ್ಯ ಲಾಕರ್ ತೆರೆದಾಗ ಆಭರಣಗಳು ಮಾಯವಾಗಿದ್ದರ ಬಗ್ಗೆ ಗೊತ್ತಾಗಿದೆ. ಆಘಾತಗೊಂಡ ಅವರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ವಜ್ರದ ಸೆಟ್, ಪುರಾತನ ಕಾಲದ ಚಿನ್ನಾಭರಣ, ಬಳೆಗಳು, ನವರತ್ನ ಸೆಟ್ ಗಳು ಹೀಗೆ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ಅಷ್ಟೂ ಆಭರಣಗಳು ಕಳುವು ಆಗಿವೆ ಎಂದು ಹೇಳಲಾಗುತ್ತಿದೆ. ದೂರಿನ ಪ್ರತಿಯಲ್ಲಿ ಹಲವು ವರ್ಷಗಳಿಂದ ಲಾಕರ್ ನೋಡಿರಲಿಲ್ಲ. ಈಗ ನೋಡಿದಾಗ ಆಭರಣವಿಲ್ಲ ಎಂದು ಗೊತ್ತಾಗಿದೆ ಎಂದು ಬರೆಯಲಾಗಿತ್ತು.