ಜಗತ್ತು ಕಂಡ ಭೀಕರ ಹಡಗು ದುರಂತಗಳು

Public TV
5 Min Read
ship sinking

ಮುದ್ರ ವಿಪತ್ತುಗಳು ಇತಿಹಾಸದುದ್ದಕ್ಕೂ ಸಂಭವಿಸಿವೆ. ಇವುಗಳಿಂದಾಗಿ ಅಪಾರ ಸಂಖ್ಯೆಯಲ್ಲಿ ಜೀವಗಳು ಬಲಿಯಾಗಿದ್ದು, ವಿಶ್ವದ ಹಡಗು ಉದ್ಯಮಕ್ಕೂ ಅಪಾರ ಹಾನಿಯುಂಟಾಗಿದೆ. ಘರ್ಷಣೆ, ಬೆಂಕಿ, ಸ್ಫೋಟ, ಮುಳುಗುವಿಕೆ ಸೇರಿದಂತೆ ಇನ್ನಿತರ ರೀತಿಯ ವಿಪತ್ತುಗಳು ಇದರಲ್ಲಿ ಸೇರಿವೆ. 

ಇತ್ತೀಚೆಗೆ ಇತಿಹಾಸ ಯಾವಾಗಲೂ ನೆನಪಿಸಿಕೊಳ್ಳುವ ಟೈಟಾನಿಕ್ ಹಡಗು ದುರಂತದ ಅವಶೇಷ ನೋಡಲು ಸಬ್‍ಮರ್ಸಿಬಲ್ ಮೂಲಕ ತೆರಳಿದ್ದ ಐವರು ಶ್ರೀಮಂತ ವ್ಯಕ್ತಿಗಳ ದಾರುಣ ಸಾವಾಗಿತ್ತು. ಈ ಘಟನೆ ಟೈಟಾನಿಕ್ ದುರಂತವನ್ನು ಮತ್ತೆ ಮೆಲುಕುಹಾಕುವಂತೆ ಮಾಡಿತು. ಆದರೆ ಈ ಘಟನೆಗೂ ಅತ್ಯಂತ ಮಾರಣಾಂತಿಕ ಹಡಗು ದುರಂತಗಳು (Shipwrecks) ಇತಿಹಾಸದಲ್ಲಿ ಸಂಭವಿಸಿದೆ. ಇತಿಹಾಸದಲ್ಲಿ ದಾಖಲಾದ ಅತ್ಯಂತ ಮಾರಣಾಂತಿಕ ಹಡಗು ದುರಂತಗಳು ಯಾವುವು ಎಂಬುದನ್ನು ನೋಡೋಣ.

1. ವಿಲ್ಹೆಲ್ಮ್ ಗಸ್ಟ್ಲೋಫ್: 

ಇತಿಹಾಸದಲ್ಲಿ ದಾಖಲಾಗಿರುವ ಅತ್ಯಂತ ಹೆಚ್ಚು ಜನರ ಬಲಿ ತೆಗೆದುಕೊಂಡ ಹಡಗು ದುರಂತ ಎಂದರೆ ವಿಲ್ಹೆಲ್ಮ್ ಗಸ್ಟ್ಲೋಫ್. ಜರ್ಮನ್ ಮಿಲಿಟರಿ ಸಾರಿಗೆ ಹಡಗಾಗಿದ್ದ ಇದು 1945ರ ಜನವರಿ 30ರಂದು ಸೋವಿಯತ್ ಜಲಾಂತರ್ಗಾಮಿ ಎಸ್-13 ದಾಳಿಗೆ ಬಾಲ್ಟಿಕ್ ಸಮುದ್ರದಲ್ಲಿ ಮುಳುಗಿತು.

1 MV Wilhelm Gustloff

ಕೇವಲ 1,900 ಜನರನ್ನು ಮಾತ್ರವೇ ಹೊತ್ತು ಸಾಗಲು ಸಾಧ್ಯವಿದ್ದ ಈ ಹಡಗಿನಲ್ಲಿ ಅಂದಾಜು 10,000 ಜನರನ್ನು ಸ್ಥಳಾಂತರಿಸಲಾಗುತ್ತಿತ್ತು. ನಾಗರಿಕರು, ಮಿಲಿಟರಿ ಸಿಬ್ಬಂದಿಯನ್ನು ಪೂರ್ವ ಪ್ರಶ್ಯ ಹಾಗೂ ಜರ್ಮನ್ ಆಕ್ರಮಿತ ಬಾಲ್ಟಿಕ್ ರಾಜ್ಯಗಳಿಂದ ಸ್ಥಳಾಂತರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತು. ಘಟನೆಯಲ್ಲಿ ಅಂದಾಜು 9,400 ಜನರ ಮಾರಣಹೋಮವಾಗಿತ್ತು. ಇದು ಇತಿಹಾಸದಲ್ಲಿ ಮುಳುಗಿದ ಒಂದೇ ಹಡಗಿನ ಅತಿ ದೊಡ್ಡ ಜೀವಹಾನಿ ಎನಿಸಿಕೊಂಡಿದೆ. 

2. ಡೋನಾ ಪಾಜ್:

ಇತಿಹಾಸದ 2ನೇ ಅತಿ ಕೆಟ್ಟ ಹಡಗು ದುರಂತ ಡೋನಾ ಪಾಜ್ ಎನಿಸಿಕೊಂಡಿದೆ. ಜಪಾನ್ ನಿರ್ಮಿತ ಮತ್ತು ಫಿಲಿಪೈನ್ಸ್‌ ನೋಂದಾಯಿತ ಪ್ರಯಾಣಿಕ ದೋಣಿಯಾಗಿದ್ದ ಡೊನಾ ಪಾಜ್ 1987ರಲ್ಲಿ ತೈಲ ಟ್ಯಾಂಕರ್ ವೆಕ್ಟರ್‌ಗೆ ಡಿಕ್ಕಿ ಹೊಡೆದ ಬಳಿಕ ಮುಳುಗಿತು. 

2 MV Dona Paz

ಹಡಗು ಲೇಯ್ಟ್ ದ್ವೀಪದಿಂದ ಫಿಲಿಪೈನ್ ರಾಜಧಾನಿ ಮನಿಲಾಗೆ ಪ್ರಯಾಣಿಸುವಾಗ ದುರ್ಘಟನೆ ಸಂಭವಿಸಿದೆ. ಪರಿಣಾಮ ಅಂದಾಜು 4,380 ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಕೇವಲ 26 ಜನರು ಬದುಕುಳಿದಿದ್ದರು. ಈ ದುರಂತವನ್ನು ಇತಿಹಾಸದಲ್ಲಿ ಯುದ್ಧ ಕಾಲದ ಬಳಿಕ ನಡೆದ ಅತಿ ದೊಡ್ಡ ಕಡಲ ದುರಂತ ಎಂದು ಪರಿಗಣಿಸಲಾಗಿದೆ. 

3. ಆರ್‌ಎಮ್‍ಎಸ್ ಲಂಕಾಸ್ಟ್ರಿಯಾ: 

ಆಪರೇಷನ್ ಏರಿಯಲ್‍ನ ಭಾಗವಾಗಿ 2ನೇ ವಿಶ್ವಯುದ್ಧದ ಸಮಯದಲ್ಲಿ ಬ್ರಿಟನ್ ಸರ್ಕಾರದಿಂದ ಪಡೆಯಲಾಗಿದ್ದ ಹಡಗು ಆರ್‌ಎಮ್‍ಎಸ್ ಲಂಕಾಸ್ಟ್ರಿಯಾ ಆಗಿತ್ತು. ಇದನ್ನು ಫ್ರಾನ್ಸ್‌ನಿಂದ ಬ್ರಿಟಿಷ್ ಪ್ರಜೆಗಳು ಹಾಗೂ ಪಡೆಗಳನ್ನು ಸ್ಥಳಾಂತರಿಸಲು ನಿರಂತರವಾಗಿ ಬಳಸಲಾಗಿತ್ತು. 

3 RMS Lancastria

1940ರ ಜೂನ್ 17ರಂದು ಫ್ರಾನ್ಸ್‌ನಿಂದ ಬ್ರಿಟಿಷ್ ಪ್ರಜೆಗಳು ಹಾಗೂ ಸೈನ್ಯವನ್ನು ತುರ್ತಾಗಿ ಸ್ಥಳಾಂತರಿಸಲು ಬಳಸಿದ್ದಾಗ ಹಡಗು ಮುಳುಗಡೆಯಾಗಿತ್ತು. ಹಡಗು ಸುಮಾರು 1,300 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಅಂದು ಸಾಮರ್ಥ್ಯಕ್ಕೂ ಮೀರಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಗುತ್ತಿತ್ತು. ಮುಳುಗಡೆ ವೇಳೆ ಹಡಗಿನಲ್ಲಿ 4,000 ದಿಂದ 7,000 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಆದರೆ ದುರ್ಘಟನೆ ಸಂಭವಿಸಿದಾಗ ಕೇವಲ ಬೆರಳೆಣಿಕೆಯಷ್ಟು ಜನನ್ನು ಮಾತ್ರವೇ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿತ್ತು. 

4. ಎಸ್‍ಎಸ್ ಕಿಯಾಂಗ್ಯಾ: 

1948ರಲ್ಲಿ ಚೀನಾದ ಅಂತರ್ಯುದ್ಧದ ಕಾಲದಲ್ಲಿ ಎಸ್‍ಎಸ್ ಕಿಯಾಂಗ್ಯಾ ದುರಂತ ಸಂಭವಿಸಿತು. ನಿರಾಶ್ರಿತರನ್ನು ಸಾಗಿಸುವ ಕಾರ್ಯ ನಿರ್ವಹಿಸುತ್ತಿದ್ದ ಚೀನಾದ ಪ್ರಯಾಣಿಕ ಹಡಗು ಇದಾಗಿತ್ತು. 1948ರ ಡಿಸೆಂಬರ್ 4 ರಂದು ಹಡಗು ಸಾಮರ್ಥ್ಯಕ್ಕಿಂತಲು ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಇದನ್ನೂ ಓದಿ: 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?

4 SS Kiangya

ಅಧಿಕೃತವಾಗಿ 2,150 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದ ಹಡಗು ಓವರ್‌ಲೋಡ್‍ನಿಂದಾಗಿ ದುರ್ಬಲಗೊಂಡಿತ್ತು. ಶಾಂಘೈನ ದಕ್ಷಿಣಕ್ಕೆ ಸುಮಾರು 50 ಮೈಲುಗಳಷ್ಟು ದೂರದಲ್ಲಿ ಹುವಾಂಗ್ಬು ನದಿಯ ಮುಂಭಾಗ ಹಡಗು ಬಿರುಕು ಬಿಟ್ಟು ಮುಳುಗಡೆಯಾಯಿತು. ಘಟನೆಯಲ್ಲಿ ಸುಮಾರು 4,000 ಜನರು ಸಾವನ್ನಪ್ಪಿದರೆ, 1,000 ಜನರನ್ನು ಮಾತ್ರವೇ ರಕ್ಷಣೆ ಮಾಡಲಾಗಿತ್ತು. 

5. ಲೆ ಜೂಲಾ: 

ಲೆ ಜುಲಾ ಸೆನೆಗಲೀಸ್ ಸರ್ಕಾರದ ಒಡೆತನದ ದೋಣಿಯಾಗಿದ್ದು, 2002 ಸೆಪ್ಟೆಂಬರ್ 26 ರಂದು ಗ್ಯಾಂಬಿಯಾದ ಕರಾವಳಿ ಪ್ರದೇಶದಲ್ಲಿ ಮುಳುಗಿತು. ಇದರ ಪರಿಣಾಮ 1,863 ಜನರು ಸಾವನ್ನಪ್ಪಿದರು. ಕೇವಲ 64 ಜನರನ್ನು ರಕ್ಷಣೆ ಮಾಡಲಾಗಿತ್ತು. 

5 MV Le Joola

ದೋಣಿಯು ಕ್ಯಾಸಮಾನ್ಸ್ ಪ್ರದೇಶದ ಜಿಗುಯಿಂಚೋರ್‌ನಿಂದ ಸೆನೆಗಲ್‍ನ ರಾಜಧಾನಿ ಡಾಕರ್‌ಗೆ ಪ್ರಯಾಣಿಸುತ್ತಿದ್ದಾಗ ತೀವ್ರ ಚಂಡಮಾರುತದಿಂದಾಗಿ ದುರಂತ ಸಂಭವಿಸಿತು. ಇದು ಆಳವಿಲ್ಲದ ನೀರಿನಲ್ಲಿ ಮಾತ್ರವೇ ನೌಕಾಯಾನ ಮಾಡಲು ಪರವಾನಗಿ ಪಡೆದಿತ್ತು. ಈ ದುರಂತವನ್ನು ಆಫ್ರಿಕಾದ ಟೈಟಾನಿಕ್ ಎಂತಲೂ ಕರೆಯಲಾಗುತ್ತದೆ.

6. ಎಸ್‍ಎಸ್ ಸುಲ್ತಾನಾ:

ಎಸ್‍ಎಸ್ ಸುಲಾನಾ ಅಮೆರಿಕದ ಅತ್ಯಂತ ಭೀಕರ ಸಮುದ್ರ ದುರಂತ ಎನಿಸಿಕೊಂಡಿದೆ. 1865ರ ಏಪ್ರಿಲ್ 27 ಅಮೆರಿಕದ ಅಂತರ್ಯುದ್ಧ ಕೊನೆಗೊಂಡು ಕೇವಲ 1 ವಾರ ಕಳೆದಿತ್ತು. ಒಕ್ಕೂಟದ ಮಿಲಿಟರಿ ಕಾರಾಗೃಹಗಳಿಂದ ಬಿಡುಗಡೆಯಾದ ಹಾಗೂ ಮನೆಗೆ ವಾಪಸಾಗಲು ಉತ್ಸುಕರಾಗಿದ್ದ ಹೆಚ್ಚಿನ ಸಂಖ್ಯೆ ಯೂನಿಯನ್ ಯುದ್ಧ ಕೈದಿಗಳನ್ನು ಈ ಹಡಗು ಒಯ್ಯುತ್ತಿತ್ತು.  ಇದನ್ನೂ ಓದಿ: ಪಾಕ್‌ನಲ್ಲಿ ರಾಜಕೀಯ ಕೋಲಾಹಲ – ಜೈಲುಪಾಲಾದ ಕ್ರಿಕೆಟ್‌ ದಂತಕಥೆಯ ಜೀವಕ್ಕೆ ಇದೆಯಾ ಆಪತ್ತು? 

6 SS Sultana

ವರದಿಗಳ ಪ್ರಕಾರ ಹಡಗಿನ ಬಾಯ್ಲರ್ ಅನ್ನು ಸರಿಯಾಗಿ ನಿರ್ವಹಿಸಿರಲಿಲ್ಲ ಹಾಗೂ ಹಡಗಿನಲ್ಲಿ 2,300 ಜನರು ತುಂಬಿದ್ದರು ಎನ್ನಲಾಗಿದೆ. ಇದು ಹಡಗಿನ ಸಾಮರ್ಥ್ಯಕ್ಕಿಂತಲೂ 6 ಪಟ್ಟು ಹೆಚ್ಚಾಗಿತ್ತು. ಒತ್ತಡದಿಂದಾಗಿ ಬಾಯ್ಲರ್ ಸ್ಫೋಟಗೊಂಡಾಗ ಆರಂಭದಲ್ಲಿ ನೂರಾರು ಜನರು ಸಾವನ್ನಪ್ಪಿದರು. ಓವರ್‌ಲೋಡ್‍ನಿಂದಾಗಿ ಡೆಕ್‍ಗಳು ಕುಸಿದಾಗ ಇನ್ನೂ ಅನೇಕರು ಸಿಕ್ಕಿಬಿದ್ದರು. ಘಟನೆಯಲ್ಲಿ ಸುಮಾರು 1,800 ಜನರ ಬಲಿಯಾಗಿತ್ತು. ಆದರೆ ಮಾಧ್ಯಮಗಳಲ್ಲಿ ಅಬ್ರಹಂ ಲಿಂಕನ್ ಹತ್ಯೆಯ ಬಗ್ಗೆ ನಿರಂತರವಾಗಿ ಪ್ರಸಾರ ಮಾಡಲಾಗಿದ್ದರಿಂದ ಈ ಘಟನೆ ಹೆಚ್ಚು ಸುದ್ದಿಯಾಗಿರಲಿಲ್ಲ.

7. ನೆಫ್ಚೂನ್: 

1993ರ ಫೆಬ್ರವರಿ 17ರಂದು ಪೋರ್ಟ್-ಔ-ಪ್ರಿನ್ಸ್‍ನಿಂದ ಹೈಟಿಯ ಜೆರೆಮಿಗೆ ಪ್ರಯಾಣಿಸುತ್ತಿದ್ದ ನೆಫ್ಚೂನ್ ಪ್ರಯಾಣಿಕ ಹಡಗು ಭಾರೀ ಅಲೆಗಳ ಹೊಡೆತಕ್ಕೆ ಮುಳುಗಿತು. ಕೇವಲ 400 ಪ್ರಯಾಣಿಕರನ್ನು ತುಂಬುವ ಸಾಮಥ್ರ್ಯವಿದ್ದ ಹಡಗಿನಲ್ಲಿ ಸುಮಾರು 2,000 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಹಡಗು ಮುಳುಗಡೆ ಸಂದರ್ಭ ರಕ್ಷಣಾ ಪ್ರಯತ್ನಗಳನ್ನು ಮಾಡಲಾಗಿದ್ದರೂ ಎಲ್ಲವೂ ಅಸ್ತವ್ಯಸ್ತಗೊಂಡಿತ್ತು. ಘಟನೆಯಲ್ಲಿ 1,500 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. 

7 Neptune sinking

8. ತೈಪಿಂಗ್: 

1949ರ ಜನವರಿ 27ರಂದು ಚೀನಾದಿಂದ ತೈವಾನ್‍ಗೆ ತೆರಳುತ್ತಿದ್ದ ತೈಪಿಂಗ್ ಹೆಸರಿನ ಹಡಗು ಅಪಘಾತಕ್ಕೀಡಾಗಿ ಮುಳುಗಡೆಯಾಗಿತ್ತು. ಅಂದಾಜಿನ ಪ್ರಕಾರ ಹಡಗಿನಲ್ಲಿ 1,500ಕ್ಕೂ ಹೆಚ್ಚು ಜನರಿದ್ದರು. ಅದರಲ್ಲಿ ಹೆಚ್ಚಿನವರು ಚೀನಾದ ಅಂತರ್ಯುದ್ಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ನಿರಾಶ್ರಿತರಾಗಿದ್ದರು. ಕೇವಲ 580 ಪ್ರಯಾಣಿಕರ ಸಾಮರ್ಥ್ಯವಿದ್ದ ಹಡಗು ಇದಾಗಿತ್ತು. ಕರ್ಫ್ಯೂ ಕಾರಣದಿಂದಾಗಿ ತೈಪಿಂಗ್ ಹಡಗಿನಲ್ಲಿ ರಾತ್ರಿ ದೀಪಗಳಿಲ್ಲದೇ ಪ್ರಯಾಣ ಬೆಳೆಸಿತ್ತು. ಆದರೆ ಅದು ಝೌಶನ್ ದ್ವೀಪಸಮೂಹದ ಬಳಿ ಬಂದಾಗ ಚಿಕ್ಕ ಸರಕು ಹಡಗು ಚೀನುವಾನ್‍ಗೆ ಡಿಕ್ಕಿ ಹೊಡೆದು ಮುಳುಗಡೆಯಾಯಿತು. ಘಟನೆಯಲ್ಲಿ ಕೇವಲ 37 ಜನರನ್ನು ರಕ್ಷಿಸಲಾಗಿತ್ತು.  ಇದನ್ನೂ ಓದಿ: ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!

9 RMS Titanic

9. ಟೈಟಾನಿಕ್: 

ವಿಶ್ವದಾದ್ಯಂತ ಹೆಚ್ಚು ಸದ್ದು ಮಾಡಿದ ಹಡಗು ದುರಂತದಲ್ಲಿ ಟೈಟಾನಿಕ್ ಮೊದಲನೆಯದಾಗಿದೆ. ಟೈಟಾನಿಕ್ ಬ್ರಿಟಿಷ್ ಪ್ರಯಾಣಿಕ ಹಡಗಾಗಿದ್ದು, ಮುಳುಗದ ಹಡಗು ಎಂದೇ ಹೆಸರು ಪಡೆದಿತ್ತು. ಆದರೆ 1912ರ ಏಪ್ರಿಲ್ 15 ರಂದು ತನ್ನ ಮೊಟ್ಟ ಮೊದಲ ಪ್ರಯಾಣದಲ್ಲೇ ದೈತ್ಯ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಟೈಟಾನಿಕ್ ಮುಳುಗಡೆಯಾಯಿತು. ಹಡಗು ಸೌತಾಂಪ್ಟನ್‍ನಿಂದ ನ್ಯೂಯಾರ್ಕ್ ನಗರಕ್ಕೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಘಟನೆ ವೇಳೆ ಹಡಗಿನಲ್ಲಿ 2,200ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿದ್ದರು. ಲೈಫ್‍ಬೋಟ್ ಸಹಾಯದಿಂದ ನೂರಾರು ಜನರನ್ನು ರಕ್ಷಣೆ ಮಾಡಲಾಯಿತಾದರೂ ದುರಂತದಲ್ಲಿ ಅಂದಾಜು 1,500ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article