ತೈಲ ಸಂಪತ್ತಿನ ಮೇಲೆಯೇ ಅವಲಂಬಿತವಾಗಿರುವ ತನ್ನ ಆರ್ಥಿಕತೆಯನ್ನು ನವೀನ ಮೂಲಸೌಕರ್ಯ ಯೋಜನೆಗಳತ್ತ ವಿಸ್ತರಿಸಲು ಮುಂದಾಗಿರುವ ಸೌದಿ ಅರೇಬಿಯಾ (Saudi Arabia), ವಿಶ್ವದ ಅತಿದೊಡ್ಡ ಕಟ್ಟಡ ಯೋಜನೆ ‘ಮುಕಾಬ್’ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ (Riyadh) ಸದ್ಯದಲ್ಲಿಯೇ ತಲೆ ಎತ್ತಲಿರುವ ಅತ್ಯಂತ ದೊಡ್ಡ ಕಟ್ಟಡದಲ್ಲಿ ಸುಮಾರು 20 ನ್ಯೂಯಾರ್ಕ್ನಂತಹ ನಗರಗಳನ್ನು ಕೂರಿಸಬಹುದು ಎಂದೇ ಹೇಳಲಾಗುತ್ತಿದೆ. ಹಾಗಿದ್ರೆ ಈ ಕಟ್ಟಡದ ವಿಶೇಷತೆ ಏನು? ಹೇಗಿರಲಿದೆ ಈ ಕಟ್ಟಡ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಹೇಗಿರಲಿದೆ ಮುಕಾಬ್?
ಮುಕಾಬ್ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಘೋಷಿಸಿದ ಹೊಸ ಅಭಿವೃದ್ಧಿ ಯೋಜನೆಯಾಗಿದೆ. ಮಹತ್ವಾಕಾಂಕ್ಷೆಯ ಯೋಜನೆಯು ದೇಶದ ರಾಜಧಾನಿ ರಿಯಾದ್‌ನಲ್ಲಿ ‘ದಿ ಮುಕಾಬ್’ (The Mukab) ಎಂಬ ಹೆಸರಿನ ವಿಶ್ವದ ಅತಿದೊಡ್ಡ ಒಳ-ನಗರದ ಕಟ್ಟಡವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದು ಸೌದಿ ವಿಷನ್ 2030 ಗೆ ಅನುಗುಣವಾಗಿ ರಿಯಾದ್‌ನಲ್ಲಿ ವಿಶ್ವದ ಅತಿದೊಡ್ಡ ಆಧುನಿಕ ಡೌನ್‌ಟೌನ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
Advertisement
Advertisement
ಚೌಕಾಕಾರದಲ್ಲಿರುವ ಈ ಕಟ್ಟಡ 400 ಮೀಟರ್ ಎತ್ತರವಿರಲಿದೆ. ಕಾಮಗಾರಿ ಮುಗಿದ ಬಳಿಕ, ಇದು ಜಗತ್ತಿನ ಅತಿದೊಡ್ಡ ಕಟ್ಟಡ ಎನಿಸಿಕೊಳ್ಳಲಿದೆ. ರಾಜಧಾನಿ ರಿಯಾದ್ ಬಳಿ ಇರುವ ಈ 3 ಕಟ್ಟಡದಲ್ಲಿ 20 ಲಕ್ಷ ಚದರ ಮೀಟರ್ ಸ್ಥಳಾವಕಾಶ ಸಿಗಲಿದೆ. ವಿಸ್ತೀರ್ಣದಲ್ಲಿ ಇದು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಹೆಗ್ಗುರುತಿನ ಕಟ್ಟಡ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ಗಿಂತ 20 ಪಟ್ಟು ದೊಡ್ಡದಾಗಿರಲಿದೆ.
Advertisement
‘ನ್ಯೂ ಮುರಾಬ್ಬ’ ಎಂಬ ಹೊಸ ನಗರ ಜಿಲ್ಲೆಯೊಂದನ್ನು ಸೌದಿ ಅರೇಬಿಯಾ ಸೃಷ್ಟಿಸುತ್ತಿದ್ದು, ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಸೌದಿ ಅರೇಬಿಯಾ ಹೊಂದಿದೆ. ಮುರಾಬ್ಬ ನಗರ ಜಿಲ್ಲೆಗೆ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಮುಕಾಬ್ ಇರಲಿದೆ ಎಂದು ವರದಿಗಳು ತಿಳಿಸಿವೆ. ಮುಕಾಬ್‌ನಲ್ಲಿ ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣ, ಸಾಂಸ್ಕೃತಿಕ ಪ್ರದೇಶಗಳನ್ನು ಒಳಗೊಂಡಿರಲಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಈ ಕಟ್ಟಡ ಹೇಗಿರಲಿದೆ ಎಂಬ ವೀಡಿಯೋವನ್ನು ಸೌದಿ ಬಿಡುಗಡೆಗೊಳಿಸಿತ್ತು.
Advertisement
ಮುಕಾಬ್ ಕಟ್ಟಡ ಕ್ಯೂಬ್ ಆಕಾರದಲ್ಲಿದ್ದರೂ, ಒಳಗಡೆ ತ್ರಿಕೋನದ ರೀತಿಯ ವಿನ್ಯಾಸವಿರಲಿದೆ. ಮುಕಾಬ್, ಹೊಸ ಮುರಬ್ಬಾ ಯೋಜನೆಯು 1,04,000 ವಸತಿ ಘಟಕಗಳು, 9000 ಹೋಟೆಲ್ ಕೊಠಡಿಗಳು, 9,80,000 ಚದರ ಮೀಟರ್ ಕಮರ್ಷಿಯಲ್ ಪ್ಲೇಸ್ ಮತ್ತು 1.4 ಮಿಲಿಯನ್ ಚದರ ಮೀಟರ್ ಕಚೇರಿ ಸ್ಥಳವನ್ನು ಒಳಗೊಂಡಿರುತ್ತದೆ . ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಇದು ಹಸಿರು ಪ್ರದೇಶ ಮತ್ತು ವಾಕಿಂಗ್ ಟ್ರ್ಯಾಕ್ ಗಳನ್ನು ಸಹ ಒಳಗೊಂಡಿರುತ್ತದೆ. 50 ಶತಕೋಟಿ ಯುಎಸ್ ಡಾಲರ್ ಸುಮಾರು (42,03,95,75,00,000) ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.
ಇಲ್ಲಿಯವರೆಗೂ ದುಬೈನಲ್ಲಿ ನಿರ್ಮಾಣವಾಗಿರುವ ಬುರ್ಜ್ ಖಲೀಫಾವೇ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿಯನ್ನು ಪಡೆದಿತ್ತು. ವಿಶ್ವದಲ್ಲಿ ಅತ್ಯಂತ ಎತ್ತರವಾದ ಬುರ್ಜ್ ಖಲೀಫಾ ಕಟ್ಟಡದ ಎತ್ತರ 2,722 ಫೀಟ್ ಇದೆ. ಅದನ್ನು ಹಿಂದೆ ಹಾಕುವ ನಿಟ್ಟಿನಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ. ಇದು ರಿಯಾದ್ ಸಿಟಿಯಲ್ಲಿ 11 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ.
ನ್ಯೂ ಮುರಬ್ಬಾ ಹೇಗಿರಲಿದೆ?
66 ಲಕ್ಷ ಕೋಟಿ ರೂ. ವೆಚ್ಚದಲ್ಲಿ 19 ಚದರ ಕಿ.ಮೀ. ವಿಸ್ತಾರದಲ್ಲಿ ‘ನ್ಯೂ ಮುರಬ್ಬಾ’ ಸಿಟಿ ಎದ್ದು ನಿಲ್ಲಲಿದೆ. ಮುಂದಿನ ಪೀಳಿಗೆ ಸಂಪೂರ್ಣವಾಗಿ ವರ್ಚುವಲ್ ಜಗತ್ತನ್ನೇ ಅವಲಂಬಿಸುವ ಕಾರಣ, ಅವರ ಬೇಡಿಕೆ ಪೂರೈಸಲು ಎಲ್ಲ ರೀತಿಯ ಡಿಜಿಟಲ್ ಸೌಲಭ್ಯ ಹೊಂದಿರಲಿದೆ. ನ್ಯೂ ಮುರಬ್ಬಾ ಡೆವಲಪ್‌ಮೆಂಟ್ ಕಂಪನಿ ನಗರ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದು, 2030ರ ವೇಳೆಗೆ ನಗರ ನಿರ್ಮಾಣ ಪೂರ್ಣಗೊಳ್ಳಲಿದೆ. 7 ವರ್ಷದ ಈ ಕಾಮಗಾರಿ ಸಮಯದಲ್ಲಿ ಬರೋಬ್ಬರಿ 3,34,000 ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಲಭಿಸಲಿದೆ. ಅಲ್ಲದೆ ಇದರಿಂದ ಸೌದಿ ಅರೇಬಿಯಾದ ಜಿಡಿಪಿಗೆ 4 ಲಕ್ಷ ಕೋಟಿ ರೂ. ಸಂದಾಯವಾಗಲಿದೆ. ವಸ್ತುಸಂಗ್ರಹಾಲಯ, ತಾಂತ್ರಿಕ ಮತ್ತು ವಾಸ್ತುಶಿಲ್ಪ ವಿವಿಗಳಿರಲಿವೆ. ರಂಗಭೂಮಿ ಮತ್ತು ಇತರ ಮನರಂಜನಾ ತಾಣಗಳು, ಹಸಿರೀಕರಣಕ್ಕೆ ಆದ್ಯತೆ ಇರುತ್ತದೆ.
ಅಂಬಾನಿ ಮನೆಗಿಂತ ದುಪ್ಪಟ್ಟು ಎತ್ತರದ ‘ಮುಕಾಬ್’:
ನಗರದ ಮಧ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಾದಿತ ‘ಮುಕಾಬ್ಲ’ ಸೌಧವು, ಮುಕೇಶ್ ಅಂಬಾನಿ ಅವರ ಆಂಟಿಲಿಯಾ ಕಟ್ಟಡಕ್ಕಿಂತ 2 ಪಟ್ಟು ಹೆಚ್ಚು, ಅಂದರೆ 400 ಮೀಟರ್ ಎತ್ತರದಲ್ಲಿದೆ. ಆಂಟಿಲಿಯಾ ಎತ್ತರ ‘ಕೇವಲ’ 173 ಮೀಟರ್. ಅಲ್ಲದೆ, ಸೌದಿಯ ಈ ಕಟ್ಟಡವು ನ್ಯೂಯಾರ್ಕ್‌ನ ವಿಶ್ವಪ್ರಸಿದ್ಧ ಎಂಪೈರ್ ಸ್ಟೇಟ್‌ಗಿಂತ 20 ಮೀಟರ್ ಹೆಚ್ಚಿನ ಎತ್ತರ ಹೊಂದಿರಲಿದೆ. ಅಲ್-ಸೌದ್ ರಾಜವಂಶದ ‘ನಜ್ದಿ ವಾಸ್ತುಶಿಲ್ಪ’ ಶೈಲಿಯಲ್ಲಿ ನಿರ್ಮಾಣಗೊಳ್ಳಲಿದೆ. ಇದರ ಮಧ್ಯದಲ್ಲಿ ಬೃಹತ್ ಸುರುಳಿಯಾಕಾರದ ಗೋಪುರವಿರಲಿದೆ. ಇದು ಕೂಡ ಕಾಬಾದ ರಚನೆಗೆ ಹೋಲುತ್ತಿರುವುದರಿಂದ ವಿವಾದಕ್ಕೆ ಗುರಿಯಾಗಿದೆ.
ಇಸ್ಲಾಮಿಕ್ ಸಂಘಟನೆಗಳ ಆಕ್ಷೇಪವೇಕೆ?
ಪವಿತ್ರ ನಗರವಾದ ಮೆಕ್ಕಾವನ್ನು ಇಸ್ಲಾಂ ಧರ್ಮದ ಅತ್ಯಂತ ಶುದ್ಧ ನಗರ ಎಂದೇ ಬಣ್ಣಿಸಲಾಗುತ್ತದೆ. ಅಂಥದ್ದೇ ಪರಿಶುದ್ಧ ನಗರ ನ್ಯೂ ಮುರಬ್ಬಾ ಆಗಲಿದೆ. ಅಲ್ಲದೆ, ಮೆಕ್ಕಾದಲ್ಲಿರುವಂತೆ ಕಪ್ಪುಶಿಲೆಗಳ ಕಾಬಾದ ಪ್ರತಿರೂಪವನ್ನು ನ್ಯೂ ಮುರಬ್ಬಾದಲ್ಲಿ ಸ್ಥಾಪಿಸುತ್ತಿರುವುದನ್ನು ಕೆಲವು ಇಸ್ಲಾಮಿಕ್ ಸಂಘಟನೆಗಳು ವಿರೋಧಿಸಿವೆ. ಇದರಿಂದ ಮೆಕ್ಕಾದ ಧಾರ್ಮಿಕ ಮಹತ್ವ ತಗ್ಗಬಹುದು ಎಂಬುದು ಆಕ್ಷೇಪ.
ಜಗತ್ತಿನ ಮೊದಲ ವರ್ಚುವಲ್ ಸಿಟಿ:
ನ್ಯೂ ಮುರಬ್ಬಾದಲ್ಲಿ ಕಟ್ಟಲಾಗುವ ಮನೆಗಳಿಗೆ ಡಿಜಿಟಲ್- ವರ್ಚುವಲ್ ವಿನ್ಯಾಸ ನೀಡಲಾಗುತ್ತದೆ. ಈ ಮನೆಗಳಲ್ಲಿ ಎಲ್ಲೇ ನಿಂತರೂ, ಬಯಸಿದ ಕೂಡಲೇ ಕಣ್ಣೆದುರು ಜಲಪಾತ, ನದಿ, ಆಕಾಶದಲ್ಲಿನ ನಕ್ಷತ್ರರಾಶಿ, ಹಿಮಪರ್ವತ, ಸಮುದ್ರದ ದೃಶ್ಯಗಳು ಪ್ರತ್ಯಕ್ಷಗೊಳ್ಳುವಂತೆ ಕೃತ ಪ್ರಾಕೃತಿಕ ಅದ್ಭುತಗಳ ವರ್ಚುವಲ್ ಪ್ರಪಂಚ ಸೃಷ್ಟಿಯಾಗುವ ವ್ಯವಸ್ಥೆ ಇರಲಿದೆ. ಮನೆಗಳ ಒಳಗೇ ಸಮುದ್ರ ಇರುವಂತೆ, ಅನ್ಯಗ್ರಹದ ಅನುಭವ ಹುಟ್ಟುವಂಥ ಯೋಜನೆಗಳು ಇರಲಿವೆ ಎಂದು ಅರಬ್ ಮಾಧ್ಯಮಗಳು ವರ್ಣಿಸಿವೆ.
ದುಬಾರಿ ಸಿಟಿ ಸೌದಿಗೆ ಅಗತ್ಯವೇಕೆ?
ಸೌದಿ ಅರೇಬಿಯಾವು ತೈಲ ಉತ್ಪಾದನಾ ದೇಶದಲ್ಲಿ ಜಗತ್ತಿನಲ್ಲೇ 2ನೇ ಸ್ಥಾನದಲ್ಲಿದೆ. ಸೌದಿಯ ಶೇ 80 ಆದಾಯ ತೈಲ ಇಂಧನದಿಂದ ಬರುತ್ತದೆ. ಬ್ರೂಕಿಂಗ್ ಇನ್‌ಸ್ಟಿಟ್ಯೂಟ್‌ನ ವರದಿ ಪ್ರಕಾರ, ಮುಂದಿನ 60 ವರ್ಷಗಳಲ್ಲಿ ಸೌದಿ ಒಡಲಿನ ತೈಲ ಬರಿದಾಗಲಿದೆ. ಪೆಟ್ರೋಲ್- ಡೀಸೆಲ್ ಉತ್ಪಾದನೆ ನಿಂತರೆ ಸೌದಿಗೆ ಉಳಿಯುವುದು ಬರೀ ಮರಳುಗಾಡು ಮಾತ್ರ. ಈ ಕಾರಣದಿಂದ ಭವಿಷ್ಯದ ಆದಾಯಕ್ಕಾಗಿ ಸೌದಿ ರಾಜಕುಮಾರ ನಿಯೋಮ್ (NEOM) ಪ್ರಾಜೆಕ್ಟ್ ಆರಂಭಿಸಿದ್ದಾರೆ. ದೇಶದ ಆರ್ಥಿಕತೆಗೆ ಮರುವಿನ್ಯಾಸ ನೀಡಬಲ್ಲಂಥ ಈ ನಿಯೋಮ್‌ನ ಒಂದು ಭಾಗವೇ ನ್ಯೂ ಮುರಬ್ಬಾ ಸಿಟಿ ನಿರ್ಮಾಣ. ಅಲ್ಲದೆ, ಅತ್ಯಂತ ಕಠಿಣ ಷರಿಯಾ ಕಾನೂನುಗಳಿಗೆ ಹೆಸರಾದಂಥ ಸೌದಿ ಇತ್ತೀಚೆಗೆ ಹಲವು ನಿಯಮಗಳನ್ನು ಕೈಬಿಡುತ್ತಿದೆ. ವೀಸಾ ನೀತಿಯನ್ನು ಸಡಿಲಗೊಳಿಸಿ, ಟೂರಿಸಂಗೆ ಒತ್ತುಕೊಡುತ್ತಿರುವ ಸೌದಿಯು ಹೆಚ್ಚೆಚ್ಚು ವಿದೇಶಿಗರನ್ನು ಸ್ವಾಗತಿಸುತ್ತಿರುವುದೂ ಇದೇ ಕಾರಣಕ್ಕೆ.