ರಾಮನಗರ: ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸ್ ರ ಕ್ರಮವನ್ನು ಖಂಡಿಸಿ ಸ್ವರಾಜ್ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಡಿವೈಎಸ್ಪಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಗ್ರಾಮದ ವ್ಯಕ್ತಿಯೋರ್ವ ಮೂರು ಮದುವೆಯಾಗಿದ್ದರು. ಈ ವಿಚಾರವಾಗಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಪೊಲೀಸರಿಗೆ ದೂರು ನೀಡಿದ್ದರು. ಆಗ ಪೊಲೀಸರು ಚುನಾವಣೆ ಕರ್ತವ್ಯದಲ್ಲಿದ್ದರಿಂದ ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಆದರೆ ಚುನಾವಣೆ ಮುಗಿದು ಇಷ್ಟು ದಿನಗಳು ಕಳೆದರೂ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‍ಐ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಿದ್ದಾರೆ.
ದೂರನ್ನು ಪಡೆದರೂ ಎಫ್‍ಐಆರ್ ದಾಖಲಿಸಿಲ್ಲ. ಮೂರು ಮದುವೆಯಾದ ವ್ಯಕ್ತಿ ಮಾತ್ರ ನಿರ್ಭಯವಾಗಿ ಓಡಾಡಿಕೊಂಡಿದ್ದಾನೆ. ಇದು ಹೀಗೆ ಮುಂದುವರಿದರೆ ಸಮಾಜದಲ್ಲಿ ಇದು ಇತರರ ಮೇಲೆ ಪರಿಣಾಮ ಬೀರಬಹುದು. ದೂರು ದಾಖಲಿಸಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ. ಹಾಗಾಗಿ ಚನ್ನಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಪೊಲೀಸರ ಸೇವೆ ರಾಜಕೀಯ ವ್ಯಕ್ತಿಗಳಿಗೆ ಸೀಮಿತವಾಗಿದೆ ಎಂದು ಆರೋಪಿಸಿ, ಮಧ್ಯರಾತ್ರಿಯವರೆಗೆ ಡಿವೈಎಸ್ಪಿ ಕಚೇರಿ ಬಾಗಿಲಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಆದರೆ ಈ ಕುರಿತಂತೆ ಮೂರು ಮದುವೆಯಾದ ವ್ಯಕ್ತಿಯ ಯಾವ ಪತ್ನಿಯರಿಂದಲೂ ಇದೂವರೆಗೂ ಯವುದೇ ದೂರು ದಾಖಲಾಗಿಲ್ಲ. ಆತ ಮೂವರೂ ಪತ್ನಿಯರೊಂದಿಗೆ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಆದ್ರೂ ಮಹಿಳಾ ಸಂಘಟನೆಯ ಕಾರ್ಯಕರ್ತೆಯರು ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕ್ಷೇತ್ರದಲ್ಲಿಯೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಾಗಾಗಿ ಕೂಡಲೇ ಅದನ್ನು ಸರಿಪಡಿಸುವಂತೆ ಪ್ರತಿಭಟನಾ ನಿರತರು ಸಿಎಂ ಎಚ್ ಡಿ ಕುಮಾರಸ್ವಾಮಿಯವರಿಗೂ ಕೂಡ ಮನವಿ ಮಾಡಿದ್ದಾರೆ.