ಮಂಗಳೂರು: ಅದು ತುಳುನಾಡಿನ ಕಾರಣಿಕದ ಪ್ರಭಾವಿ ದೈವ. ಬೇಡಿದ ಇಷ್ಟಾರ್ಥಗಳನ್ನು ಪೂರೈಸುವ ದೇವರು ಎಂದೇ ಹೆಸರುವಾಸಿ. ಇಂಥಾ ಶಕ್ತಿ ಭೂತ ದೇವರಿಗೆ ಆ ಯುವಕ ಫೇಸ್ ಬುಕ್ ನಲ್ಲಿ ಬಾಯಿಗೆ ಬಂದಂತೆ ನಿಂದಿಸಿದ್ದ. ಈಗ ನೋಡಿದರೆ ನಿಂದಿಸಿದವನೇ ಬಂದು ದೇವರಲ್ಲಿ ಕ್ಷಮೆ ಕೋರಿದ್ದಾನೆ.
ಹೀಗೆ ಉದ್ದಂಡ ನಮಸ್ಕಾರ ಹಾಕ್ತಿರೋ ಈತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಮನೋಜ್ ಪಂಡಿತ್. ಮಂಗಳೂರಿನ ಪದವಿನಂಗಡಿಯ ಬಂಗೇರ ಎಂಬವರು ಆರಾಧಿಸೋ ಕೊರಗಜ್ಜನ ಗುಡಿಯ ಮುಂದೆ ಹೀಗೆ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸುತ್ತಿರುವುದಕ್ಕೆ ಕಾರಣ ಆತ ಮಾಡಿದ್ದ ಪ್ರಮಾದ. ಎರಡು ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ಈತ ತುಳುನಾಡಿನ ಕೊರಗಜ್ಜನ ಬಗ್ಗೆ ಅವಮಾನಕರವಾಗಿ ಟೀಕಿಸಿದ್ದ. ಯಾವಾಗ ಈತನ ತಾಯಿಗೆ ಮತ್ತು ಇವನಿಗೂ ಅನಾರೋಗ್ಯ ಶುರುವಾಯಿತೋ ದೇವರಿಗೆ ಬಂದು ನಮಸ್ಕಾರ ಹಾಕಿ ತಪ್ಪಿಗೆ ಕ್ಷಮೆ ಯಾಚಿಸಿದ್ದಾನೆ.
ತುಳುನಾಡಿನ ಕೊರಗಜ್ಜನ ಬಗ್ಗೆ, ದೈವಾರಾಧನೆಯ ಬಗ್ಗೆಯೇ ತುಚ್ಛವಾಗಿ ನಿಂದನೆ ಮಾಡಿದ್ದ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಕೆಲವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಮಂಗಳೂರಿನ ಹಿಂದು ಹಿತರಕ್ಷಣಾ ಸಮಿತಿ ಎನ್ನುವ ಸಂಘಟನೆ ಮನೋಜ್ ವಿರುದ್ಧ ಬಂದರು ಠಾಣೆಯಲ್ಲಿ ದೂರು ಕೂಡ ದಾಖಲಿಸಿತ್ತು. ಆದ್ರೆ ಆತ ಯಾವುದಕ್ಕೂ ಕ್ಯಾರೇ ಎನ್ನದೇ ಸುಮ್ಮನಿದ್ದ. ಯಾವಾಗ ಮನೆಯವರೆಲ್ಲಾ ಅನಾರೋಗ್ಯಕ್ಕೆ ತುತ್ತಾದರೋ ಆಗ ಮನೋಜ್ ಪಂಡಿತ್ ಮನಸ್ಸು ಬದಲಾಯಿಸಿ ಹಿಂದು ಸಂಘಟನೆಯವರನ್ನು ಸಂಪರ್ಕಿಸಿದ್ದಾನೆ. ಬೇರೆ ಯಾರಿಗೂ ತಿಳಿಯದಂತೆ ಮಂಗಳೂರಿಗೆ ಆಗಮಿಸಿ ಕೊರಗಜ್ಜನಿಗೆ ಅಡ್ಡ ಬಿದ್ದು ತಪ್ಪೊಪ್ಪಿಕೊಂಡಿದ್ದಾನೆ.