Karnataka

ನಂಜನಗೂಡು ಪಂಚಮಹಾರಥೋತ್ಸವದ ವೇಳೆ ಅವಘಡ- ರಸ್ತೆಯಲ್ಲಿ ಹೂತು ಹೋದ ರಥದ ಚಕ್ರ

Published

on

Share this

– ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

ಮೈಸೂರು: ಮೈಸೂರು: ಬಳ್ಳಾರಿ ಕೊಟ್ಟೂರೇಶ್ವರ ರಥ ಮಗುಚಿ ಬಿದ್ದ ಪ್ರಕರಣ ಮಾಸುವ ಮುನ್ನವೇ ನಂಜನಗೂಡು ಪಂಚ ಮಹಾರಥೋತ್ಸವದ ವೇಳೆ ಅವಘಡ ಸಂಭವಿಸಿದೆ.

ನಂಜನಗೂಡಿನ ಅಂಗಡಿ ಬೀದಿಯಲ್ಲಿ ಸಾಗುತ್ತಿದ್ದ ವೇಳೆ ರಥದ ಚಕ್ರ ಹೂತು ಹೋಗಿದೆ. ಶ್ರೀಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಗೌತಮ ರಥದ ಮುಂಭಾಗದಲ್ಲಿರುವ ಎಡಬದಿಯ ಚಕ್ರ ರಸ್ತೆಯಲ್ಲಿ ಹೂತು ಹೋದ ಪರಿಣಾಮ ಗೌತಮ ರಥ ಮುಂದೆ ಚಲಿಸದೆ ನಿಂತಿದೆ. 1 ಕ್ರೇನ್ ಹಾಗೂ 2 ಜೆಸಿಬಿಗಳಿಂದ ರಥದ ಚಕ್ರವನ್ನು ಮೇಲೆತ್ತಲು ಹರಸಾಹಸ ಪಡ್ತಿದ್ದಾರೆ. ಘಟನಾ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 42 ವರ್ಷದ ಜಗದೀಶ್ ಮೃತ ದುರ್ದೈವಿ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಾಳಶಾಸನ ಗ್ರಾಮದ ನಿವಾಸಿ. ತಮ್ಮ ಕುಟುಂಬ, ಪರಿವಾರದೊಂದಿಗೆ ಜಗದೀಶ್ ಜಾತ್ರೆಗೆ ಆಗಮಿಸಿದ್ದರು. ಭಕ್ತರಿಗೆ ಅನ್ನದಾನ ಮಾಡಲು ರಾತ್ರಿ ಅಡುಗೆ ತಯಾರು ಮಾಡಲಾಗುತ್ತಿತ್ತು. ಆಗ ಬಲ್ಬ್ ಬದಲಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಜಗದೀಶ್ ಸ್ಥಳದಲ್ಲೇ ಅಸುನೀಗಿದ್ದಾರೆ. ಜಾತ್ರೆಗೆ ಅಡ್ಡಿ ಆಗದಂತೆ ಪೊಲೀಸರು ಶವವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇಂದು ಬೆಳಗ್ಗೆ 5.20ರಿಂದ 6.20ರ ಮಖಾ ನಕ್ಷತ್ರದ ಮೀನ ಲಗ್ನದಲ್ಲಿ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯ್ತು. ಗೌತಮ, ಪಾರ್ವತಿದೇವಿ, ಗಣಪತಿ, ಸುಬ್ರಹ್ಮಣ್ಯೇಶ್ವರ, ಚಂಡಿಕೇಶ್ವರ ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. 89 ಅಡಿ ಎತ್ತರದ ಅಲಂಕೃತ ಗೌತಮ ರಥ ಶ್ರೀಕಂಠೇಶ್ವರ ಜಾತ್ರೆಯ ಕೇಂದ್ರ ಬಿಂದು. 100 ಟನ್ ತೂಕದ ರಥ ಎಳೆಯಲು 240 ಅಡಿ ಉದ್ದದ ಹಗ್ಗ ಬಳಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ರಥೋತ್ಸವದಲ್ಲಿ ಭಾಗವಹಿಸುವ 112 ಸಿಬ್ಬಂದಿಗೆ ಮುಜರಾಯಿ ಇಲಾಖೆಯಿಂದ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.

ಭದ್ರತೆಗಾಗಿ ಜಿಲ್ಲಾ ಪೊಲೀಸರು ವಿಶೇಷ ಕ್ರಮ ವಹಿಸಿದ್ದು, ತಾತ್ಕಾಲಿಕವಾಗಿ 35 ಸಿಸಿ ಕ್ಯಾಮೆರಾ, 7 ಮೊಬೈಲ್ ವಾಚ್ ಟವರ್ ಅಳವಡಿಸಲಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement