– ವಕ್ಫ್ ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಅರ್ಜಿ; ಏ.15ರಂದು ವಿಚಾರಣೆ
– ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ ಕೇಂದ್ರ
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ (Waqf Bill) ಇದೀಗ ಕಾನೂನು ಸ್ವರೂಪ ಪಡೆದಿದೆ. ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ತಕ್ಷಣದಿಂದ ಹೊಸ ವಕ್ಫ್ ಕಾಯ್ದೆ ಜಾರಿಗೆ ಬರಲಿದೆ. ಕಳೆದ ವಾರವಷ್ಟೇ ಸಂಸತ್‌ನಲ್ಲಿ ಅಂಗೀಕಾರಗೊಂಡಿದ್ದ ಮಸೂದೆಗೆ ಮೂರು ದಿನಗಳ ಹಿಂದೆಯಷ್ಟೇ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು.
ವಕ್ಫ್ ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಅರ್ಜಿ
ವಕ್ಫ್ ತಿದ್ದುಪಡಿ ಕಾಯ್ದೆ, 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 15 ರಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಈ ಮಧ್ಯೆ, ಕೇಂದ್ರ ಸರ್ಕಾರ ಮಂಗಳವಾರ (ಇಂದು) ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕೇವಿಯಟ್ ಸಲ್ಲಿಸಿದ್ದು, ವಕ್ಫ್ ಕಾಯ್ದೆ ವಿಚಾರದಲ್ಲಿ ಯಾವುದೇ ಆದೇಶ ಹೊರಡಿಸುವ ಮುನ್ನ ವಿಚಾರಣೆ ನಡೆಸದಂತೆ ಕೋರಿದೆ.
ಕೇವಿಯಟ್ ಸಲ್ಲಿಸೋದು ಏಕೆ?
ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಯಾವುದೇ ಅರ್ಜಿಯ ಬಗ್ಗೆ ವಿಚಾರಣೆ ಮಾಡದೇ ಯಾವುದೇ ಆದೇಶ ಹೊರಡಿಸದಂತೆ ನೋಡಿಕೊಳ್ಳಲು ಕೇವಿಯಟ್ ಅನ್ನು ಸಲ್ಲಿಸಲಾಗುತ್ತದೆ.