ಹುಬ್ಬಳ್ಳಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವು ನಿಶ್ಚಿತ. ರಾಜ್ಯದಲ್ಲಿ ಸರ್ಕಾರದ ನಡೆ ವಿರುದ್ಧ ರಾಜ್ಯದ ಜನ ನಿರಾಶರಾಗಿದ್ದಾರೆ, ಹೀಗಾಗಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಚಿವ ಬೈರತಿ ಬಸವರಾಜ್ ( Byrati Basavaraj) ಹೇಳಿದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ (BJP) ಎಂಟು ಜನ ಶಾಸಕರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿ, ಸುಮ್ಮನೇ ಈ ರೀತಿ ಸುಳ್ಳು ಹೇಳಿಕೆ ನೀಡೋದು ಸರಿಯಲ್ಲ. ಅವರು ನಮ್ಮ ಪಕ್ಷದಿಂದ ಒಂದು ಕಾಲು ಹೊರಗಿಟ್ಟು ಈ ರೀತಿ ಮಾತನಾಡುತ್ತಿದ್ದಾರೆ. ಯಾವ್ಯಾವ ಶಾಸಕರು ಹೋಗುತ್ತಾರೆ ಅವರ ಹೆಸರು ಹೇಳಬೇಕಲ್ವಾ. ಎಸ್.ಟಿ.ಸೋಮಶೇಖರ್ ಅದನ್ನ ಸ್ಪಷ್ಟಪಡಿಸಲಿ, ನಮ್ಮ ಮೇಲೆ ಅಂತಹ ಅಭಿಪ್ರಾಯಗಳು ಇದ್ದರೆ ನಾವು ಯಾಕೆ ನಾಮಪತ್ರ ಸಲ್ಲಿಸುವುದಕ್ಕೆ ಬರುತ್ತಿದ್ದೆವು ಎಂದರು. ಇದನ್ನೂ ಓದಿ: ಸಂಡೂರು ಉಪಚುನಾವಣೆ: ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ
ಬಿಜೆಪಿ ಕುಟುಂಬ ರಾಜಕಾರಣ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಯಾವುದೇ ಕುಟುಂಬ ರಾಜಕಾರಣ ಪ್ರಶ್ನೆಯೇ ಇಲ್ಲ. ಬೊಮ್ಮಾಯಿಯವರು ಅವರ ಮಗನಿಗೆ ಟಿಕೆಟ್ ಬೇಡ ಎಂದಿದ್ದರು. ರಾಷ್ಟ್ರೀಯ ನಾಯಕರೇ ನಿರ್ಧಾರ ಮಾಡಿದಾಗ ಬೇಡ ಎನ್ನಲು ಸಾಧ್ಯವಿಲ್ಲ. ಹಿರಿಯ ನಾಯಕರ ನಿರ್ಧಾರವನ್ನ ತಿರಸ್ಕಾರ ಮಾಡುವುದು ಸಮಂಜಸವಲ್ಲ. ಈ ನಿಟ್ಟಿನಲ್ಲಿ ಪಕ್ಷದ ಹಿರಿಯ ನಾಯಕರ ನಿರ್ಧಾರದ ಮೇಲೆ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೇಲೇಕೇರಿ ಅದಿರು ನಾಪತ್ತೆ ಕೇಸ್ – ನಾಳೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಶಿಕ್ಷೆಯ ಪ್ರಮಾಣ ಪ್ರಕಟ