ಚಿತ್ರದುರ್ಗ: ಎಸ್‍ಡಿಎಂಸಿ ಸದಸ್ಯ ಹಾಗೂ ಸಹ-ಶಿಕ್ಷಕರ ಕಿರುಕುಳ ಆರೋಪದಿಂದ ಮನನೊಂದ ಶಿಕ್ಷಕಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದ ಅಕ್ಕಮಹಾದೇವಿ ಬಡಾವಣೆಯಲ್ಲಿ ನಡೆದಿದೆ.
ದೇವಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯಶಿಕ್ಷಕಿ ತಿಪ್ಪೀರಮ್ಮ(46) ನೇಣಿಗೆ ಶರಣಾದ ದುರ್ದೈವಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ವಿತರಿಸುವ ಶೂ ಖರೀದಿಯಲ್ಲಿ ತಿಪ್ಪೀರಮ್ಮ ಅವ್ಯವಹಾರ ಎಸಗಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ಕುರಿತು ಇಲಾಖಾ ಅಧಿಕಾರಿಗಳು ತನಿಖೆಯನ್ನು ನಡೆಸಿದ್ದರು. ತನಿಖೆ ಬಳಿಕ ಮುಖ್ಯಶಿಕ್ಷಕಿ ತಿಪ್ಪಿರಮ್ಮರನ್ನು ಚನ್ನಮ್ಮನ ಹಳ್ಳಿ ಶಾಲೆಗೆ ವರ್ಗಾವಣೆ ಮಾಡಿದ್ದರು. ಇದರಿಂದ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಎಸ್‍ಡಿಎಂಸಿ ಸದಸ್ಯ ಲಿಂಗಪ್ಪ, ಸಹಶಿಕ್ಷಕಿ ಸವಿತಾ, ಶಾಂತಮ್ಮ ಹಾಗೂ ಸಹಶಿಕ್ಷಕ ರಮೇಶ್ ಪ್ರತಿನಿತ್ಯ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬದ ಸದಸ್ಯರೊಂದಿಗೆ ತಿಪ್ಪೀರಮ್ಮ ಅಳಲು ತೋಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.