
ವಿಜಯಪುರ: ಯುವಕನ ಜೊತೆ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಶ್ವೇಶ್ವರ ನಗರದ ಮನೆಯಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಸಂಜು ಹುಲ್ಲೂರ ಯುವಕನ ಜೊತೆಗೆ ವಾಸವಿದ್ದಳು. ಆದರೆ ಇಂದು ಅಚಾನಕ್ಕಾಗಿ ವಿದ್ಯಾರ್ಥಿನಿ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿದ್ಯಾರ್ಥಿನಿ ಜೊತೆಗಿದ್ದ ಸಂಜು ವಿಜಯಪುರ ನಗರದ ಹೊರ ಭಾಗದ ಯೋಗಾಪುರ ಕಾಲೋನಿಯ ಯುವಕ ಎಂದು ತನಿಖೆ ವೇಳೆ ತಿಳಿದುಬಂದಿದೆ. ಸಂಜುನನ್ನು ಈ ವಿದ್ಯಾರ್ಥಿನಿ ಪ್ರೀತಿ ಮಾಡುತ್ತಿದ್ದಳು ಎಂಬ ಶಂಕೆಯೂ ಸಹ ವ್ಯಕ್ತವಾಗುತ್ತಿದೆ. ಅದು ಅಲ್ಲದೇ ಸಂಜು ಹುಲ್ಲೂರ ವಿದ್ಯಾರ್ಥಿನಿಯನ್ನು ದೈಹಿಕವಾಗಿ ಬಳಸಿಕೊಂಡು ಕೊಲೆಗೈದು ನೇಣಿಗೆ ಹಾಕಿದ್ದಾನೆಂದು ವಿದ್ಯಾರ್ಥಿನಿ ಕುಟುಂಬ ಆರೋಪ ಮಾಡುತ್ತಿದೆ. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು
ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ಸಂಜುನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಜಾರಾ ಸಮುದಾಯದವರು ನಗರದ ಗಾಂಧಿಚೌಕ್ ಬಳಿ ವಿದ್ಯಾರ್ಥಿನಿ ಸಾವನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದರು.