12 ಮಹಿಳೆಯರು ಕಟ್ಟಿದ ಡೈರಿಯ ಯಶೋಗಾಥೆ – ಗದಗ ಜಿಲ್ಲೆಗೆ ಮಾದರಿ ಡೋಣಿ ಮಹಿಳಾ ಸಂಘ

Public TV
2 Min Read
The success story of a milk diary built by 12 women Doni Womens Association Gadag 1

– 2010 ರಲ್ಲಿ ಆರಂಭ, 485ಕ್ಕೆ ಏರಿದ ಸದಸ್ಯರ ಸಂಖ್ಯೆ
– ಮೊದಲು 25 ಲೀ. ಈಗ 1 ಸಾವಿರ ಲೀ. ಹಾಲು ಸಂಗ್ರಹ

ಗದಗ: ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳದೇ ಮನಸ್ಸು ಮಾಡಿದರೆ ಏನನ್ನಾದರೂ ಸಾಧನೆ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಡೋಣಿ ಗ್ರಾಮದ ಮಹಿಳೆಯರು. 12 ರೈತ ಮಹಿಳೆಯರು ಕಟ್ಟಿದ ಡೈರಿ (Milk Dairy) ಇದೀಗ ಬೆಳೆದು ಹೆಮ್ಮೆಯ ಹೆಮ್ಮರವಾಗಿದೆ.

ಹೌದು ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ (Doni) ಗ್ರಾಮದ 12 ರೈತ ಮಹಿಳೆಯರು ತಾವು ಸ್ವಾವಲಂಬನೆಯಿಂದ ಬದುಕಲು  14 ವರ್ಷಗಳ ಹಿಂದೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹುಟ್ಟುಹಾಕಿದ್ದರು. 2010ರಲ್ಲಿ ದಿನಕ್ಕೆ 25 ಲೀಟರ್ ಹಾಲು ಸಂಗ್ರಹದಿಂದ ಆರಂಭಗೊಂಡ ಸಂಘದಲ್ಲಿ ಈಗ ಸುಮಾರು ಒಂದು ಸಾವಿರ ಲೀಟರ್‌ವರೆಗೆ ಹಾಲು ಸಂಗ್ರಹವಾಗುತ್ತಿದೆ. ಇದನ್ನೂ ಓದಿ: ಮಂಗಳೂರು ನಗರದಲ್ಲಿ ತಲೆಯೆತ್ತಿದೆ ಸ್ಮಾರ್ಟ್ ಮಾರ್ಕೆಟ್‌ಗಳು – ಉದ್ಘಾಟನೆಯಾಗದೇ ಪಾಳುಬಿದ್ದ ಹೊಸ ಕಟ್ಟಡಗಳು

The success story of a milk diary built by 12 women Doni Womens Association Gadag 2

ಹಾಲು ಕರೆಯುವುದರಿಂದ ಹಿಡಿದು ಸರದಿ ಸಾಲಿನಲ್ಲಿ ನಿಂತು ಹಾಲು ಹಾಕುವವರು, ಡೈರಿಯಲ್ಲಿ ಕೆಲಸ ಮಾಡುವವರು ಮಹಿಳೆಯರೇ ಇದ್ದಾರೆ. ಸಂಘಕ್ಕೆ ಈಗ 485 ಮಂದಿ ಹಾಲು ಹಾಕುವ ಸದಸ್ಯರಿದ್ದಾರೆ. ಕಳೆದ 14 ವರ್ಷಗಳಿಂದ ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿ, ಖಜಾಂಚಿ ಯಾರೂ ಬದಲಾಗಿಲ್ಲ. ಅವರಲ್ಲಿ ಒಗ್ಗಟ್ಟು ಹಾಗೂ ಸಾಕಷ್ಟು ಹೊಂದಾಣಿಕೆ ಇರುವುದರಿಂದ ಆರಂಭದಿಂದ ಇದ್ದವರೇ ಮುಂದುವರೆಯುತ್ತಿದ್ದಾರೆ.

ಸಂಘದ ಎಲ್ಲ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ ಹಾಲು ಒಕ್ಕೂಟದಿಂದ, ತರಬೇತಿ, ನಬಾರ್ಡ್ ಬ್ಯಾಂಕ್, ಕೆವಿಜಿ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿದೆ. ಆಯ್ದ ಸಂಘದ ಸದಸ್ಯರಿಗೆ ಹಸು, ಎಮ್ಮೆಯನ್ನು ಸರ್ಕಾರ ಮತ್ತು ಸಂಘದ ಅನುದಾನದಲ್ಲಿ ಕೊಡಿಸುತ್ತಾರೆ. ಸಂಘದ ಸದಸ್ಯರು ಹಾಗೂ ಜಾನುವಾರುಗಳಿಗೆ ಇವರೇ ವಿಮೆ ಮಾಡಿಸುತ್ತಾರೆ. ಕಳೆದ 14 ವರ್ಷದಲ್ಲಿ 15 ಲಕ್ಷ ರೂ. ಹೆಚ್ಚು ಪರಿಹಾರ ಕೊಡಿಸಿದ್ದಾರೆ. ಇವರ ಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಮತ್ತು ಬ್ಯಾಂಕ್‌ಗಳು ಹೈನುಗಾರಿಕೆ, ಹಾಲು ಉತ್ಪಾದನೆಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂಬ ಬೇಡಿಕೆ ಈ ಮಹಿಳೆಯರದ್ದಾಗಿದೆ. ಸಂಘದ ಎಲ್ಲ ಹಣಕಾಸು ವ್ಯವಹಾರಗಳನ್ನು ಬ್ಯಾಂಕ್ ಖಾತೆ ಮೂಲಕ ನಡೆಸುತ್ತಿದ್ದು ಮಹಿಳೆಯರೇ ನೋಡಿಕೊಳ್ಳುತ್ತಿರುವುದು ವಿಶೇಷ.

Share This Article