ಚಂದ್ರಯಾನ-3 (Chandrayaan 3) ಚಂದ್ರನ ಮೇಲೆ ಲ್ಯಾಂಡಿಂಗ್ ನಡೆಸಿದ ಬಳಿಕ, ಪ್ರಜ್ಞಾನ್ ರೋವರ್ (Pragyan Rover), ವಿಕ್ರಮ್ ಲ್ಯಾಂಡರ್‌ನಿಂದ (Vikram Lander) ರಾಂಪ್ ಮೂಲಕ ಹೊರಗೆ ಸಾಗಿ, ಚಂದ್ರನ (Moon) ಮೇಲ್ಮೈಯಲ್ಲಿ ನಡೆದಾಡಿ, ವೈಜ್ಞಾನಿಕ ಮಾಹಿತಿಗಳನ್ನು ಕಲೆಹಾಕುವ ಕಾರ್ಯ ಆರಂಭಿಸಿದೆ. ಈ ಯಶಸ್ಸು ಬಾಹ್ಯಾಕಾಶ ಸ್ಪರ್ಧೆಯಲ್ಲಿ ಭಾರತ ಎಲ್ಲ ರಾಷ್ಟ್ರಗಳನ್ನು ಹಿಂದಿಕ್ಕುವಂತೆ ಮಾಡಿರುವುದು ಮಾತ್ರವಲ್ಲದೆ, ಭಾರತದ ಆರ್ಥಿಕತೆಗೂ ಭಾರೀ ಉತ್ತೇಜನ ನೀಡಲಿದೆ.
ಮುಂದಿನ ತಿಂಗಳು ನಡೆಯಲಿರುವ ಜಿ20 (G20) ಸಮಾವೇಶದ ಆಯೋಜಕನಾಗಿರುವ ಭಾರತ (India) ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸುವ ಮೂಲಕ ಈ ಸಾಧನೆ ಮಾಡಿರುವ ಅಮೆರಿಕಾ, ಸೋವಿಯತ್ ಒಕ್ಕೂಟ ಹಾಗೂ ಚೀನಾಗಳ ಸಾಲಿಗೆ ಸೇರಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಪಾತ್ರವಾಗಿದೆ.
Advertisement
Advertisement
ಒಂದು ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇನಾದರೂ (PM Narendra Modi) ಜಿ20 ಗಮನವನ್ನು ಪ್ರಸ್ತುತ ನಡೆಯುತ್ತಿರುವ ಉಕ್ರೇನ್ ಯುದ್ಧದಿಂದ ಬದಲಿಸಲು ಸಾಧ್ಯವಾದರೆ, ಅವರು ಈ ಸಮಾರಂಭವನ್ನು ಭಾರತದ ಹೆಚ್ಚುತ್ತಿರುವ ಜಾಗತಿಕ ರಾಜಕಾರಣದ ಪ್ರಭಾವವನ್ನು ಪ್ರತಿಪಾದಿಸಲು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಸ್ಪೇಸ್ ಫೌಂಡೇಷನ್ ಸಂಸ್ಥೆ ತನ್ನ ವಾರ್ಷಿಕ ವರದಿಯಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆ ಮೌಲ್ಯ 2023ರ ಎರಡನೆಯ ತ್ರೈಮಾಸಿಕದ ವೇಳೆಗೆ 546 ಬಿಲಿಯನ್ ಡಾಲರ್ ತಲುಪಿದೆ ಎಂದು ತಿಳಿಸಿದೆ. ಇದಕ್ಕೆ ಹೋಲಿಸಿದರೆ ಭಾರತದ ಬಾಹ್ಯಾಕಾಶ ಆರ್ಥಿಕತೆ 2025ರ ವೇಳೆಗೆ 13 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಗಳಿವೆ. ಉಪಗ್ರಹ ಇಮೇಜಿಂಗ್, ಪೊಸಿಷನಿಂಗ್ ಮತ್ತು ನ್ಯಾವಿಗೇಶನ್‌ಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗುತ್ತಿದ್ದು, ಜಗತ್ತು ಈಗಾಗಲೇ ಬಾಹ್ಯಾಕಾಶ ಆರ್ಥಿಕತೆಯ ಹೆಚ್ಚಳವನ್ನು ಗಮನಿಸುತ್ತಿದೆ. ಇದನ್ನೂ ಓದಿ: ಪ್ರಜ್ಞಾನ್ ರೋವರ್‌ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ – ಇನ್ನು 10 ದಿನ ಮಾತ್ರ ಬಾಕಿ
Advertisement
Advertisement
ಈಗಾಗಲೇ ಬಾಹ್ಯಾಕಾಶ ಉಡಾವಣೆಗಳನ್ನು ಖಾಸಗೀಕರಣಗೊಳಿಸಿರುವ ಭಾರತ, ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ವಲಯದಲ್ಲಿ ವಿದೇಶಿ ಹೂಡಿಕೆಗಳನ್ನು ಹೊಂದಿ, ತನ್ನ ಕಡಿಮೆ ವೆಚ್ಚದಲ್ಲಿ ಉಡಾವಣೆ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿ, ಆ ಮೂಲಕ ತನ್ನ ಜಾಗತಿಕ ಉಡಾವಣಾ ಮಾರುಕಟ್ಟೆಯನ್ನು ಐದು ಪಟ್ಟು ಹೆಚ್ಚಿಸುವ ಗುರಿ ಹೊಂದಿದೆ.
ಬಾಹ್ಯಾಕಾಶ (Space) ಪ್ರಯಾಣ ವೆಚ್ಚವನ್ನು ಕಡಿಮೆಗೊಳಿಸುವ, ಮಂಗಳ ಗ್ರಹದಲ್ಲಿ ಮಾನವ ವಾಸ್ತವ್ಯ ಸಾಧಿಸುವ ಗುರಿ ಹೊಂದಿರುವ, ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಥಾಪಕ ಇಲಾನ್ ಮಸ್ಕ್ ಅವರು ಭಾರತದ ಸಾಧನೆಯನ್ನು ಶ್ಲಾಘಿಸಿದ್ದಾರೆ. “ಬಾಹ್ಯಾಕಾಶ ಆಸಕ್ತನಾಗಿ, ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವುದು ನನಗೆ ಅಪಾರ ಸಂತಸ ನೀಡಿದೆ. ಭಾರತ ಒಂದು ಒಳ್ಳೆಯ ರಾಷ್ಟ್ರವಾಗಿದ್ದು, ಉತ್ತಮ ತಂತ್ರಜ್ಞಾನ ಮತ್ತು ನವೋದ್ಯಮಿಗಳನ್ನು ಹೊಂದಿದೆ” ಎಂದು ಮಸ್ಕ್ ತನ್ನ ಮಾಲಿಕತ್ವದ ಸಾಮಾಜಿಕ ಜಾಲತಾಣ ಎಕ್ಸ್ (ಈ ಮೊದಲು ಟ್ವಿಟರ್) ನಲ್ಲಿ ಬರೆದಿದ್ದಾರೆ.
ಅಭಿವೃದ್ಧಿಗೆ ಉತ್ತೇಜನ
ಆರಂಭಿಕ ಬಾಹ್ಯಾಕಾಶ ಅನ್ವೇಷಣೆಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನೀರಿನ ಶುದ್ಧೀಕರಣಗೊಳಿಸಿ, ಮರುಬಳಕೆ ನಡೆಸುವುದು (ಬಾಹ್ಯಾಕಾಶದಲ್ಲಿ ನೀರನ್ನು ದ್ರವರೂಪದ ಚಿನ್ನ ಎನ್ನಲಾಗುತ್ತದೆ), ಸ್ಟಾರ್ ಲಿಂಕ್ ಮೂಲಕ ಶಿಕ್ಷಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗದ ಅಂತರ್ಜಾಲ, ಸೌರಶಕ್ತಿ ಉತ್ಪಾದನೆ ಮತ್ತು ಆರೋಗ್ಯ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸಲಾಗಿರುವುದು ಸಾಬೀತಾಗಿದೆ. ಇನ್ನು ಚಂದ್ರನ ಮೇಲ್ಮೈಯಲ್ಲಿ ಮಂಜುಗಡ್ಡೆಯ ರೂಪದಲ್ಲಿರುವ ನೀರನ್ನು ಪ್ರಗ್ಯಾನ್ ರೋವರ್ ಪತ್ತೆಹಚ್ಚಿದರೆ, ಅದು ಭವಿಷ್ಯದಲ್ಲಿ ಮಾನವರಿಗೆ ನೂತನ ನೆಲೆ ಸ್ಥಾಪಿಸಲು, ಭವಿಷ್ಯದ ಯೋಜನೆಗಳಿಗೆ ಇಂಧನ, ಆಮ್ಲಜನಕ, ಹಾಗೂ ಕುಡಿಯುವ ನೀರು ಪೂರೈಸಲು ಸಹಾಯಕವಾಗಲಿದೆ.
ಈ ಹಿನ್ನೆಲೆಯಲ್ಲಿ, ಚಂದ್ರಯಾನ-3 ಯೋಜನೆಯ ಯಶಸ್ಸು ಚಂದ್ರನ ಮೇಲೆ ಶಾಶ್ವತ ನೆಲೆ ಸ್ಥಾಪಿಸುವ ಭಾರತದ ಚಿಂತನೆಗೂ ಪುಷ್ಟಿ ನೀಡಿದೆ. ಇಸ್ರೋ ಚಂದ್ರಯಾನ-3 ಯೋಜನೆಗೆ ಕೇವಲ 74 ಮಿಲಿಯನ್ ಡಾಲರ್ ಖರ್ಚು ಮಾಡಿದ್ದು, ಇದಕ್ಕೆ ಹೋಲಿಸಿದರೆ ಅಮೆರಿಕಾದ ಆರ್ಟೆಮಿಸ್ ಯೋಜನೆ 2025ರ ತನಕ 93 ಬಿಲಿಯನ್ ಖರ್ಚು ಮಾಡಲಿದೆ. ಆರ್ಟೆಮಿಸ್ ಅಕಾರ್ಡ್ಸ್‌ಗೆ ಭಾರತವೂ ಜುಲೈ 2023ರಲ್ಲಿ ಸಹಿ ಹಾಕಿದೆ. 2021ರಲ್ಲಿ, ಚೀನಾ ಮತ್ತು ರಷ್ಯಾಗಳು ತಾವು ಜಂಟಿಯಾಗಿ ಚಂದ್ರನ ಮೇಲೆ ನೆಲೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದು, ಇತರ ರಾಷ್ಟ್ರಗಳನ್ನೂ ತಮ್ಮ ಇಂಟರ್ನ್ಯಾಷನಲ್ ಲೂನಾರ್ ರಿಸರ್ಚ್ ಸ್ಟೇಷನ್ ಯೋಜನೆಯ ಭಾಗವಾಗುವಂತೆ ಕರೆ ನೀಡಿವೆ. ಇದು ಆರ್ಟೆಮಿಸ್ ಯೋಜನೆಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ.
ವಾಣಿಜ್ಯ ವಲಯದಿಂದಲೂ ಶ್ಲಾಘನೆ
ಈಗಾಗಲೇ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಪೂರೈಕೆ ಸರಪಳಿಗೆ ಹೊಸ ಮೂಲಗಳನ್ನು ಹುಡುಕಾಡುತ್ತಿದ್ದು, ಚಂದ್ರನ ಮೇಲೆ ಸುರಕ್ಷಿತ ಸಾಫ್ಟ್ ಲ್ಯಾಂಡಿಂಗ್ ನಡೆಸಿರುವುದು ಭಾರತದ ಆಶಾ ಭಾವನೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಭಾರತದ ಉದ್ಯಮಗಳು ಮತ್ತು ವ್ಯಾಪಾರ ಸಂಘಟನೆಗಳು ಭಾರತದ ಈ ಸಾಧನೆಯನ್ನು ಶ್ಲಾಘಿಸಿವೆ.
“ಇಸ್ರೋ ದೀರ್ಘಕಾಲದಿಂದಲೂ ಬಾಹ್ಯಾಕಾಶ ಯೋಜನೆಗಳ ಯಶಸ್ಸಿನೊಡನೆ ನಮಗೆ ಸಂಭ್ರಮಿಸಲು ಹಲವು ಕಾರಣಗಳನ್ನು ನೀಡಿದೆ. ಆದರೆ ಈ ಯೋಜನೆ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ” ಎಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷರಾದ ಶುಭ್ರಕಾಂತ್ ಪಾಂಡ ಹೇಳಿದ್ದಾರೆ.
ಭಾರತ್ ವೆಬ್3 ಅಸೋಸಿಯೇಷನ್ ಅಧ್ಯಕ್ಷರಾದ ದಿಲೀಪ್ ಚಿನಾಯ್ ಅವರು ಈ ಬೃಹತ್ ಹೆಜ್ಜೆ ರಾಷ್ಟ್ರವನ್ನು ಒಗ್ಗೂಡಿಸಿದ್ದು, ಜನರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದೆ ಎಂದಿದ್ದಾರೆ. ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಆಫ್ ಇಂಡಿಯಾದ ಸೆಕ್ರೆಟರಿ ಜನರಲ್ ದೀಪಕ್ ಸೂದ್ ಅವರು, ಭಾರತ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬುನಾದಿಯ ಮೇಲೆ ಎಲ್ಲ ಅಡೆತಡೆಗಳನ್ನು ಮೀರಿ ಸಾಗುತ್ತಿದೆ ಎಂದಿದ್ದಾರೆ.
ಸೆಮಿಕಂಡಕ್ಟರ್ ಉದ್ಯಮದ ಅನುಭವಿ ಸತ್ಯ ಗುಪ್ತ ಅವರು ಚಂದ್ರಯಾನ-3 ಯೋಜನೆ ಸ್ವದೇಶೀ ಆವಿಷ್ಕಾರಗಳನ್ನು ಉತ್ತೇಜಿಸಲು ಧನಾತ್ಮಕ ಪರಿಣಾಮ ಬೀರಲಿದೆ ಎಂದಿದ್ದಾರೆ.
ಅಭಿವೃದ್ಧಿಗೆ ವೇಗೋತ್ಕರ್ಷ
ಈಗ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಪೂರೈಕೆ ಜಾಲಕ್ಕೆ ಹೊಸ ಮೂಲಗಳನ್ನು ಹುಡುಕುತ್ತಿರುವಾಗ, ಯಶಸ್ವಿ ಚಂದ್ರನ ಮೇಲಿನ ಲ್ಯಾಂಡಿಂಗ್ ಜಾಗತಿಕ ಉತ್ಪಾದನಾ ಕೇಂದ್ರವಾಗಬೇಕೆಂಬ ಭಾರತದ ಬಯಕೆಗೆ ಇನ್ನಷ್ಟು ಶಕ್ತಿ ತುಂಬಲಿದೆ.
ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
Web Stories