– ಸಿಎಂ ಅವರದ್ದೂ ಹನಿಟ್ರ‍್ಯಾಪ್ ಆಗಿರುವ ಅನುಮಾನ ಇದೆ ಎಂದ ಪರಿಷತ್ ವಿಪಕ್ಷ ನಾಯಕ
ರಾಮನಗರ: ರಾಜ್ಯ ರಾಜಕಾರಣದ ಪರಿಸ್ಥಿತಿ ಹದಗೆಟ್ಟಿದೆ. ಮಹಾನಗರ ಪಾಲಿಕೆಯ ಗಾರ್ಬೇಜ್ ರೀತಿ ಸರ್ಕಾರದ ಆಡಳಿತ ಇದೆ. ಇಂತಹ ಕೆಟ್ಟ ಸರ್ಕಾರವನ್ನ ನಾವು ಎಂದೂ ನೋಡಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
ರಾಮನಗರದಲ್ಲಿ (Ramanagara) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದಲ್ಲಿ ಅಭಿವೃದ್ಧಿ ಸಂಪೂರ್ಣ ಶೂನ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿ ಬಗ್ಗೆ ಚರ್ಚೆ ಆಗದೇ ಹಣ ಹೊಡೆಯೋದು, ಹನಿಟ್ರ‍್ಯಾಪ್, ಪೋನ್ ಟ್ರ‍್ಯಾಪ್ ಬಗ್ಗೆ ಚರ್ಚೆ ಆಗುತ್ತಿದೆ. ಇಲ್ಲಿಯ ತನಕ ಸರ್ಕಾರ ಇರಲೇ ಬಾರದಿತ್ತು. ಹನಿಟ್ರ‍್ಯಾಪ್‌ನಲ್ಲಿ ಬಿಜೆಪಿಯ (BJP) ಯಾವ ನಾಯಕರೂ ಇಲ್ಲ. ಇದ್ದಿದ್ದರೇ ಸರ್ಕಾರ ಇಷ್ಟೊತ್ತಿಗೆ ತನಿಖೆಗೆ ಮುಂದಾಗುತ್ತಿತ್ತು ಎಂದರು. ಇದನ್ನೂ ಓದಿ: ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್
ಈಗ ಕಾಂಗ್ರೆಸ್ ನಾಯಕರೇ ಕಾಂಗ್ರೆಸ್‌ನವರ ಹನಿಟ್ರ‍್ಯಾಪ್ (Honey Trap) ಮಾಡುತ್ತಿದ್ದಾರೆ. ತಮ್ಮ ವಿರುದ್ಧ ಮಾತನಾಡುವವರ ವಿರುದ್ಧ ಹನಿಟ್ರ‍್ಯಾಪ್ ಮಾಡುವ ಕೆಲಸ ಆಗುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಮಾತೇ ಆಡುತ್ತಿಲ್ಲ. ತನಿಖೆ ಮಾಡುತ್ತೇವೆ ಅನ್ನೋದು ಬಿಟ್ಟರೆ ಇನ್ನೇನು ಹೇಳಿಲ್ಲ. ಸಿಎಂ ಸಿದ್ದರಾಮಯ್ಯರದ್ದೂ ಹನಿಟ್ರ‍್ಯಾಪ್ ಆಗಿರುವ ಅನುಮಾನ ಇದೆ. ತನಿಖೆ ಆದರೆ ಇವರದ್ದೂ ಎಲ್ಲಿ ಆಚೆ ಬರುತ್ತೋ ಎಂಬ ಭಯ. ಅದಕ್ಕಾಗಿ ಸಿಎಂ ಈ ಬಗ್ಗೆ ತನಿಖೆಗೆ ಸೂಚಿಸುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ
ದಲಿತರ ಹಣವನ್ನ ಸರ್ಕಾರ ತಿಂದು ಹಾಕುತ್ತಿದೆ. ದಲಿತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದ್ದರೂ ಕಾಂಗ್ರೆಸ್ ದಲಿತ ಸಚಿವರು, ಶಾಸಕರು ಬಾಯಿ ಬಿಡುತ್ತಿಲ್ಲ. ಇಂತಹ ಗುಲಾಮಗಿರಿಯನ್ನ ನಾನು ಎಲ್ಲಿಯೂ ನೋಡಿಲ್ಲ. ದಲಿತರ ಹಣ, ದಲಿತರಿಗೆ ಮೀಸಲಾಗಿ ಇಡಬೇಕು. ಗ್ಯಾರಂಟಿಗಾಗಿ ದಲಿತರ ಹಣ ಬಳಸಿಕೊಳ್ಳಲಾಗಿದೆ. ಅಲ್ಲದೇ ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ. ಡಿಸಿಎಂ ಡಿಕೆಶಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದಿದ್ದಾರೆ. ಸಂವಿಧಾನ ಬದಲಿಸಿ ಧರ್ಮಾಧಾರಿತ ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಡಿಸಿಎಂ ಆಗಿ ಮುಂದುವರೆಯುವ ನೈತಿಕತೆ ಡಿಕೆಶಿಗೆ ಇಲ್ಲ. ಸಿಎಂ ಸಿದ್ದರಾಮಯ್ಯ ಕೂಡಲೇ ಡಿಕೆಶಿಯನ್ನ (DK Shivakumar) ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಿಂಗ್ಸ್ ಗೆಲುವಿಗೆ ಕನ್ನಡಿಗನ ಕಾಣಿಕೆ – ವೈಶಾಖ್ ವಿಜಯ್ ಯಾರು?
ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಿ ಉಳಿದಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇರಲ್ಲ. ಕರ್ನಾಟಕ ಕಾಮಧೇನು ರೀತಿ ಇದೆ. ಕಾಮಧೇನು ಕೆಚ್ಚಲನ್ನ ಕೊಯ್ಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕೆಂಡಕಾರಿದರು. ಇದನ್ನೂ ಓದಿ: ತಾಯಿ ಚಾಮುಂಡೇಶ್ವರಿಗೆ ಡೈಲಾಗ್‌ನಲ್ಲಿ ಅಪಮಾನ ಆರೋಪ- ರಕ್ಷಕ್ ವಿರುದ್ಧ ಸಿಡಿದೆದ್ದ ಹಿಂದೂ ಸಂಘಟನೆ
ಸಂವಿಧಾನ ಬದಲಾವಣೆ ಬಗ್ಗೆ ಡಿಕೆಶಿ ಮಾತನಾಡಿದರೂ ದಲಿತ ಸಂಘಟನೆಗಳು ಡಿಕೆಶಿ ವಿರುದ್ಧ ಮಾತನಾಡುತ್ತಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ದಲಿತರಿಗೆ ಭಯ ಬಂದುಬಿಟ್ಟಿದೆ. ಕಾಂಗ್ರೆಸ್ ಏನೇ ಮಾತನಾಡಿದರೂ ಸುಮ್ಮನಿರುತ್ತಾರೆ. ಕಾಂಗ್ರೆಸ್ ಸುಡುವ ಮನೆ, ಇದರಲ್ಲಿ ಭವಿಷ್ಯ ಇಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ದಲಿತರು ಹೆದರಿಕೊಂಡು ಬದುಕುತ್ತಿದ್ದಾರೆ. ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಯಾರೇ ಮಾತನಾಡಿದರೂ ಧೈರ್ಯವಾಗಿ ವಿರೋಧಿಸಿ. ಯಾವುದೇ ಪಕ್ಷ ಆದರೂ ಸರಿಯೇ ವಿರೋಧಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: Bengaluru | ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಲೆ – ಪೊಲೀಸರ ಮುಂದೆ ಶರಣಾದ ಪತಿ
ಡಿಕೆಶಿ ರಾಜಕೀಯ ನಿವೃತ್ತಿ ಪಡೆಯೋದನ್ನ ಮಾಡಿ ತೋರಿಸಬೇಕು. ತಿರುಚೋದಕ್ಕೆ ಅದೇನು ಡ್ಯಾಂ ನೀರಲ್ಲ. ನೀವು ಒಂದು ಮಾಧ್ಯಮದಲ್ಲಿ ಕೂತು ಮಾತನಾಡಿದ್ದೀರಿ. ಇಡೀ ದೇಶವೇ ನಿಮ್ಮ ಸಂದರ್ಶನ ನೋಡಿದೆ. ನಾವೇನು ನಿಮ್ಮ ನಾಲಿಗೆಗೆ ಹಗ್ಗಕಟ್ಟಿ ತಿರುಚಿದ್ದೇವಾ? ಡಿಕೆಶಿ ಮುಂದೆ ಸಿಎಂ ಆಗುವ ಅವಕಾಶ ಹೊಂದಿರುವವರು. ಆದರೆ ಇವರ ಮಾತುಗಳನ್ನ ಕೇಳಿದರೆ ಇವರು ಸಿಎಂ ಆಗಬಾರದು. ಅವರು ವಿಚಲಿತರಾಗಿ ಇಂತಹ ಮಾತುಗಳನ್ನ ಆಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮಣ್ಣು ತುಂಬಿದ ಟ್ರ್ಯಾಕ್ಟರ್ ಹರಿದು 5ರ ಮಗು ಸಾವು