– ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಷಣ
– ತನ್ನ ತಪ್ಪುಗಳನ್ನು ಮರೆಮಾಚಿಕೊಳ್ಳಲು ಕೇಂದ್ರವನ್ನು ದೂರುತ್ತಿದೆ!
– ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ಬದಲು ಬೆಂಗಳೂರಿನ ಕೊಳಚೆ ನೀರು
ನವದೆಹಲಿ: ಕರ್ನಾಟಕದಲ್ಲಿ (Karnataka) ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಕಾರ್ಯಗತ ಮಾಡಲಾಗದೇ ರಾಜ್ಯ ಕಾಂಗ್ರೆಸ್ ಸರಕಾರವು ಕೇಂದ್ರ ಸರಕಾರವನ್ನು ಅನಗತ್ಯವಾಗಿ ದೂರುತ್ತಿದೆ. ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು (HD Devegowda) ದೂರಿದ್ದಾರೆ.
ರಾಜ್ಯಸಭೆಯಲ್ಲಿ (Rajya Sabha) ಸೋಮವಾರ ಬಜೆಟ್ ಅಧಿವೇಶನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಈ ಬಗ್ಗೆ ಮಾತನಾಡಿದ ಅವರು, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ. ಅದನ್ನು ಮರೆಮಾಚಿಕೊಳ್ಳಲು ಕೇಂದ್ರವನ್ನು ದೂರುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷದಿಂದ ಆಮೆಗತಿಯಲ್ಲಿ ಸಾಗಿರುವ ಎತ್ತಿನಹೊಳೆ ಯೋಜನೆ ವಿಚಾರವನ್ನು ಕಟುವಾಗಿ ಪ್ರಸ್ತಾಪಿಸಿದರು.
ಎತ್ತಿನಹೊಳೆ ಯೋಜನೆ(Yettinahole Project) ಕಾರ್ಯಗತ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅನೇಕ ತಪ್ಪುಗಳನ್ನು ಮಾಡಿದೆ. ಪರಿಸರಕ್ಕೆ ಧಕ್ಕೆ ತಂದಿದೆ ಹಾಗೂ ಅನೇಕ ಕಾನೂನು, ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪ ಮಾಡಿದ ಮಾಜಿ ಪ್ರಧಾನಿಗಳು ಬಿಜೆಪಿ ಸರಕಾರದ ಅವಧಿಯಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆಗ ಜಗದೀಶ್ ಶೆಟ್ಟರ್ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆಗ ಆ ಯೋಜನೆಯ ಅಂದಾಜು ವೆಚ್ಚ 8 ಸಾವಿರ ಕೋಟಿ ರೂಪಾಯಿ. ಈಗ ಅದು 33 ಸಾವಿರ ಕೋಟಿ ರೂ. ಮೀರಿದೆ. ಈವರೆಗೂ ಒಂದು ಹನಿ ನೀರು ಕೂಡ ಹರಿದಿಲ್ಲ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ತೊಟ್ಟು ನೀರು ಹೋಗಿಲ್ಲ. ಅಷ್ಟೇ ಅಲ್ಲದೆ, ಆ ಯೋಜನೆ ಕಾರ್ಯಕಗತ ಆಗುತ್ತಿರುವ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ಹತ್ತಿರದಲ್ಲಿರುವ ಅರಸೀಕರೆಗೇ ನೀರು ಬಂದಿಲ್ಲ. ಈ ಬಗ್ಗೆ ನಾನು ಪುಟಗಟ್ಟಲೆ ಮಾಹಿತಿ ಇಟ್ಟುಕೊಂಡು ಮಾತನಾಡಬಲ್ಲೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: SS ಮಲ್ಲಿಕಾರ್ಜುನ್ Vs ಜಮೀರ್ – ಟಿಕೆಟ್ ಕೇಳೋದು ನಮ್ಮ ಹಕ್ಕು: ಜಮೀರ್ ಟಾಂಗ್
ನಾನು ನೀರಾವರಿ ಸಚಿವನಾಗಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ನನಗೆ ಈ ಬಗ್ಗೆ ಪೂರ್ಣ ಮಾಹಿತಿ, ಅನುಭವ ಇದೆ. ಮೇಕೆದಾಟು ಯೋಜನೆಗೂ(Mekedatu Project) ರಾಜ್ಯ ಸರಕಾರವೇ ಅಡ್ಡಿಯಾಗಿದೆ. ಈ ಯೋಜನೆ ಕಾರ್ಯಗತವಾಗುವ ಪ್ರಸ್ತಾವಿತ ಜಾಗ ನನಗೆ ಗೊತ್ತು. ಒಂದು ಕಡೆ ಆನೆ ಕಾರಿಡಾರ್, ಮತ್ತೊಂಡೆ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಇದೆ. ಪ್ರತಿದಿನವೂ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷದಿಂದ ಅಮಾಯಕರು ಬಲಿ ಆಗುತ್ತಿದ್ದಾರೆ. ಇದನ್ನು ತಡೆಯಲು ರಾಜ್ಯ ಸರಕಾರಕ್ಕೆ ಆಗಿಲ್ಲ ಎಂದು ಮಾಜಿ ಪ್ರಧಾನಿಗಳು ಆರೋಪಿಸಿದರು.
ಪ್ರತೀ ದಿನವೂ ಈ ಸಂಘರ್ಷ ನಡೆಯುತ್ತಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ತರೀಕೆರೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನೆಗಳು ಬೆಳೆಗಳನ್ನು ನಾಶ ಮಾಡುತ್ತಿವೆ ಹಾಗೂ ತೋಟಗಳಲ್ಲಿ ದುಡಿಮೆ ಮಾಡುವ ರೈತರನ್ನು ಕೊಲ್ಲುತ್ತಿವೆ. ಇದನ್ನು ತಪ್ಪಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿಲ್ಲ ಎಂದು ಅವರು ದೂರಿದರು.
ಯಾವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಕೊಡಬೇಕು ಎಂದು ರಾಜ್ಯ ಸರಕಾರ ಎತ್ತಿಹೊಳೆ ಯೋಜನೆ ಮೂಲಕ ರೂಪಿಸಿತ್ತೋ, ಈಗ ಆ ಯೋಜನೆ ಕಾರ್ಯಗತವಾಗದೇ ಅದೇ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸದೆ ಮಲೀನ ನೀರನ್ನು ಹರಿಸುತ್ತಿದೆ. ಆ ನೀರು ಮಾನವ ಬಳಕೆ ಯೋಗ್ಯವಲ್ಲದ್ದು. ಇದರ ಪರಿಣಾಮವಾಗಿ ಆ ಭಾಗದಲ್ಲಿ ಬೆಳೆಯುತ್ತಿರುವ ಬೆಳೆಗಳು ಹಾಗೂ ತರಕಾರಿಗಳು ವಿಷಕಾರಿಯಾಗುತ್ತಿದ್ದು, ಅವು ಸೇವನೆಗೆ ಯೋಗ್ಯವಲ್ಲದ್ದಾಗಿವೆ. ಜನರ ಜೀವದ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂಬುದನ್ನು ಮಾಜಿ ಪ್ರಧಾನಿಗಳು ಸದನಕ್ಕೆ ಮನವರಿಕೆ ಮಾಡಿಕೊಟ್ಟರು.
ಈ ಎರಡೂ ಜಿಲ್ಲೆಗಳು ಎದುರಿಸುತ್ತಿರುವ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಪ್ರಧಾನಿ ನರೇದ್ರ ಮೋದಿ ಅವರು ಹಾಗೂ ಕೇಂದ್ರದ ಅರಣ್ಯ, ಪರಿಸರ ಜೀವಿಶಾಸ್ತ್ರ ಖಾತೆ ಮಂತ್ರಿಗಳಾದ ಭೂಪೇಂದ್ರ ಯಾದವ್ ಅವರು ಕೂಡಲೇ ಮಧ್ಯಪ್ರವೇಶಿಸಿ ಸರಿಮಾಡಬೇಕು. ಇಲ್ಲವಾದರೆ ಈ ಜಿಲ್ಲೆಯ ಜನರು ವಿಪರೀತ ಬೆಲೆ ತೆರಲಿದ್ದಾರೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಭೂಪೇಂದ್ರ ಯಾದವ್ ಅವರು ಸದನದಲ್ಲಿ ಹಾಜರಿದ್ದು, ಮಾಜಿ ಪ್ರಧಾನಿಗಳು ಎತ್ತಿದ ಪ್ರಶ್ನೆಗಳನ್ನು ಆಲಿಸಿದರು.

