ಕರನಾಡ ಚಕ್ರವರ್ತಿ ಶಿವರಾಜಕುಮಾರ್, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅಭಿನಯದ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಚಿತ್ರದ ಎರಡನೇ ಗೀತೆ ಡೀಗ ಡಿಗರಿ ಅಬುದಾಬಿಯಲ್ಲಿ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಅಬುದಾಬಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಹಾಡು ಬಿಡುಗಡೆಯಾಗಿದೆ. ಶಿವರಾಜಕುಮಾರ್, ಪ್ರಭುದೇವ, ಯೋಗರಾಜ್ ಭಟ್, ರಾಕ್ ಲೈನ್ ವೆಂಕಟೇಶ್ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಅಲ್ಲಿನ ಸಹಸ್ರಾರು ಕನ್ನಡಿಗರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹಾಡು ಬಿಡುಗಡೆಗೂ ಮುನ್ನ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದರು.
Advertisement
ಕರಟಕ ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಒಟ್ಟಿಗೆ ಇಬ್ಬರನ್ನು ಹೆಚ್ಚು ಸಲ ನೋಡಿದಾಗ ಅವರನ್ನು ಕರಟಕ ದಮನಕ ಎನ್ನುತ್ತಾರೆ. ಅಬುದಾಬಿಯಲ್ಲಿ ನಮ್ಮ ಚಿತ್ರಕ್ಕಾಗಿ ನಾನೇ ಬರೆದಿರುವ ಎರಡನೇ ಹಾಡು ಡೀಗ ಡಿಗರಿ ಬಿಡುಗಡೆಯಾಗಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ ಈ ಹಾಡನ್ನು ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಇದು ಉತ್ತರ ಕರ್ನಾಟಕದಲ್ಲಿ ನಡೆಯುವ ಕಥೆ. ಈ ಚಿತ್ರ ನೋಡಿದ ಪ್ರತಿಯೊಬ್ಬ ವ್ಯಕ್ತಿಗೂ ಅವನ ಊರು, ಆ ಊರಿನಲ್ಲಿ ಎಳೆದ ತೇರು ಹಾಗೂ ಅವನು ಯಾವ ನೀರು ಕುಡಿದು ಬೆಳೆದಿದ್ದಾನೋ ಆ ನೀರು ನೆನಪಾಗುತ್ತದೆ ಎಂದರು ನಿರ್ದೇಶಕ ಯೋಗರಾಜ್ ಭಟ್.
Advertisement
Advertisement
ಎಲ್ಲರಿಗೂ ಒಂದು ಊರು ಇರುತ್ತದೆ. ಆ ಊರನ್ನು ಬಿಟ್ಟು ಬಂದ ಮೇಲೆ ಪುನಃ ಹೋದಾಗ ಅಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಆ ವಿಷಯ ಇಟ್ಟುಕೊಂಡು ಸಾಕಷ್ಟು ಮನೋರಂಜನೆಯ ಅಂಶಗಳೊಂದಿಗೆ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಇನ್ನು ಪ್ರಭುದೇವ ಅವರ ಜೊತೆ ಮೊದಲ ಬಾರಿ ನಟಿಸಿರುವುದು ಖುಷಿಯಾಗಿದೆ ಎಂದು ಶಿವರಾಜಕುಮಾರ್ ತಿಳಿಸಿದರು.
Advertisement
ಚಿತ್ರ ಹಾಗೂ ಹಾಡುಗಳು ಚೆನ್ನಾಗಿದೆ. ಶಿವರಾಜಕುಮಾರ್ ಅವರೊಟ್ಟಿಗೆ ನಟಿಸಿರುವುದು ತುಂಬಾ ಸಂತೋಷ ತಂದಿದೆ. ರಾಕ್ ಲೈನ್ ವೆಂಕಟೇಶ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಯೋಗರಾಜ್ ಭಟ್ ಅವರ ನಿರ್ದೇಶನ ಕೂಡ ಉತ್ತಮವಾಗಿದೆ ಎಂದು ಪ್ರಭುದೇವ ತಿಳಿಸಿದರು. ಚಿತ್ರತಂಡದ ಸಹಕಾರದಿಂದ ಕರಟಕ ದಮನಕ ಚೆನ್ನಾಗಿ ಬಂದಿದೆ. ಶಿವರಾತ್ರಿ ಹಬ್ಬಕ್ಕೆ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.
ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಡೀಗ ಡಿಗರಿ ಹಾಡಿಗೆ ಶಿವರಾಜಕುಮಾರ್ ಹಾಗೂ ಪ್ರಭುದೇವ ಅವರು ಒಟ್ಟಿಗೆ ಹೆಜ್ಜೆ ಹಾಕಿದರು.