ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ: ಸಿಎಂ ಕುಮಾರಸ್ವಾಮಿ

Public TV
2 Min Read
HDK DKSHI

ಬೆಂಗಳೂರು: ಶಾಸಕ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸಿಬಿಐ ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಡಿಕೆಶಿ ಆಪ್ತರಾದ 11 ಜನರ ವಿರುದ್ಧ ಸಿಬಿಐ ಸರ್ಚ್ ವಾರೆಂಟ್ ಜಾರಿಯಾಗಿರುವ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದ ಕುರಿತು ಹಲವಾರು ಬಾರಿ ಚರ್ಚೆ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ತಾವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಪ್ರಕರಣವು ಕೇಂದ್ರ ಹಾಗೂ ಡಿಕೆಶಿ ಅವರಿಗೆ ಸಂಬಂಧಿಸಿದ್ದು, ನನ್ನ ವ್ಯಾಪ್ತಿಗೆ ಬರಲ್ಲ. ಅವರು ಸಮರ್ಥರಿದ್ದಾರೆ, ಐಟಿ ದಾಳಿಯನ್ನು ಎದುರಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

DKBROTHERS

ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜಯಗಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಆರ್ ಆರ್ ನಗರದ ಚುನಾವಣೆ ಬಗ್ಗೆ ಏನೂ ತಲೆ ಕೆಡಿಸಿಕೊಂಡಿಲ್ಲ. ನಾವು ಅಥವಾ ಕಾಂಗ್ರೆಸ್ ಗೆಲ್ಲಬೇಕಿತ್ತು. ಅಲ್ಲಿ ಈಗ ಕಾಂಗ್ರೆಸ್ ಗೆದ್ದಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ 11 ಮಂದಿ ಆಪ್ತರ ಮೇಲೆ ಸಿಬಿಐ ಕೋರ್ಟ್ ಸರ್ಚ್ ವಾರೆಂಟ್ ಹೊರಡಿಸಿದೆ. ಆದಾಯ ತೆರಿಗೆ ಪ್ರಕರಣದಲ್ಲಿ ಸಿಬಿಐ 82ನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾಂಜಲಿ ದೇವಿ ಅವರು ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ನಿನ್ನೆ ಕೋರ್ಟ್ ನಲ್ಲಿ ಡಿ.ಕೆ.ಶಿವಕುಮಾರ್ ಹಾಜರಾಗಿದ್ದರು. 11 ಜನರಲ್ಲಿ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಇಬ್ಬರ ಹೆಸರಿಲ್ಲ.

ಸರ್ಚ್ ವಾರೆಂಟ್ ಹೊರಡಿಸಿದ ವಿಚಾರ ತಿಳಿದು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ತುರ್ತು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

DKS HDK

ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಐಟಿ, ಇಡಿ ಮೂಲಕ ನಮ್ಮನ್ನು ಸದೆಬಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಇಲಾಖೆಗಳನ್ನು ದುರಪಯೋಗ ಮಾಡಿಕೊಂಡ ಕೇಂದ್ರ ಸರ್ಕಾರ ನಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ 11 ಜನರ ಮೇಲೆ ಸಿಬಿಐ ಮತ್ತು ಇಡಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ಬಿಜೆಪಿಯ ಬೆದರಿಕೆ ಮತ್ತು ಆಮಿಷಗಳಿಗೆ ನಾವು ಬಗ್ಗಲ್ಲ. ಈ ಸಂಬಂಧ ಕಾನೂನು ರೀತಿಯಲ್ಲಿ ನಾವು ಹೋರಾಡುತ್ತೇವೆ. ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿರೋದನ್ನು ನಾವು ಜನರಿಗೆ ತಿಳಿಸಿದ್ದೇವೆ. ಅಧಿಕಾರಿಗಳು ಯಾವ ಪ್ರಕರಣದಡಿಯಲ್ಲಿ ನಮ್ಮನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬುವುದು ನಮಗೆ ಗೊತ್ತಾಗಿಲ್ಲ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *