ಭಾರತದ ಪ್ರತಿ ಇಂಚು ಭೂಮಿಗೂ ರಾಮಾಯಣ ಹಾಗೂ ಮಹಾಭಾರತದ (Mahabaratha) ನಂಟು ಇದ್ದೇ ಇದೆ. ಅದಕ್ಕೆ ಪೂರಕವಾಗುವಂತೆ ಭಾರತದ ಯಾವುದೇ ಮೂಲೆಯಲ್ಲಿರೋ ಹಳ್ಳಿ ಆದ್ರೂ… ಇಲ್ಲಿಗೆ ರಾಮ ಬಂದಿದ್ನಂತೆ ಭೀಮ ಬಂದಿದ್ನಂತೆ ಅನ್ನೋ ಕತೆ ಇದ್ದೇ ಇರುತ್ತೆ. ಹಾಗೇ ದೆಹಲಿ ಸಹ ಮಹಾಭಾರತಕ್ಕೆ ಸಂಬಂಧಿಸಿದ ಜಾಗ ಎಂಬ ವಾದವಿದೆ. ಅದಕ್ಕೆ ಬೇಕಾದ ಪುರಾವೆಗಳು ಕೆಲವೆಡೆ ಸಿಕ್ಕಿವೆ. ಅದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ‘ಇಂದ್ರಪ್ರಸ್ಥ’ (Indraprastha) ಎಂದು ಮರುನಾಮಕರಣ ಮಾಡಬೇಕು ಎಂದು ದೆಹಲಿ ಬಿಜೆಪಿ (BJP) ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ದೆಹಲಿ ಮತ್ತು ಮಹಾಭಾರದೊಂದಿಗಿನ ಸಂಬಂಧದ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಪ್ರವೀಣ್ ಖಂಡೇಲ್ವಾಲ್ ಬರೆದ ಪತ್ರದಲ್ಲೇನಿದೆ?
ಮಹಾಭಾರತದ ಕಾಲದಲ್ಲಿ ಪಾಂಡವರು ಯಮುನಾ ನದಿಯ ದಡದಲ್ಲಿ ತಮ್ಮ ರಾಜಧಾನಿ ‘ಇಂದ್ರಪ್ರಸ್ಥ’ವನ್ನು ಸ್ಥಾಪಿಸಿದ್ದರು. ಅದು ತತ್ವಗಳು ಮತ್ತು ನೈತಿಕತೆಯನ್ನು ಆಧರಿಸಿದ ಆಡಳಿತವನ್ನು ಸಂಕೇತಿಸುವ ಸಮೃದ್ಧ, ಸುಸಜ್ಜಿತ ನಗರವಾಗಿತ್ತು. ಇದಕ್ಕೆ ಸಾಕ್ಷಿಯಿದೆ, ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹೆಸರು ಬದಲಾವಣೆಮಾಡುವುದು ದೆಹಲಿಗೆ ಐತಿಹಾಸಿಕ ನ್ಯಾಯವನ್ನು ಒದಗಿಸುತ್ತದೆ.
ಅಯೋಧ್ಯೆ, ಕಾಶಿ ಮತ್ತು ಪ್ರಯಾಗ್‌ರಾಜ್‌ನಂತಹ ನಗರಗಳು ತಮ್ಮ ಐತಿಹಾಸಿಕ ಅಸ್ಮಿತೆಯನ್ನು ಮರಳಿ ಪಡೆದಂತೆ, ದಿಲ್ಲಿಯು ತನ್ನ ಮೂಲ ಹೆಸರನ್ನು ಮರಳಿ ಪಡೆಯಬೇಕು. ‘ಇಂದ್ರಪ್ರಸ್ಥ’ ಎಂಬ ಹೆಸರು ನಮ್ಮ ಭವ್ಯ ಪರಂಪರೆ, ನೀತಿಬದ್ಧ ಆಡಳಿತ ಮತ್ತು ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ. ಈ ಬದಲಾವಣೆಯು ರಾಷ್ಟ್ರೀಯ ಹೆಮ್ಮೆಯನ್ನು ಹೆಚ್ಚಿಸುತ್ತದೆ.
ಹೆಸರು ಬದಲಾವಣೆಯಾದರೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಇದರಿಂದ ವ್ಯಾಪಾರ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.
ಪಾಂಡವರ ಪ್ರತಿಮೆಗಳು ತ್ಯಾಗ, ಧೈರ್ಯ, ಸದಾಚಾರ ಮತ್ತು ನ್ಯಾಯದ ಸಂಕೇತಗಳಾಗಲಿವೆ. ಯುವ ಪೀಳಿಗೆಯನ್ನು ಭಾರತೀಯ ಧರ್ಮದ ಆದರ್ಶಗಳೊಂದಿಗೆ ಬೆಸೆಯುತ್ತವೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಧ್ಯಯನ ಹೇಳೋದೇನು?
ದೆಹಲಿಯ ಕಿಲಾದಲ್ಲಿ ಮಹಾಭಾರತ ಯುಗಕ್ಕೆ ಸಂಬಂಧಿಸಿದ ಪುರಾವೆಗಳು ಕಂಡುಬಂದಿವೆ ಎಂದು ಪುರಾತತ್ವ ಸಮಿತಿ ಈ ಹಿಂದೆ ತಿಳಿಸಿತ್ತು. ಮಹಾಭಾರತ ಅವಧಿಯಲ್ಲಿ (ಕ್ರಿ.ಪೂ. 1100-1200) ದೆಹಲಿಯ ಪುರಾಣ ಕಿಲಾ ಕೋಟೆಯ ಭಾಗದಲ್ಲಿ ಜನ ವಸತಿ ಇತ್ತು ಎಂಬುದಕ್ಕೆ ಪುರಾವೆಗಳು ದೊರೆತಿವೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ASI) ಹೇಳಿದೆ.
ಕೋಟೆಯ ದಿಬ್ಬದಲ್ಲಿ ಮಹಾಭಾರತದ ಕಾಲಕ್ಕೆ ಸಂಬಂಧಿಸಿದ ಪೇಂಟೆಡ್ ಗ್ರೇ ವೇರ್ (PGW) ಚೂರುಗಳು (ಮಡಿಕೆ ಪಾತ್ರೆಗಳ ತುಣುಕುಗಳು) ಕಂಡುಬಂದಿವೆ. ವಿಭಿನ್ನ ಯುಗಗಳಲ್ಲಿನ ವಿಭಿನ್ನ ಕುಂಬಾರಿಕೆ ಶೈಲಿಗಳ ಪಳಯುಳಿಕೆಗಳು ಇಲ್ಲಿ ಸಿಕ್ಕಿದ್ದವು ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ ನಿರ್ದೇಶಕ ವಸಂತ ಸ್ವರ್ಣಕರ್ ತಿಳಿಸಿದ್ದರು.
1970 ರ ದಶಕದಲ್ಲಿ, ಭಾರತದ ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞ ಬಿ.ಬಿ. ಲಾಲ್ ಮಹಾಭಾರತದಲ್ಲಿ ಉಲ್ಲೇಖಿಸಲಾದ ಸ್ಥಳಗಳಲ್ಲಿ ಈ ಉತ್ಖನನ ಕಾರ್ಯ ನಡೆದಿತ್ತು. ಮೌರ್ಯ, ಗುಪ್ತ, ರಜಪೂತ ಮುಂತಾದವರ ಕುಂಬಾರಿಕೆ ಶೈಲಿಗಳೊಂದಿಗೆ ಮೇಲಿನ ಪದರಗಳನ್ನು ಈಗಾಗಲೇ ಗುರುತಿಸಲಾಗಿರುವುದರಿಂದ, ಅದಕ್ಕೂ ಹಿಂದಿನ ಪಳೆಯುಳಿಕೆಗೆ ಹೋಲಿಕೆ ಮಾಡಿ ಅವುಗಳನ್ನು ಗುರುತಿಸಲಾಗಿದೆ. ಅಲ್ಲದೇ ಪುರಾತತ್ತ್ವಜ್ಞರು ಅದೇ ಸ್ಥಳದಿಂದ ಗಣೇಶ (ಮೊಘಲರ ಕಾಲ), ಗಜಲಕ್ಷ್ಮಿ (ಗುಪ್ತರ ಕಾಲ) ಮತ್ತು ವಿಷ್ಣು (ರಜಪೂತರ ಕಾಲ) ಮೂರ್ತಿಗಳನ್ನು ಸಹ ಪತ್ತೆ ಮಾಡಿದ್ದರು.
ಮೌರ್ಯಪೂರ್ವ ಯುಗದಲ್ಲಿ, ಭಾರತವನ್ನು 16 ಮಹಾಜನಪದಗಳಾಗಿ ವಿಂಗಡಿಸಲಾಗಿದೆ. ಈ ಮಹಾಜನಪದಗಳು ಕುರು, ಪಾಂಚಾಲ ಮತ್ತು ಅಂಗದಂತಹ ರಾಜ್ಯಗಳನ್ನು ಒಳಗೊಂಡಿವೆ, ಇವು ಕ್ರಮವಾಗಿ ಪಾಂಡವರು, ದ್ರೌಪದಿ ಮತ್ತು ಕರ್ಣನ ಜೊತೆಗಿನ ಸಂಬಂಧ ಹೊಂದಿದ್ದವು ಎಂದು ಪುರಾಣ ಕಥೆಗಳು ತಿಳಿಸುತ್ತವೆ..
ಮಹಾಭಾರತ
ಮಹಾಕಾವ್ಯ ಮಹಾಭಾರತದಲ್ಲಿ ಈ ನಗರದ ಪ್ರಮುಖ ಪಾತ್ರವನ್ನು ವಿವರಿಸಲಾಗಿದೆ. ಅದರಲ್ಲಿ ಪಾಂಡವ ಸಾಮ್ರಾಜ್ಯದ ಭವ್ಯ ರಾಜಧಾನಿಯನ್ನು ಇಂದ್ರಪ್ರಸ್ಥ ಎಂದು ಕರೆಯಲಾಗುತ್ತಿತ್ತು ಎಂಬ ಉಲ್ಲೇಖವಿದೆ. ಪೌರಾಣಿಕ ಮಹತ್ವ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಈ ಸ್ಥಳ ಭಾರತದ ಪ್ರಾಚೀನ ನಾಗರಿಕತೆಗೆ ಜೀವಂತ ಸಾಕ್ಷಿಯಾಗಿದೆ.
ಮಹಾಭಾರತದ 206 ನೇ ಅಧ್ಯಾಯದಲ್ಲಿ, ಕೌರವರು ಮತ್ತು ಪಾಂಡವರ ಸಂಘರ್ಷದ ಬಗ್ಗೆ ತಿಳಿದಿದ್ದ ಧೃತರಾಷ್ಟ್ರನು ಶಾಂತಿಯನ್ನು ಕಾಪಾಡಿಕೊಳ್ಳಲು ರಾಜ್ಯವನ್ನು ವಿಭಜಿಸಿದ.
ಶಕುನಿಯ ಸಲಹೆಯ ಮೇರೆಗೆ, ಪಾಂಡವರಿಗೆ ಹಸ್ತಿನಾಪುರದ ಬದಲಿಗೆ ದಟ್ಟವಾದ ಅರಣ್ಯವಾದ ಖಾಂಡವಪ್ರಸ್ಥವನ್ನು ನೀಡಲಾಯಿತು. ಈಗ ದೆಹಲಿಯಾಗಿರುವ ಈ ಪ್ರದೇಶದಲ್ಲಿ ನಾಗರು ವಾಸಿಸುತ್ತಿದ್ದರು. ಇಲ್ಲಿ ಪಾಂಡವರು ತಮ್ಮ ರಾಜಧಾನಿಯನ್ನು ಸ್ಥಾಪಿಸಲು ಕೃಷ್ಣನ ಸಹಾಯವನ್ನು ಕೋರಿದ್ದರು.
ಖಾಂಡವ ವನದ ದಹನದ ಸಮಯದಲ್ಲಿ ಅರ್ಜುನನು ಇಂದ್ರನ ವಿರುದ್ಧ ಹೋರಾಡಿದ್ದ. ಇನ್ನ, ತಕ್ಷಕನು ತನ್ನ ಕುಟುಂಬದೊಂದಿಗೆ ತಪ್ಪಿಸಿಕೊಂಡಾಗ ಮತ್ತು ಅಗ್ನಿಯು ಕಾಡನ್ನು ದಹಿಸಿದಾಗ ಸಂಘರ್ಷ ಕೊನೆಗೊಂಡಿತ್ತು. ಅರ್ಜುನನ ಧೈರ್ಯದಿಂದ ಪ್ರಭಾವಿತನಾದ ಇಂದ್ರನು ಖಾಂಡವಪ್ರಸ್ಥದಲ್ಲಿ ನಗರವನ್ನು ನಿರ್ಮಿಸಲು ವಿಶ್ವಕರ್ಮನಿಗೆ ಆದೇಶಿಸಿದ್ದನು. ಬಳಿಕ ಮಾಯಾಸುರ ಮತ್ತು ವಿಶ್ವಕರ್ಮರು ಇಂದ್ರಪ್ರಸ್ಥವನ್ನು ಸೃಷ್ಟಿಸಿದರು.
ಇಂದ್ರಪ್ರಸ್ಥ ಅರಮನೆ
ರಾಜ ಯುಧಿಷ್ಠಿರ ಇಂದ್ರಪ್ರಸ್ಥದಲ್ಲಿ ರಾಜಸೂಯ ಯಜ್ಞವನ್ನು ಮಾಡಿದ್ದ. ಇದರಲ್ಲಿ ಅವನ ಸೋದರಸಂಬಂಧಿ ದುರ್ಯೋಧನನನ್ನು ಆಹ್ವಾನಿಸಲಾಗಿತ್ತು. ಮಹಾಭಾರತದ ಸಭಾ ಪರ್ವದಲ್ಲಿ, ದುರ್ಯೋಧನನು ಅರಮನೆಗೆ ಬಂದಾಗ, ನೀರನ್ನು ನೆಲವೆಂದು ತಪ್ಪಾಗಿ ಭಾವಿಸಿ ಅದರಲ್ಲಿ ಬಿದ್ದ. ಈ ದೃಶ್ಯವನ್ನು ನೋಡಿ ದ್ರೌಪದಿ ನಕ್ಕಿದ್ದಳು. ಅವಮಾನಕ್ಕೊಳಗಾದ ದುರ್ಯೋಧನನು ಶಕುನಿಯೊಂದಿಗೆ ಸೇರಿ ಯುಧಿಷ್ಠಿರನನ್ನು ಪಗಡೆ ಆಟದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ. ಇದು ಅವರ ವನವಾಸ ಮತ್ತು ಕುರುಕ್ಷೇತ್ರ ಯುದ್ಧಕ್ಕೆ ಕಾರಣವಾಯಿತು.
ಪಾಂಡವರ ನಂತರ ‘ಇಂದ್ರಪ್ರಸ್ಥ’ ಏನಾಯಿತು?
ಪುರಾಣಗಳ ಪ್ರಕಾರ, ರಾಜ ನಿಚಕ್ಷು ಪಾಂಡವರ ಏಳನೇ ತಲೆಮಾರಿನ ರಾಜನಾಗಿದ್ದನು. ಆ ಸಮಯದಲ್ಲಿ ಗಂಗಾನದಿಯಲ್ಲಿ ಪ್ರವಾಹ ಉಂಟಾಗಿ ಅದು ಹಸ್ತಿನಾಪುರ ಮತ್ತು ಇಂದ್ರಪ್ರಸ್ಥ ಎರಡನ್ನೂ ಮುಳುಗಿಸಿತು. ಇದರ ನಂತರ, ರಾಜ ನಿಚಕ್ಷು ಕೌಶಂಬಿಯನ್ನು ಹೊಸ ರಾಜಧಾನಿಯನ್ನಾಗಿ ಮಾಡಿ ಅಲ್ಲಿ ವಾಸಿಸಲು ಪ್ರಾರಂಭಿಸಿದ ಎಂಬ ಉಲ್ಲೇಖವಿದೆ.





