ಶಿಕ್ಷಣ ಇಲಾಖೆ ಎಡವಟ್ಟು – 17 ವರ್ಷಗಳಿಂದ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಶಾಲೆ ಉರ್ದು ಶಾಲೆಗೆ ಸ್ಥಳಾಂತರ

Public TV
2 Min Read
School Students

– 67 ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ
– ಶಾಲೆಗೆ ಬಂದು ವಾಪಸ್‌ ಹೋಗ್ತಿರೋ ಶಿಕ್ಷಕರು

ಯಾದಗಿರಿ: ಇಲ್ಲಿನ ವಾಲ್ಮೀಕಿ ನಗರದಲ್ಲಿ ಕಳೆದ 17 ವರ್ಷಗಳಿಂದ ಸರ್ಕಾರಿ ಶಾಲೆಯೊಂದು ಸಮುದಾಯ ಭವನದಲ್ಲಿ ನಡೆಯುತ್ತಿದೆ. ಸಾವಿರಾರು ಮಕ್ಕಳು ಸಮುದಾಯ ಭವನದಲ್ಲಿ (Community Bhawan) ನಡೆಯುತ್ತಿದ್ದ ಶಾಲೆಯಲ್ಲೇ ವಿದ್ಯೆ ಕಲಿತ್ತಿದ್ದಾರೆ. ಆದರೀಗ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮುದಾಯ ಭವನದಲ್ಲಿದ್ದ ಶಾಲೆಯನ್ನ ಉರ್ದು ಸರ್ಕಾರಿ ಶಾಲೆಯ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದಾರೆ. ಹಾಗಾಗಿ ಕಳೆದ ಒಂದು ತಿಂಗಳಿನಿಂದ ಹತ್ತಾರು ಮಕ್ಕಳು ಶಾಲೆಗೆ ಹೋಗೋದನ್ನೇ ನಿಲ್ಲಿಸಿದ್ದಾರೆ. ಉರ್ದು ಶಾಲೆಗೆ (Urdu school) ಶಿಫ್ಟ್‌ ಮಾಡಿದ್ರೆ ನಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.

Yadgir School 2

ಕಳೆದ 17 ವರ್ಷಗಳ ಹಿಂದೆ ಅಂದ್ರೆ 2006-07ನೇ ಸಾಲಿನಲ್ಲಿ ಈ ಬಡಾವಣೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನ ಶಿಕ್ಷಣ ಇಲಾಖೆ (Education Department) ಮಂಜೂರು ಮಾಡಿತ್ತು. ಆರಂಭದಲ್ಲಿ ಜಾಗ ಮತ್ತು ಶಾಲೆಗೆ ಕಟ್ಟಡ ಇಲ್ಲದ ಕಾರಣಕ್ಕೆ ಬಡಾವಣೆಯ ಮಶಮ್ಮ ದೇವಸ್ಥಾನದ ಆವರಣದಲ್ಲಿ ಶೆಡ್​​​ ಹಾಕಿಕೊಂಡು ಶಾಲೆಯನ್ನ ನಡೆಸಲಾಗುತ್ತಿತ್ತು. ಆದ್ರೆ ಕೆಲ ವರ್ಷಗಳ ನಂತರ ಇದೇ ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣವಾಗಿದೆ. ಹೀಗಾಗಿ ಶಾಲೆಯನ್ನ ಶೆಡ್‌ನಿಂದ ಸಮುದಾಯ ಭವನಕ್ಕೆ ಶಿಫ್ಟ್ ಮಾಡಲಾಗಿತ್ತು. ಕಳೆದ 17 ವರ್ಷಗಳಿಂದಲೂ ಕಿರಿಯ ಪ್ರಾಥಮಿಕ ಶಾಲೆಯನ್ನ ಇದೇ ಸಮುದಾಯ ಭವನದಲ್ಲಿ ನಡೆಸಿಕೊಂಡು ಬರಲಾಗುತ್ತಿತ್ತು. ಇದನ್ನೂ ಓದಿ: ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಹಲವು ವರ್ಗಕ್ಕೆ ಶಕ್ತಿ ತುಂಬುವ ಕೆಲಸ: ಹೆಚ್‌ಡಿಕೆ ಬಣ್ಣನೆ

Yadgir School

ಮಕ್ಕಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮುದಾಯ ಭವನದ ಪಕ್ಕದ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಶಾಲೆಯನ್ನ ಸ್ಥಳಾಂತರಗೊಳಿಸಿದ ಬಳಿಕ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಯನ್ನ ಸ್ಥಳಾಂತರ ಮಾಡುವ ನೆಪದಲ್ಲಿ ಬೇರೆ ಶಾಲೆಯೊಟ್ಟಿಗೆ ವಿಲೀನ ಮಾಡಲು ಪ್ಲ್ಯಾನ್‌ ಮಾಡಿದ್ದಾರೆ ಅಂತ ಪೋಷಕರು ಆರೋಪಿಸಿದ್ದಾರೆ. ಈಗಿರುವ ಶಾಲೆಗೆ ಮಕ್ಕಳು ಮುಖ್ಯ ರಸ್ತೆಯನ್ನ ದಾಟಿ ಹೋಗಬೇಕು. ಮುಖ್ಯ ರಸ್ತೆ ಮೇಲೆ ಭಾರೀ ವಾಹನಗಳು ಓಡಾಡುತ್ತವೆ. ರಸ್ತೆ ದಾಟುವಾಗ ಏನಾದ್ರು ಹೆಚ್ಚು-ಕಮ್ಮಿ ಆದ್ರೆ ಯಾರು ಜವಾಬ್ದಾರಿ? ನಾವು ಕೂಲಿ ಮಾಡುವ ಜನ ಮಕ್ಕಳನ್ನ ಶಾಲೆಗೆ ಬಿಡೋದಕ್ಕೆ ಆಗಲ್ಲ. ಹೀಗಾಗಿ ಸಮುದಾಯ ಭವನದಲ್ಲೇ ಶಾಲೆ ನಡೆಸಿ ಅಂತ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ರದ್ದತಿಗೆ ಕಾಂಗ್ರೆಸ್‍ನಲ್ಲಿ ಚರ್ಚೆ, ಬಾಲಕೃಷ್ಣರಿಂದ ಬಯಲು: ಹೆಚ್‍ಡಿಕೆ

School Students 3

ಶಾಲೆ ಸ್ಥಳಾಂತರಗೊಳಿಸಿದ ಬಳಿಕ ಪೋಷಕರ ಒತ್ತಾಯಕ್ಕೆ ಅಧಿಕಾರಿಗಳು ಕಿವಿಗೊಡದಿದ್ದರಿಂದ ಪೋಷಕರು ಮಕ್ಕಳನ್ನ ಶಾಲೆಗ ಕಳುಹಿಸೋದಕ್ಕೆ ಹಿಂದೇಟು ಹಾಕಿದ್ದಾರೆ. ಕಳೆದ 1 ತಿಂಗಳಿನಿಂದ 1 ರಿಂದ 5ನೇ ತರಗತಿವರೆಗೆ ಇರುವ ಈ ಶಾಲೆಯ ಸುಮಾರು 60ಕ್ಕೂ ಅಧಿಕ ಮಕ್ಕಳು ಶಾಲೆ ಮುಖ ನೋಡದೇ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಮಕ್ಕಳು ಶಾಲೆಗೆ ಬಾರದ ಕಾರಣಕ್ಕೆ ಶಾಲೆಯ ಮೂರು ಜನ ಶಿಕ್ಷಕಿಯರು ಕಳೆದ 1 ತಿಂಗಳಿನಿಂದ ಶಾಲೆಗೆ ಬಂದು ಕುಳಿತುಕೊಂಡು ವಾಪಸ್ ಹೋಗುತ್ತಿದ್ದಾರೆ. ಅಧಿಕಾರಿಗಳು ಮುಂದೇನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಮೋದಿ ಹೊಡೆತಕ್ಕೆ ಎಲ್ಲಿ ಸಿಲುಕಿ ಸಾಯೋಣ ಎಂದು ಮಂತ್ರಿಯೊಬ್ಬರು ಹೇಳ್ತಿದ್ರು: ಬೊಮ್ಮಾಯಿ

Share This Article