ನಟ ರಾಕ್ಷಸ ಧನಂಜಯ (Dhananjaya) ನಟನೆಯ 25ನೇ ಸಿನೆಮಾ ಹೊಯ್ಸಳ (Hoysala) ದಲ್ಲಿ ಖಡಕ್ ಪೊಲೀಸ್ ಆಗಿ ಕಾಣಿಸಿಕೊಳ್ಳುವುದಲ್ಲದೆ ತನ್ನ ಮಡದಿಯ ಮುಂದೆ ಪ್ರೀತಿಯ ನಿವೇದನೆ ಮಾಡುವ ರೊಮ್ಯಾಂಟಿಕ್ ಗಂಡನಾಗಿಯೂ ಕಾಣಿಸಿಕೊಂಡಿದ್ದಾರೆ. ಬಡವ ರಾಸ್ಕಲ್ ನಲ್ಲಿ ಉಡುಪಿ ಹೋಟೆಲು ಹಾಡಿನಿಂದ ತಮ್ಮ ಜೋಡಿಯ ಮೋಡಿ ಮಾಡಿದ್ದ ಧನಂಜಯ ಹಾಗೂ ಅಮೃತಾ ಐಯ್ಯಂಗಾರ್ (Amrita Iyengar) ಈಗ “ಅರೇ ಇದು ಎಂಥಾ ಭಾವನೆ” ಎನ್ನುವ ಮೆಲೋಡಿ ಲವ್ ಸಾಂಗ್ ನಲ್ಲಿ ಬಹಳ ಹೋಮ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
“ಅರೇ ಇದು ಎಂಥಾ ಭಾವನೆ” ಹಾಡಿನ ಲಿರಿಕಲ್ ವಿಡಿಯೋ ಆನಂದ್ ಆಡಿಯೋ ಚಾನೆಲ್ ನಲ್ಲಿ ಇಂದು ಬಿಡುಗಡೆಯಾಗಿದ್ದು, ಗುರುದೇವ್ – ಗಂಗಾಳ ಕ್ಯೂಟ್ ರೊಮಾನ್ಸ್ ಅನ್ನು ನಾವು ಈ ಹಾಡಿನಲ್ಲಿ ನೋಡಬಹುದು. ತನ್ನ ಮಡದಿ- ಮನದರಸಿಗೆ ಮನದಾಳದ ಮಾತುಗಳನ್ನು ಈ ಹಾಡಿನ ಮೂಲಕ ಡಾಲಿ ಪ್ರೀತಿಯಿಂದ ವ್ಯಕ್ತಪಡಿಸುತ್ತಿದ್ದಾರೆ. ಗಾಯಕ ಹರಿಚರಣ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಯೋಗರಾಜ್ ಭಟ್ (Yogaraj Bhatt) ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕಿರುತೆರೆ ಸುಂದರಿ ಅಮೂಲ್ಯ ಗೌಡ
ಈ ಹಿಂದೆ ಟೈಟಲ್ ಸಾಂಗ್ ರಿಲೀಸ್ ಆಗಿದ್ದು ಭಾರಿ ಸದ್ದು ಮಾಡಿತ್ತು. ಪೊಲೀಸ್ ಡ್ರಾಮಾ ಸಿನಿಮಾ ಆಗಿರುವ ಹೊಯ್ಸಳ ಚಿತ್ರದ ಟೀಸರ್ ರಿಲೀಸ್ ಆಗಿ ಭರವಸೆ ಮೂಡಿಸಿತ್ತು. ಇನ್ನು ಡಾಲಿ ಧನಂಜಯ್ರ 25ನೇ ಸಿನಿಮಾ ಹೊಯ್ಸಳ ಮಾರ್ಚ್ 30 ರಂದು ತೆರೆಮೇಲೆ ಅಪ್ಪಳಿಸಲಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.