ಬೆಂಗಳೂರು: ಸಾಕ್ಷರತೆ ಸಮುದಾಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೂರ್ಣ ಸಾಕ್ಷರತಾ ಅಭಿಯಾನವು ಕರ್ನಾಟಕ ಮತ್ತು ದೇಶದಲ್ಲಿ ಶಿಕ್ಷಣದ ಪ್ರಚಾರದಲ್ಲಿ ಪ್ರಗತಿಗೆ ಕಾರಣವಾಗಲಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಅಭಿಪ್ರಾಯಪಟ್ಟರು.
ಎಫ್‌ಕೆಸಿಸಿಐ, ರೋಟರಿ ಇಂಡಿಯಾ ಸಾಕ್ಷರತಾ ಮಿಷನ್ ಮತ್ತು ಖಾಸಗಿ ಶಾಲೆ ಮತ್ತು ಮಕ್ಕಳ ಕಲ್ಯಾಣ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಪೂರ್ಣ ಸಾಕ್ಷರತೆ” ಎಲ್ಲರಿಗೂ ಶಿಕ್ಷಣ, ಕರ್ನಾಟಕದ ವಯಸ್ಕರ ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಹಾಲು ಉತ್ಪಾದಕರಿಗೆ 5 ರೂ.ಗಿಂತ ಹೆಚ್ಚಿಗೆ ಪ್ರೋತ್ಸಾಹ ಧನ ಏರಿಕೆ ಇಲ್ಲ – ದಿನೇಶ್ ಗೂಳಿಗೌಡ ಪ್ರಶ್ನೆಗೆ ಸರ್ಕಾರ ಉತ್ತರ
Advertisement
Advertisement
ದೇಶದಲ್ಲಿ ಕಡಿಮೆ ಸಾಕ್ಷರತೆ ಪ್ರಮಾಣಕ್ಕೆ ಮುಖ್ಯ ಕಾರಣಗಳು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಗಳು. ದೇಶದ ಪ್ರಗತಿಯಲ್ಲಿ ಶಿಕ್ಷಣ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಪ್ರತಿಯೊಬ್ಬರಿಗೂ ಶಿಕ್ಷಣದ ಮಹತ್ವ ತಿಳಿದಿದೆ. ಆದರೆ ಈಗಲೂ ಕೂಡ ಅನರಕ್ಷರಸ್ಥರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿದೆ. 1991 ರಲ್ಲಿ ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವನಾಗಿದ್ದೆ ಮತ್ತು ಅಲೋಟ್ ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದೆ. ನನ್ನ ಕ್ಷೇತ್ರ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿತ್ತು, ಅಂದು ಸಾಕ್ಷರತೆಗಾಗಿ 11 ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಸ್ವಯಂಪ್ರೇರಿತವಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಅಲ್ಲದೇ ನಾನೂ ಕೂಡ ಗ್ರಾಮಗಳಿಗೆ ತೆರಳಿ ಗ್ರಾಮ ಮುಖಂಡರಲ್ಲಿ ಶಿಕ್ಷಣದ ಅರಿವು ಮೂಡಿಸಿ, ಅನಕ್ಷರಸ್ಥರಿಗೆ ಶಿಕ್ಷಣ ಹೇಳಿಕೊಡುವಂತೆ ಮನವಿ ಮಾಡುವುದರ ಜೊತೆಗೆ ಅನಕ್ಷರಸ್ಥ ವಯಸ್ಕರು ವಿದ್ಯಾಭ್ಯಾಸ ಮಾಡುವಂಥ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲಾಯಿತು ಎಂದು ಸಾಕ್ಷರತೆ ಕುರಿತು ತಾವು ಕೈಗೊಂಡ ಕಾರ್ಯಗಳ ಬಗ್ಗೆ ಮೆಲುಕು ಹಾಕಿದರು.
Advertisement
ಪ್ರಾಚೀನ ಕಾಲದಲ್ಲಿ ನಮ್ಮ ದೇಶವು ಜ್ಞಾನ ಮತ್ತು ವಿಜ್ಞಾನದ ಅಧ್ಯಯನದಲ್ಲಿ ಪ್ರವರ್ತಕನಾಗಿದ್ದರಿಂದ ವಿಶ್ವಗುರು ಸ್ಥಾನವನ್ನು ಹೊಂದಿತ್ತು. ಅದನ್ನು ಮತ್ತೆ ಪಡೆಯಲು ಶಿಕ್ಷಣದ ಉತ್ತೇಜನದ ಅಗತ್ಯವಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಪ್ರಸ್ತುತ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲವಾಗಿ ಮತ್ತು ಸುರಕ್ಷಿತವಾಗಿಸಲು, ಭಾರತದ ಸಾಂಸ್ಕೃತಿಕ ವೈಭವವನ್ನು ಪುನಃಸ್ಥಾಪಿಸಲು, ಭಾರತವನ್ನು ಜಾಗತಿಕ ಜ್ಞಾನ ಶಕ್ತಿಯನ್ನಾಗಿ ಮಾಡಲು ಹೊರಟಿದೆ. ಮಾತೃಭಾಷೆಯಲ್ಲಿ ಅಧ್ಯಯನದ ಜೊತೆಗೆ ನೆಚ್ಚಿನ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ಮಾತೃಭಾಷೆಯಲ್ಲಿ ಶಿಕ್ಷಣದಿಂದ ಶಿಕ್ಷಣದ ಹರಡುವಿಕೆ ವೇಗವಾಗಿ ಹೆಚ್ಚಾಗುತ್ತದೆ ಎಂದು ಹೇಳಿದರು.
Advertisement
ಡ್ರಾಪ್ಔಟ್ ನಮ್ಮ ದೇಶದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅದನ್ನು ತೆಗೆದುಹಾಕಲು ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ. ನನ್ನ ಪ್ರಕಾರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಮುಂದೆ ಬಂದು ವಿದ್ಯಾರ್ಥಿಗಳನ್ನು ಶಿಕ್ಷಣಕ್ಕೆ ದತ್ತು ಪಡೆಯಲು, ಗ್ರಾಮವನ್ನು ದತ್ತು ಪಡೆಯಲು ಪ್ರಯತ್ನಿಸಬೇಕು. ಮುಂದಿನ ತರಗತಿಗೆ ಹೋಗುವ ಮುನ್ನ ವಿದ್ಯಾರ್ಥಿಗಳ ಮುಂದಿನ ಗುರಿಯನ್ನು ಶಿಕ್ಷಕರು ತರಗತಿಯಲ್ಲಿ ಚರ್ಚಿಸಬೇಕು. ಈ ವೇಳೆ ಸಮಸ್ಯೆಗಳನ್ನು ಹೇಳುವಂತಹ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಅದನ್ನು ಬಗೆಹರಿಸುವ ಪ್ರಯತ್ನ ಮಾಡುವುದರ ಜೊತೆಗೆ ಸರ್ಕಾರದ ಗಮನಕ್ಕೆ ತರಬೇಕು. ಈ ವಿನೂತನ ಪ್ರಯತ್ನ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಎದುರಾಗುವ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆ: ಭಾಷಾವಾರು ಪ್ರಾಂತ್ಯಗಳ ರಚನೆಯೇ ಅಂತಿಮ – ಸಿಎಂ
ಸಂಪೂರ್ಣ ಸಾಕ್ಷರತೆ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ನಾಗರಿಕನ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿರುತ್ತದೆ. ಸಂಪೂರ್ಣ ಸಾಕ್ಷರತೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳು ಯಶಸ್ಸಿಯಾಗಬೇಕಾದರೆ, ಸರ್ಕಾರ, ಸಂಘ ಸಂಸ್ಥೆಗಳ ಜೊತೆ ಸಾರ್ವಜನಿಕರು ಕೈಜೋಡಿಸಬೇಕು. ನವ ಭಾರತಕ್ಕಾಗಿ ಏಕ ಭಾರತ, ಶ್ರೇಷ್ಠ ಭಾರತ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಇಂಟರ್‌ನ್ಯಾಶನಲ್‌ನ ಮಾಜಿ ಅಧ್ಯಕ್ಷ, ಶೇಖರ್ ಮೆಹ್ತಾ, ಎಫ್‌ಕೆಸಿಸಿಐನ ಅಧ್ಯಕ್ಷ ಗೋಪಾಲ್ ರೆಡ್ಡಿ, ಖಾಸಗಿ ಶಾಲೆ ಮತ್ತು ಮಕ್ಕಳ ಕಲ್ಯಾಣ ಸಂಘದ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಶಾಮಿಲ್ ಅಹಮದ್, ರೋಟರಿ ಜಿಲ್ಲಾ ಗವರ್ನರ್ ಜಿತೇಂದ್ರ ಅನೇಜಾಜಿ, PSCWA ರಾಜ್ಯ ಅಧ್ಯಕ್ಷ ಅಫ್ಶದ್ ಅಹ್ಮದ್, ಖಾಸಗಿ ಶಾಲೆಯ ಪ್ರಾಂಶುಪಾಲರು, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ರೈ ಮುಂತಾದ ಗಣ್ಯರು ಹಾಜರಿದ್ದರು.