ChikkamagaluruDistrictsKarnatakaLatestMain Post

ಮಳೆ ಅಬ್ಬರಕ್ಕೆ ತುಂಡಾದ ರಸ್ತೆ, ಕುಸಿಯುವ ಹಂತದಲ್ಲಿ ಮನೆ- ಮಲೆನಾಡಿಗರು ಹೈರಾಣು

Advertisements

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿಕೂಡಿಗೆ ಹಾಗೂ ಶುಂಠಿ ಕೂಡಿಗೆ ಗ್ರಾಮಕ್ಕೆ ಹೋಗುವ ಮಾರ್ಗದ ರಸ್ತೆ ಅರ್ಥಕ್ಕೆ ತುಂಡಾಗಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಈ ಗ್ರಾಮಗಳಿಗೆ ಹೋಗಲು ಬೇರೆ ಯಾವುದೇ ದಾರಿ ಇಲ್ಲ. ಇರುವುದು ಒಂದೇ ದಾರಿ. ಈಗ ಆ ದಾರಿ ಕೂಡ ತುಂಡಾಗಿದ್ದು ಇಲ್ಲಿನ ಸುಮಾರು 25ಕ್ಕೂ ಹೆಚ್ಚು ಮನೆಯ ಜನರು ಆತಂಕಕ್ಕೀಡಾಗಿದ್ದಾರೆ.

ಈ ರಸ್ತೆ ಕಳೆದ 2 ವರ್ಷಗಳಿಂದಲೂ ಸ್ವಲ್ಪ ಸ್ವಲ್ಪ ಕುಸಿದು ಬೀಳುತ್ತಿತ್ತು. ಆಗ ಸ್ಥಳೀಯರು ಶಾಸಕ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಯಾರೂ ಕೂಡ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಇದೀಗ ರಸ್ತೆಯೇ ಅರ್ಧಕ್ಕೆ ತುಂಡಾಗಿ ಬಿದ್ದಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮಗೆ ಓಡಾಡಲು ಬೇರೆ ಯಾವುದೇ ದಾರಿ ಇಲ್ಲ. ಹೀಗಾಗಿ ಸರ್ಕಾರ ಕೂಡಲೇ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲೂ ಕಂಪಿಸಿದ ಭೂಮಿ – ಓಡೋಡಿ ಮನೆಯಿಂದ ಹೊರ ಬಂದ ಜನತೆ

ಇನ್ನೊಂದೆಡೆ ಭಾರೀ ಮಳೆಯಿಂದ ಕೊಪ್ಪ ತಾಲೂಕಿನ ಮೇಗುಂತ ಸಮೀಪದ ಗುಡ್ಡೆ ತೋಟ ಗ್ರಾಮದಲ್ಲಿ ಮನೆಯ ಪಕ್ಕದ ಭೂಮಿ ಕುಸಿಯುತ್ತಿದ್ದು, ಮನೆಯನ್ನೇ ಕಳೆದುಕೊಳ್ಳುವ ಆತಂಕದಲ್ಲಿ 3 ಕುಟುಂಬಗಳು ಬದುಕುತ್ತಿದೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ನಾರಾಯಣ್ ಹಾಗೂ ಸುಮತಿ ದಂಪತಿ ಮನೆ ಕುಸಿದು ಬಿದ್ದರೆ ಎಲ್ಲಿ ಹೋಗುವುದು ಎಂದು ಭಯಗೊಂಡು ಕೆಲಸಕ್ಕೂ ಹೋಗದೆ ಮನೆಯನ್ನೇ ಕಾಯುತ್ತಾ ಕೂತಿದ್ದಾರೆ.

ಸರ್ಕಾರ ನಮಗೆ ಬೇರೆ ಜಾಗ ಹಾಗೂ ಮನೆ ಕೊಟ್ಟರೆ ನಾವು ಇಲ್ಲಿಂದ ಹೋಗಲು ಸಿದ್ದ ಎಂದು ಹೇಳಿದ್ದಾರೆ. ಆದರೆ ಪ್ರತಿ ಮಳೆಗಾಲದಲ್ಲೂ ಬಂದು ವಿಚಾರಿಸುವ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ನಾವು ಇಲ್ಲಿಯೇ ಬದುಕುತ್ತಿದ್ದೇವೆ. ಸರ್ಕಾರ ನಮಗೆ ಬೇರೆ ಜಾಗ ನೀಡಿದರೆ ನಾವು ಹೋಗಲು ಸಿದ್ದ ಎನ್ನುತ್ತಿದ್ದಾರೆ ಇಲ್ಲಿನ ಜನ. ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 40 ಮಂದಿ ನಾಪತ್ತೆ – ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ

ಇರುವುದು ಒಂದು ಸೂರು. ಕಷ್ಟಪಟ್ಟು ಕೂಲಿ-ನಾಲಿ ಮಾಡಿ ಹೊಟ್ಟೆ-ಬಟ್ಟೆ ಕಟ್ಟಿ ಮಾಡಿರುವ ಮನೆ. ಸುಮಾರು 35 ವರ್ಷಗಳಿಂದ ಇಲ್ಲಿಯೇ ಬದುಕುತ್ತಿದ್ದೇವೆ. ನಮಗೆ ಈ ಮನೆ ಬಿಟ್ಟರೆ ಬೇರೆ ಗತಿ ಇಲ್ಲ. ಇಡೀ ದಿನ ಕೆಲಸ ಮಾಡಿ ಬಂದಾಗಲೂ ರಾತ್ರಿ ಮಳೆ ಬಂದರೆ ಮನೆ ಎಲ್ಲಿ ಕುಸಿದು ಬೀಳುತ್ತೋ ಎಂದು ನಿದ್ದೆ ಬರುವುದಿಲ್ಲ ಎಂದು ಮನೆ ಮಾಲೀಕ ನಾರಾಯಣ್ ಕಣ್ಣೀರಿಟ್ಟಿದ್ದಾರೆ.

Live Tv

Leave a Reply

Your email address will not be published.

Back to top button