ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು, ಕಾಂಗ್ರೆಸ್ ಸೋಲಿಗೆ ಕಾರಣಗಳೇನು?

Public TV
3 Min Read
DKSHI SIDDU HDK

ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಕಾಂಗ್ರೆಸ್‌ (Congress) ಜೊತೆಗೆ ಜೆಡಿಎಸ್ ಮೈತ್ರಿಯಾಗಿದ್ದರೂ ನಿಖಿಲ್ ಕುಮಾರಸ್ವಾಮಿ ಸೋತಿದ್ದರು. ಆದರೆ ಇದೀಗ ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲಿಸಬೇಕೆಂದು ‘ಕೈ’ ನಾಯಕರು ಮಾಡಿದ ಪ್ಲ್ಯಾನ್‌ ಕೆಲಸ ಮಾಡಿಲ್ಲ. ಮಂಡ್ಯ ಜಿಲ್ಲೆಯ ಜನರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಲವು ಕಾರಣಕ್ಕೆ ಕುಮಾರಸ್ವಾಮಿ ಒಪ್ಪಿದರೆ, ಹಲವು ಕಾರಣಗಳಿಂದ ಕಾಂಗ್ರೆಸ್‌ನ್ನು ಕೈ ಬಿಟ್ಟಿದ್ದಾರೆ.

ಕುಮಾರಸ್ವಾಮಿ ಗೆದ್ದಿದ್ಹೇಗೆ?
ಮಂಡ್ಯ (Mandya) ಜಿಲ್ಲೆಯಲ್ಲಿ ಕುಮಾರಸ್ವಾಮಿ (H.D.Kumaraswamy) ಅವರ ವರ್ಚಸ್ಸು ಇತರ ನಾಯಕರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿದೆ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಗಿದ್ದರೂ ತಳಮಟ್ಟದಲ್ಲಿಯೇ ಒಂದಾಗಿರಲಿಲ್ಲ. ಆದರೆ ಈಗ ಜೆಡಿಎಸ್‌ ಹಾಗೂ ಬಿಜೆಪಿ (BJP) ಮೈತ್ರಿ ವರ್ಕೌಟ್ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಬೇರೆ ಸಮುದಾಯದ ಮತಗಳಿಗಿಂತ ಒಕ್ಕಲಿಗ ಮತಗಳು ಹೆಚ್ಚಾಗಿ ಇವೆ. ಈ ಬಾರಿ ಕುಮಾರಸ್ವಾಮಿಯನ್ನು ಸಾಲಿಡ್‌ ಆಗಿ ಒಕ್ಕಲಿಗ ಮತಗಳು ಕೈ ಹಿಡಿದಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋತಿದ್ದ ಅನುಕಂಪ ಇತ್ತು. ಆ ಅನುಕಂಪವು ಹೆಚ್‌ಡಿಕೆಗೆ ಮತವಾಗಿ ಪರಿವರ್ತನೆ ಆಗಿದೆ. ಮಂಡ್ಯ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಜೆಡಿಎಸ್ ಸೋತಿದೆ. ಹೀಗಿದ್ದರೂ ಕುಮಾರಸ್ವಾಮಿ ಗೆಲ್ಲಲೇಬೇಕೆಂದು ಮಾಜಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರಮವಹಿಸಿ ಕೆಲಸ ಮಾಡಿರುವುದು ವರ್ಕೌಟ್‌ ಆಗಿದೆ. ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ: ಹೆಚ್‍ಡಿಕೆ

star chandru nomination

ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದಾಗಿನಿಂದ ನಾಯಕರು, ಹೆಚ್‌ಡಿಕೆ ಗೆದ್ದರೆ ಕೇಂದ್ರ ಸಚಿವರಾಗುತ್ತಾರೆ ಎಂದು ಪ್ರಚಾರ ಮಾಡಿದ್ದರು. ಕುಮಾರಸ್ವಾಮಿ ಚುನಾವಣಾ ಅಖಾಡಕ್ಕೆ ಧುಮುಕುವ ಮುನ್ನ ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು. ಆಗ ಆ ವಿಚಾರವನ್ನು ಕಾಂಗ್ರೆಸ್ ನಾಯಕರು ಹೀಯಾಳಿಸಿ ಮಾತಾಡಿದ್ದರು. ಮೇಕೆದಾಟು ಯೋಜನೆ ಮಾಡುವುದಾಗಿ ಹೆಚ್‌ಡಿಕೆ ಪ್ರತಿಜ್ಞೆ ಮಾಡುವ ಮೂಲಕ ತಮಿಳುನಾಡು-ಕರ್ನಾಟಕದ ಕಾವೇರಿ ಬಿಕ್ಕಟ್ಟು ನಿವಾರಣೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಕೆರಗೋಡು ಹನುಮಧ್ವಜ ವಿವಾದ ವೇಳೆ ಹೋರಾಟದಲ್ಲಿ ಕುಮಾರಸ್ವಾಮಿ ಭಾಗಿಯಾಗಿ ಹೋರಾಟಗಾರರಿಗೆ ಧೈರ್ಯ ತುಂಬಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕುಮಾರಸ್ವಾಮಿಗೆ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಮಂಡ್ಯ ಜನರು ಮತಹಾಕಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಮಂಡ್ಯ ಜಿಲ್ಲೆಗೆ ಹಲವು ಕೆಲಸಗಳನ್ನು ಮಾಡಿದ್ದಾರೆ.‌ ಜೊತೆಗೆ ರೈತಪರ ಕೆಲಸಗಳು ಕುಮಾರಸ್ವಾಮಿ ಗೆಲುವಿಗೆ ಕಾರಣವಾಗಿವೆ.

ಕಾಂಗ್ರೆಸ್‌ ಸೋಲಿಗೆ ಕಾರಣಗಳೇನು?
ಮಂಡ್ಯದ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಹೊಸ ಮುಖ ಆಯ್ಕೆ ಮಾಡಿದ್ದು. ಮಂಡ್ಯ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಮಂದಿ ಶಾಸಕರು ಇದ್ದಾರೆ ಎಂಬ ಕಾಂಗ್ರೆಸ್ ನಾಯಕರ ಅತಿಯಾದ ಆತ್ಮವಿಶ್ವಾಸ. ಮಂಡ್ಯದಲ್ಲಿ ಗೆಲ್ಲಲು ಗ್ಯಾರಂಟಿ ಯೋಜನೆಗಳು ಪ್ರಮುಖ ಪಾತ್ರವಹಿಸುತ್ತೇವೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರು ಇದ್ದರು.‌ ಕೊನೆಗೆ ಗ್ಯಾರಂಟಿ ಯೋಜನೆಗಳು ಫಲಕೊಡದೆ ಇರುವುದು. ಕೆ‌ಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದ್ದು. ಮಂಡ್ಯ ಜಿಲ್ಲೆಯ ಮಹಿಳೆಯ ಮೇಲೆ ಕಾಂಗ್ರೆಸ್ ಸಾಕಷ್ಟು ನಿರೀಕ್ಷೆ ಹೊಂದಿತ್ತು. ಆದರೆ ಮಹಿಳೆಯರ ಮತ ಪಡೆಯಲು ವಿಫಲಾಗಿದ್ದು. ಇದನ್ನೂ ಓದಿ: ಮಹಾರಾಷ್ಟ್ರ ಸೋಲಿಗೆ ನಾನೇ ಹೊಣೆ – ಡಿಸಿಎಂ ಹುದ್ದೆಗೆ ದೇವೇಂದ್ರ ಫಡ್ನವಿಸ್‌ ರಾಜೀನಾಮೆ

ಒಂದು‌ ಕಡೆ ಭೀಕರ ಬರ‌ದಿಂದ ನಾಲೆಯ ಪ್ರದೇಶದಲ್ಲಿ ಬೆಳೆಗಳು ಒಣಗುತ್ತ ಇದ್ದಾಗಲೂ ನಾಲೆಗಳಿಗೆ ನೀರು ಬಿಡದೇ ಇರುವುದು. ಚುನಾವಣೆ ಪ್ರಾರಂಭದಿಂದಲೂ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಮೇಲೆ ಹಗುರವಾಗಿ ವಾಗ್ದಾಳಿ ನಡೆಸಿದ್ದು. ಮಂಡ್ಯದ ಕೆರಗೋಡಿನಲ್ಲಿ‌ ಯಾವುದೇ ವಿವಾದ ಇರಲಿಲ್ಲ. ಹೀಗಿದ್ದರೂ ಕಾಂಗ್ರೆಸ್ ನಾಯಕರು ಬೇಡವಾದ ಕೆರಗೋಡು ಧ್ವಜ ವಿವಾದವನ್ನು ಹುಟ್ಟು ಹಾಕಿದ್ದು ಕಾಂಗ್ರೆಸ್‌ ಸೋಲಿಗೆ ಪ್ರಮುಖ ಕಾರಣವಾಗಿದೆ.

Share This Article