ರೆಬೆಲ್ ಸ್ಟಾರ್ ಪ್ರಭಾಸ್, ನಿರ್ದೇಶಕ ಮಾರುತಿ ಮತ್ತು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ (The Raja Saab) ಚಿತ್ರದ ಎರಡನೇ ಹಾಡು ‘ಸಹನಾ ಸಹನಾ’ ಬುಧವಾರ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಹೈದರಾಬಾದ್ನ ಮಾಲ್ನಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೆಲೋಡಿ ಹಾಡನ್ನು ಲೋಕಾರ್ಪಣೆ ಮಾಡಲಾಯಿತು. ಹಾರರ್-ಕಾಮಿಡಿ ಜಾನರ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ನಿರ್ಮಾಪಕರಾದ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಅವರು ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ.
ಈ ಕಾರ್ಯಕ್ರಮದದ ಕೇಂದ್ರ ಬಿಂದು ಸಂಗೀತ ನಿರ್ದೇಶಕ ಥಮನ್ ಎಸ್ ಮಾತನಾಡಿ, “ರಾಜಾ ಸಾಬ್ ಚಿತ್ರದ ಹಾಡುಗಳು ಅದ್ಭುತವಾಗಿ ಬಂದಿವೆ. ಈ ಹಿಂದೆ ಬಿಡುಗಡೆಯಾದ ಸಾಂಗ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಸಹನಾ ಸಹನಾ ಎಂಬ ಗೀತೆಯನ್ನು ನಿಮ್ಮ ಮುಂದೆ ತಂದಿದ್ದೇವೆ. ಚಿತ್ರದಲ್ಲಿ ಪ್ರಭಾಸ್ (Prabhas) ಅವರ ಡ್ಯಾನ್ಸ್ ಮತ್ತು ಸ್ಟೈಲ್ ಅಭಿಮಾನಿಗಳಿಗೆ ಹಬ್ಬವಾಗಲಿದೆ” ಎಂದರು. ನಿರ್ದೇಶಕ ಮಾರುತಿ ಸಹ ಹಾಡಿನ ಬಗ್ಗೆ ಮಾತನಾಡಿದರು. “ಪ್ರಭಾಸ್ ಅವರು ಯಾವಾಗಲೂ ತಮ್ಮ ಅಭಿಮಾನಿಗಳಿಗಾಗಿ ಶ್ರಮಿಸುತ್ತಾರೆ. ಈ ಸಂಕ್ರಾಂತಿಯು ‘ರೆಬೆಲ್ ಸಂಕ್ರಾಂತಿ’ ಆಗಲಿದೆ. ಚಿತ್ರದ ಕಂಟೆಂಟ್ ಬಗ್ಗೆ ಜನ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದಗಳು” ಎಂದು ತಿಳಿಸಿದರು.
“ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಅಪ್ಡೇಟ್ ನೀಡಲಿದ್ದೇವೆ. ಹೈದರಾಬಾದ್ನಲ್ಲಿ ಬೃಹತ್ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸುವ ಪ್ಲಾನ್ ಇದೆ. ಜನವರಿ 8 ರಂದು ಪ್ರೀಮಿಯರ್ ಶೋಗಳು ಪ್ರಾರಂಭವಾಗಲಿವೆ,” ಎಂದು ಮಾಹಿತಿ ನೀಡಿದರು ನಿರ್ಮಾಪಕ ಟಿ.ಜಿ. ವಿಶ್ವಪ್ರಸಾದ್. ಚಿತ್ರದ ನಾಯಕಿಯರಾದ ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ಅವರು ಪ್ರಭಾಸ್ ಅಭಿಮಾನಿಗಳು ತೋರುತ್ತಿರುವ ಅತೀವ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.
ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ದಿ ರಾಜಾಸಾಬ್ ಚಿತ್ರದಲ್ಲಿ ನಾಯಕನಾಗಿ ಪ್ರಭಾಸ್, ನಾಯಕಿಯರಾಗಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ರಿದ್ಧಿ ಕುಮಾರ್ ನಟಿಸಿದ್ದಾರೆ. ಇನ್ನುಳಿದಂತೆ, ಸಂಜಯ್ ದತ್, ಬೋಮನ್ ಇರಾನಿ ಮುಂತಾದವರು ಚಿತ್ರದಲ್ಲಿದ್ದಾರೆ. ಥಮನ್ ಎಸ್ ಅವರ ಸಂಗೀತ, ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನ, ಮಾರುತಿ ಅವರ ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.




