ಸದ್ಯ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ಲಿನ ಗಾಳಿ ಬಲವಾಗಿ ಬೀಸುತ್ತಿರುವಾಗ, ವಿಶಿಷ್ಟ ರೀತಿಯ ಪ್ರಯತ್ನವಾಗಿ, ಪ್ಯಾನ್ ಇಂಡಿಯಾ ಕಲಾವಿದರನ್ನು ಬಳಸಿಕೊಂಡು ರೂಪಿಸಲ್ಪಟ್ಟಿರುವ ಚಿತ್ರ `ಸಿಂಹರೂಪಿಣಿ’ (Simha Roopini). ಅಕ್ಟೋಬರ್ ೧೭ರಂದು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿರುವವರು ಕೆ.ಎಂ ನಂಜುಂಡೇಶ್ವರ (Nanjundeshwar). ವಿಶೇಷವೆಂದರೆ, ಈ ಚಿತ್ರಕ್ಕೆ ಕಥೆಯನ್ನೂ ಅವರೇ ಒದಗಿಸಿದ್ದಾರೆ. ಸಾಮಾನ್ಯವಾಗಿ, ಸಿನಿಮಾ ನಿರ್ಮಾಣ ಎಂಬುದು ಬ್ಯುಸಿನೆಸ್ ಅಂತಲೇ ಭಾವಿಸಲಾಗುತ್ತದೆ. ಆದರೆ, ಸಿಂಹರೂಪಿಣಿ ನಿರ್ಮಾಣದ ಹಿಂದಿರೋದು ಅಕ್ಷರಶಃ ಭಕ್ತಿ ಎಂಬ ಶಕ್ತಿ. ಈ ಕುರಿತಾದ ಒಂದಷ್ಟು ಮಾಹಿತಿಗಳನ್ನು ಖುದ್ದು ಅವರೇ ತೆರೆದಿಟ್ಟಿದ್ದಾರೆ.
Advertisement
ದೊಡ್ಡ ಬಳ್ಳಾಪುರದ ಕಲ್ಲುದೇವನಹಳ್ಳಿಯವರು ಕೆ.ಎಂ ನಂಜುಂಡೇಶ್ವರ. ಬದುಕು ಅರಸಿ ಬೆಂಗಳೂರಿಗೆ ಬಂದು ನೆಲೆಗೊಂಡು ಮೂರು ದಶಕಗಳು ಕಳೆದಿವೆ. ಮೆಡಿಕಲ್ ಅಡ್ಮಿನಿಸ್ಟ್ರೇಷನ್ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಂಜುಂಡೇಶ್ವರ ಅವರ ಪಾಲಿಗೆ ಮಾರಮ್ಮದೇವಿ ಆರಾಧ್ಯ ದೇವತೆ. ಅವರ ಬದುಕನ್ನು ಒಂದಷ್ಟು ಸಂಕಷ್ಟಗಳಿಂದ ಪಾರುಮಾಡಿದ ಮಾರಮ್ಮದೇವಿಯ ಆರಾಧಕರಾಗಿಯೂ ಅವರು ಮುಂದುವರೆದು ಬಂದಿದ್ದಾರೆ. ಅವರ ಪಾಲಿಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬುದು ಬಹು ವರ್ಷಗಳ ಕನಸಾಗಿತ್ತು. ಕಡೆಗೂ ಅದಕ್ಕೊಂದು ಸರಿಕಟ್ಟಾದ ವಾತಾವರಣ ನಿರ್ಮಾಣವಾದ ಘಟ್ಟದಲ್ಲಿ ತನ್ನ ಬದುಕು ಬದಲಿಸಿದ ಮಾರಮ್ಮ ದೇವಿಯ ಕುರಿತಾದ ಸಿನಿಮಾ ನಿರ್ಮಾಣ ಮಾಡಬೇಕೆಂದು ನಂಜುಂಡೇಶ್ವರ ತೀರ್ಮಾನಿಸಿದ್ದರಂತೆ. ಇದಕ್ಕೆ ದೇವಿಯ ಕಡೆಯಿಂದಲೂ ಸಕಾರಾತ್ಮಕ ವಾಗ್ದಾನ ಸಿಗುವ ಮೂಲಕ ಸಿಂಹರೂಪಿಣಿ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು.
Advertisement
Advertisement
ಆ ನಂತರದಲ್ಲಿ ನಿರ್ದೇಶನಕ್ಕೆ ಕಿನ್ನಾಳ್ ರಾಜ್ ವರಿಂದ ಮೊದಲ್ಗೊಂಡು ಎಲ್ಲ ಆಯ್ಕೆಗಳಿಗೂ ಮಾರಮ್ಮದೇವಿಯ ವಾಗ್ದಾನದ ಮೊರೆ ಹೋಗಲಾಗಿದೆ. ದೇವಿಯ ಆಣತಿಯೊಂದಿಗೇ ಪ್ರತೀ ಹೆಜ್ಜೆಯನ್ನಿಟ್ಟಿರುವ ಧನ್ಯತಾ ಭಾವವೊಂದು ನಿರ್ಮಾಪಕ ನಂಜುಂಡೇಶ್ವರರಲ್ಲಿದೆ. ಈಗೊಂದು ಮೂವತ್ತು ವರ್ಷಗಳ ಹಿಂದೆ ಹಳ್ಳಿ ವಾತಾವರಣವೇ ಬೇರೆಯದ್ದಿತ್ತು. ಇಂಥಾ ದೇವರು, ದೇವಿಯರ ಮಹಾತ್ಮೆಗಳ ಬಗ್ಗೆ ಹಿರೀಕರು ಒಂದಷ್ಟು ಕಥೆಗಳನ್ನು ಹೇಳುತ್ತಿದ್ದರು. ಆ ಮೂಲಕ ನೆಲಮೂಲದ ಕಥಾನಕಗಳು ಹೊಸ ತಲೆಮಾರಿಗೆ ದಾಟಿಕೊಳ್ಳುತ್ತಿದ್ದವು. ಈವತ್ತಿಗೂ ನಮ್ಮ ನಡುವಲ್ಲಿರುವ ನಂಬಿಕೆಗಳು ಹಾಗೆ ಹಿರಿಯರಿಂದ ದಾಟಿಕೊಂಡವುಗಳೇ. ಆದರೀಗ, ಅಂಥಾ ಕಥೆಗಳನ್ನು ಹೇಳುವವರೂ ಇಲ್ಲ. ಕೇಳಲು ಪುರಸೊತ್ತಿರುವವರೂ ಇಲ್ಲ. ಈ ಕೊರತೆ ನೀಗಿಸುತ್ತಲೇ, ನೆಲದ ನಂಟಿನ ಮಾರಮ್ಮದೇವಿಯ ಕಥೆಯನ್ನು ಅಜರಾಮರವಾಗಿಸುವ ಸದುದ್ದೇಶದೊಂದಿಗೆ ಸಿಂಹರೂಪಿಣಿ ಚಿತ್ರವನ್ನು ನಿರ್ಮಾಣ ಮಾಡಿದ್ದಾಗಿ ನಂಜುಂಡೇಶ್ವರ ಹೇಳಿಕೊಳ್ಳುತ್ತಾರೆ.
Advertisement
ಈ ಸಿನಿಮಾದಲ್ಲಿ ಯಾವುದನ್ನೂ ಅತಿಶಯವೆಂಬಂತೆ ಹೇಳಲಾಗಿಲ್ಲ. ಯಾವ ದೃಷ್ಯಗಳೂ ಡ್ರಾಮಾ ಸ್ವರೂಪ ಪಡೆಯದಂತೆ, ಅತ್ಯಂತ ನೈಜವಾಗಿ ಚಿತ್ರೀಕರಿಸಲಾಗಿದೆಯಂತೆ. ವಿಶೇಷವೆಂದರೆ, ನೈಜ ಘಟನೆಗಳನ್ನೇ ಒಟ್ಟು ಸೇರಿಸಿ, ಅದನ್ನು ಕಮರ್ಶಿಯಲ್ ಹಾದಿಯಲ್ಲಿ ನಿರೂಪಿಸಲಾಗಿದೆಯಂತೆ. ಇದರ ಚಿತ್ರೀಕರಣದ ಹಂತದಲ್ಲಿ ಪ್ರತಿಯೊಬ್ಬರಿಗೂ ರೋಮಾಂಚಕ ಅನುಭವಗಳಾಗಿವೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಂತೂ ಹಲವರಿಗೆ ಶಕ್ತಿಯ ಆವಾಹನೆಯಾದಂತಾಗಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತಂತೆ. ಆ ಹಂತದಲ್ಲಿ ನಡೆದ ಘಟನಾವಳಿಗಳನ್ನು ಮೂರು ಕ್ಯಾಮೆರಾಗಳಲ್ಲಿ ಶೂಟ್ ಮಾಡಿಕೊಂಡು ಅದನ್ನು ಹಾಗೆಯೇ ತೋರಿಸಲಾಗಿದೆ. ಅದರ ಮೂಲಕ ರೋಮಾಂಚನವೊಂದು ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳಲಿದೆ. ಅದನ್ನು ಸ್ವೀಕರಿಸುವ ಬಗೆ ಪ್ರೇಕ್ಷಕರಿಗೆ ಬಿಟ್ಟಿದ್ದೆನ್ನುವ ಅಭಿಪ್ರಾಯ ನಂಜುಂಡೇಶ್ವರರದ್ದು.
ಇದು ಪ್ಯಾನಿಂಡಿಯಾ ಭರಾಟೆಯ ಕಾಲ. ಇಂಥಾ ಹೊತ್ತಿನಲ್ಲಿ ದೇವಿಯ ಮೇಲೆ ನಂಬಿಕೆ ಇಟ್ಟು, ಅಪ್ಪಣೆಯೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಧನ್ಯತಾ ಭಾವ ನಂಜುಂಡೇಶ್ವರ ಅವರಲ್ಲಿದೆ. ಓರ್ವ ನಿರ್ಮಾಪಕನಾಗಿ ಪ್ರತಿಯೊಂದರಲ್ಲಿಯೂ ಭಾಗಿಯಾಗಿ, ಒಟ್ಟಾರೆ ಚಿತ್ರವನ್ನು ರೂಪಿಸಿದ ತೃಪ್ತಿ ಅವರಲ್ಲಿದೆ. ಇದು ಭಕ್ತಿಯಿಂದ ಚಿತ್ರೀಕರಿಸಿರುವ ಸಿನಿಮಾ. ಎಲ್ಲ ವರ್ಗದವರಿಗೂ ಇಷ್ಟವಾಗಬಲ್ಲಂತೆ ಮೂಡಿ ಬಂದಿದೆ. ಬಹು ದಿನಗಳ ನಂತರ ಕುಟುಂಬ ಸಮೇತರಾಗಿ ನೋಡಿ ಮುದಗೊಳ್ಳಬಹುದಾದ ಚಿತ್ರ ಸಿಂಹರೂಪಿಣಿ. ಈ ಸಿನಿಮಾ ನೋಡುವ ಸರ್ವರಿಗೂ ದೇವಿಯ ಕೃಪಾಶೀರ್ವಾದ ಸಿಗುವಂತಾಗಲಿ ಎಂಬ ಸದಾಶಯ ನಂಜುಂಡೇಶ್ವರ ಅವರದ್ದು. ಈ ವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗಿದೆ.