ಕೆಜಿಎಫ್ 2 ಸಿನಿಮಾದ ನಂತರ ಯಶ್ ಮುಂದಿನ ಸಿನಿಮಾದ ಬಗ್ಗೆ ಹಲವು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಯಶ್ ಮುಂದಿನ ಸಿನಿಮಾ ಯಾವುದು, ಯಾರು ನಿರ್ದೇಶಕರು, ಯಾವ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಬರಲಿದೆ, ಲುಕ್ ಹೇಗೆ ಇರಲಿದೆ ಹೀಗೆ ಹತ್ತಾರು ಪ್ರಶ್ನೆಗಳು ಅಭಿಮಾನಿಗಳ ತಲೆ ಕೆಡಿಸಿವೆ. ಅಭಿಮಾನಿಗಳು ಎಷ್ಟೇ ಮಂಡೆ ಬಿಸಿ ಮಾಡಿಕೊಂಡರೂ, ಯಶ್ ಮಾತ್ರ ಕೂಲ್ ಆಗಿಯೇ ಇದ್ದಾರೆ.
ಯಶ್ ನಟನೆಯ ಮುಂದಿನ ಸಿನಿಮಾಗಳ ಬಗ್ಗೆ ಈಗಾಗಲೇ ಒಂದು ಯಾದಿ ಬಂದು ಹೋಗಿದೆ. ನರ್ತನ್, ಶಂಕರ್ ಸೇರಿದಂತೆ ಹಲವು ನಿರ್ದೇಶಕರ ಹೆಸರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಕೆವಿಎನ್ ಸೇರಿದಂತೆ ಮೂರ್ನಾಲ್ಕು ನಿರ್ಮಾಣ ಸಂಸ್ಥೆಗಳು ಕೂಡ ಯಶ್ ಸಿನಿಮಾವನ್ನು ಮಾಡಲು ಮುಂದೆ ಬಂದಿವೆ ಎಂದು ಸುದ್ದಿಯೂ ಆಗಿದೆ. ಆದರೆ, ಅಧಿಕೃತವಾಗಿ ಯಾವುದೂ ಈವರೆಗೂ ಹೊಸ ಸಿನಿಮಾದ ಬಗ್ಗೆ ಘೋಷಣೆ ಮಾಡಿಲ್ಲ. ಹಾಗಾಗಿ ಎಲ್ಲವೂ ಕಪೋಕಲ್ಪಿತ ಎಂದೇ ಹೇಳಲಾಗಿದೆ. ಇದನ್ನೂ ಓದಿ:ಶೂಟಿಂಗ್ ವೇಳೆ ಅವಘಡ: ಆಸ್ಪತ್ರೆ ಸೇರಿದ ಬಾಹುಬಲಿ ಬಿಜ್ಜಳದೇವ ಪಾತ್ರಧಾರಿ ನಾಸರ್
ಆದರೆ, ಈ ಮಧ್ಯೆ ಯಶ್ ಅವರ 19ನೇ ಸಿನಿಮಾದ ಪೋಸ್ಟರ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದು ಫ್ಯಾನ್ ಮೇಡ್ ಪೋಸ್ಟರ್ ಎಂದು ಹೇಳಲಾಗುತ್ತಿದೆಯಾದರೂ, ಇದು ಮುಂದೆ ನಿಜವೂ ಆಗಬಹುದು ಎಂದು ಮತ್ತೆ ಕುತೂಹಲ ಮೂಡಿಸುವಂತಹ ಬರಹಗಳು ಕೂಡ ಹರಿದಾಡುತ್ತಿವೆ. ಹೀಗಾಗಿ ಪೋಸ್ಟರ್ ಬಗ್ಗೆ ಕ್ಯೂರಿಯಾಸಿಟಿ ಮೂಡಿದೆ. ಹೇರ್ ಸ್ಟೈಲ್ ಕೂಡ ಬದಲಾಗಿಲ್ಲವಾದ್ದರಿಂದ, ಇದೇ ಗೆಟಪ್ ನಲ್ಲೇ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಲೂ ಈ ಕುರಿತು ಯಶ್ ಮೌನ ಮುರಿದಿಲ್ಲ. ಪೋಸ್ಟರ್ ಬಗ್ಗೆ ಪ್ರತಿಕ್ರಿಯೆ ಕೂಡ ನೀಡಿಲ್ಲ. ಆದರೆ, ಸದ್ಯ ಯಶ್ ಇರುವ ರೀತಿಯಲ್ಲೇ ಪೋಸ್ಟರ್ ಕೂಡ ಇರುವುದರಿಂದ, ಯಶ್ ತಮ್ಮ ಹೇರ್ ಸ್ಟೈಲ್ ಹಾಗೆಯೇ ಉಳಿಸಿಕೊಂಡಿದ್ದರಿಂದ ಹೀಗೆಯೇ ಗೆಟಪ್ ಕೂಡ ಇರಲಿದೆ ಎನ್ನುವ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಇದಕ್ಕೆ ಅಧಿಕೃತವಾಗಿ ಯಶ್ ಅವರೇ ಉತ್ತರಿಸಬೇಕಿದೆ.