ಕೊಪ್ಪಳ: ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿ ಪರೋಕ್ಷವಾಗಿ ಅಕ್ರಮ ಕೆಲಸಗಳಿಗೆ ಬೆಂಗಾವಲ ನಿಂತಿದ್ದಾರೆ ಎಂದು ರಾಜ್ಯ ಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದ್ದು, ಸದ್ಯ ಕ್ರೈಂ ಪೊಲೀಸ್ ಸಿಬ್ಬಂದಿ ಮೇಲೆ ವರ್ಗಾವಣೆ ತೂಗುಗತ್ತಿ ಶುರುವಾಗಿದೆ.
ಗ್ರಾಮಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೆ ನಡೆಯುವ ಪ್ರತಿಯೊಂದು ಮಾಹಿತಿಯನ್ನು ರಾಜ್ಯ ಗುಪ್ತಚರ ಇಲಾಖೆಯು ಸಂಗ್ರಹಿಸಿ, ಸಿಎಂ ಅವರ ಗಮನಕ್ಕೆ ತರಲಾಗುತ್ತದೆ. ಅದೇ ರೀತಿಯಾಗಿ ಅಕ್ರಮ ಚಟುವಟಿಕೆಗಳಾದ ಜೂಜಾಟ, ಮಟ್ಕಾ ದಂಧೆ, ಪರವಾನಗಿ ಇಲ್ಲದೇ ಮರಳು, ಮರಗಳ ಸಾಗಾಟಗಳಂತಹ ಸಂಪೂರ್ಣ ಮಾಹಿತಿ ಜೊತೆಗೆ ಅಕ್ರಮದಲ್ಲಿ ಭಾಗಿಯಾದ ವ್ಯಕ್ತಿಗಳ ಸಂಪೂರ್ಣ ಮಾಹಿತಿ ಕೂಡ ಕಲೆ ಹಾಕಲಾಗಿದ್ದರೂ ಕೂಡ ಯಾವ ತಾಲೂಕಿನಲ್ಲೂ ಅಕ್ರಮ ಚಟುವಟಿಕೆಗಳು ಕೊನೆಯಾಗದೆ ರಾಜಾರೋಷವಾಗಿ ನಡೆಸಲಾಗುತ್ತಿದೆ. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್‌ಗೆ ಜನರ ಪರದಾಟ – ಹೆಚ್‌ಕೆ ಪಾಟೀಲ್ ಕಾರ್ಯಕ್ರಮದಲ್ಲಿ 12 ಸಿಲಿಂಡರ್ ಪತ್ತೆ
ಮೇಲಾಧಿಕಾರಿಗಳ ಒತ್ತಡಕ್ಕೆ ಮಾತ್ರ ಹೆಸರಿಗೆ ಬೆರಳೆಣಿಕೆ ಪ್ರಕರಣ ದಾಖಲಾಗುತ್ತಿವೆ. ಆದರೆ ಸಂಪೂರ್ಣ ಬಂದ್ ಮಾಡಿಸುವ ಮಟ್ಟಕ್ಕೆ ಅಧಿಕಾರಿಗಳು ಮುಂದಾಗದೇ ಬೆಂಗಾವಲು ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ರಾಜ್ಯ ಗುಪ್ತಚರ ಇಲಾಖೆಯು ಬಳ್ಳಾರಿ ವಲಯದ ಎಲ್ಲಾ ಠಾಣೆಯಲ್ಲಿನ ಸಿಬ್ಬಂದಿ ಹೆಸರು, ಹುದ್ದೆ ಸಮೇತ ಮಾಹಿತಿಯನ್ನು ಐಜಿಯವರಿಗೆ ರವಾನಿಸಿದೆ.
ಕಾಲ್ ರಿಕಾರ್ಡ್ ಪರಿಶೀಲಿಸಿದ ಐಜಿ:
ರಾಜ್ಯ ಗುಪ್ತಚರ ಇಲಾಖೆಯ ಮೇಲಾಧಿಕಾರಿಗಳು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ನಡೆಸುವವರ ಜೊತೆಗೆ ಸಂಪರ್ಕದಲ್ಲಿರುವ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ ಪೊಲೀಸ್ ಠಾಣೆಗಳ ಎಸ್ಪಿ ಡ್ಯೂಟಿ, ಕ್ರೈಂ ಸಿಬ್ಬಂದಿಗಳ ಮಾಹಿತಿಯನ್ನು ಬಳ್ಳಾರಿ ವಲಯದ ಐಜಿಯವರಿಗೆ ನೀಡಿದ್ದಾರೆ.
ಐಜಿಯವರು ಗುಪ್ತಚರ ಇಲಾಖೆ ಮಾಹಿತಿ ಆಧಾರಿಸಿ, ಸಿಬ್ಬಂದಿಗಳ ಸಿಡಿಆರ್ ಮೂಲಕ ಕಾಲ್ ರಿಕಾರ್ಡ್ ಪರಿಶೀಲನೆ ನಡೆಸಿದ ವೇಳೆ, ರೌಡಿಶೀಟರ್, ಗುಂಡಾ ಪಟ್ಟಿಯಲ್ಲಿರುವವರು, ಮಟ್ಕಾ ನಡೆಸುವವರು, ಇಸ್ಪೀಟ್ ಜೂಜಾಟ ಜೊತೆಗೆ ಸಂಪರ್ಕದಲ್ಲಿರುವ ಸತ್ಯಾಂಶ ತಿಳಿದುಬಂದಿದೆ. ವರ್ಷದಿಂದ ವರ್ಷಕ್ಕೆ ವರ್ಗಾವಣೆಯಾಗದೆ ಒಂದೇ ಠಾಣೆಯಲ್ಲಿ ಸುಮಾರು ವರ್ಷಗಳ ಕಾಲ ಕೆಲಸ ಮಾಡುವ ಸಿಬ್ಬಂದಿ ಈ ಪಟ್ಟಿಯಲ್ಲಿ ಇದ್ದಿದ್ದು, ಅಚ್ಚರಿಯ ಸಂಗತಿಯಾಗಿದೆ.
ಜಿಲ್ಲಾ ವ್ಯಾಪ್ತಿಯ ಎಸ್ಪಿಗಳಿಂದ ಕ್ಲಾಸ್:
ಸಿಬ್ಬಂದಿ ಚಲನವಲನಗಳ ಮೇಲೆ ನಿಗಾವಹಿಸಿದ ಬಳ್ಳಾರಿ ವಲಯದ ಐಜಿಯವರು ಜಿಲ್ಲಾ ವ್ಯಾಪ್ತಿಯ ಎಸ್ಪಿಗಳಿಗೆ ಸಿಬ್ಬಂದಿ ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಎಸ್ಪಿಯವರು ಐಜಿ ನೀಡಿದ ಪಟ್ಟಿಯಲ್ಲಿನ ಸಿಬ್ಬಂದಿ ಕರೆದು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಪಟ್ಟಿಯಲ್ಲಿ ಇರುವ ಸಿಬ್ಬಂದಿಯನ್ನು ದೂರದ ಸಮಾರಂಭಗಳಿಗೆ ಬಂದೋಬಸ್ತ್ ಕಳುಹಿಸುವ ನೆಪದಲ್ಲಿ, ಆದಷ್ಟು ಬೇಗ ವರ್ಗಾವಣೆ ಮಾಡುವ ಸೂಚನೆಯನ್ನು ನೀಡಿದ್ದಾರೆ.ಇದನ್ನೂ ಓದಿ: ಸಚಿವರಿಂದ ಸಮರ್ಪಕ ಉತ್ತರ ಇಲ್ಲ – ಸಿಎಂ ಈ ವಿಷಯದಲ್ಲಿ ಅಸಹಾಯಕರಾಗಿದ್ದಾರೆ: ಸುನೀಲ್‌ಕುಮಾರ್ ಟೀಕೆ

