– ಸ್ಪರ್ಶ ಚಿತ್ರಕ್ಕಾಗಿ `ಚಂದಕಿಂತ ಚಂದ ನೀನೇ ಸುಂದರ’ ಹಾಡು ಬರೆದಿದ್ದ ಈರಣ್ಣ
ಶಿವಮೊಗ್ಗ: ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡಬೇಕು ಎಂದು ಬರೆದ ಕನ್ನಡ ಶಾಯರಿಗಳ ಜನಕ ಎಂದೇ ಖ್ಯಾತರಾಗಿದ್ದ ಖ್ಯಾತ ಕವಿ ಇಟಗಿ ಈರಣ್ಣ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೊಸಪೇಟೆ, ಬಳ್ಳಾರಿ, ಹೂವಿನಹಡಗಲಿ ಇನ್ನಿತರ ಕಡೆ ಉಪನ್ಯಾಸಕರಾಗಿದ್ದ ಈರಣ್ಣ ನಿವೃತ್ತಿಯ ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು. ಕನ್ನಡದ ಶಾಯರಿಗಳು ಅವರ ಜನಪ್ರಿಯ ಪುಸ್ತಕ. ಹದಿನೈದಕ್ಕೂ ಹೆಚ್ಚು ಮುದ್ರಣ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ತಾಯಿ ಕೊಟ್ಟ ತಾಳಿ ಅವರ ಸಾಹಿತ್ಯ ಬಳಕೆ ಆದ ಮೊದಲ ಚಿತ್ರ. ಸ್ಪರ್ಶ ಸಿನಿಮಾಕ್ಕಾಗಿ ಅವರು ಬರೆದ ಶಾಯರಿ `ಚಂದಕಿಂತ ಚಂದ ನೀನೇ ಸುಂದರ’ ಎಲ್ಲರ ಮನಗೆದ್ದ ಗೀತೆ. ಕಬೀರ್ ದಾಸರ ದೋಹೆಗಳು, ಹರಿವಂಶರಾಯ್ ಬಚ್ಚನ್ ಅವರ ಮಧುಶಾಲಾ ಕೃತಿ ಸೇರಿ ಹಲವು ಕಾವ್ಯ, ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
Advertisement
Advertisement
ಯಹೂದಿ ಹುಡುಗಿ, ರಾವಿ ನದಿ ದಂಡೆಯಲ್ಲಿ ಅವರ ಪ್ರಮುಖ ಅನುವಾದಿತ ನಾಟಕಗಳು. ಇವಲ್ಲದೆ ಈಶಾನ ವಚನಗಳು, ಬಸವಣ್ಣನವರ ವಚನಗಳ ಸಂಗ್ರಹ ಇನ್ನಿತರ ಕೃತಿಗಳ ರಚನೆ ಮಾಡಿದ್ದಾರೆ. ಇವರ ನಾಟಕಗಳು, ಕಾವ್ಯ ಹಲವು ವಿವಿಗಳ ಪಠ್ಯವಾಗಿ ಬೋಧನೆ ಆಗುತ್ತಿದೆ.
Advertisement
*ಕನ್ನಡದೊಳಗ ‘ಶಾಯಿರಿ’ ನಂತೂ ಯಾರೂ ಬರೆದಿಲ್ಲ ಇವತ್ತಿನ ತನಕ |
ನನಗಂತೂ ಬರೀಬೇಕನಸತೈತಿ ನಾನಂತೂ ಸಾಯೋತನಕ ||*
Advertisement
ಹೀಗೆ ಬರೆದ ಇಟಗಿ ಈರಣ್ಣ ಸಾಯೋತನಕ ಶಾಯರಿಗಳನ್ನೇ ಉಸಿರಾಗಿಸಿಕೊಂಡವರು. ನಾಡಿನ ನಾನಾ ಕಡೆ ಹಲವು ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಉಪನ್ಯಾಸಕ್ಕಾಗಿ ನಿರಂತರ ಪ್ರವಾಸ ಮಾಡುತ್ತಿದ್ದ ಈರಣ್ಣ, ಶಿವಮೊಗ್ಗದ ಸಾಂಸ್ಕೃತಿಕ ಲೋಕದ ಅವಿಭಾಜ್ಯ ಅಂಗವಾಗಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಅವರ ತಾಯಿ ಮೃತಪಟ್ಟಿದ್ದರು. ಭಾನುವಾರ ಶಿವಮೊಗ್ಗದ ಬಸವ ಕೇಂದ್ರದಲ್ಲಿ ಅವರ ಕಾರ್ಯ ನಡೆಸಿ, ರಾತ್ರಿ ಮನೆಗೆ ಹೋಗಿದ್ದರು. ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲೇ ತೀವ್ರ ಹೃದಯಾಘಾತದಿಂದ ಅಸ್ವಸ್ಥಗೊಂಡಾಗ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಈರಣ್ಣ ಸಾವನ್ನಪ್ಪಿದ್ದಾರೆ.
ಈರಣ್ಣ ಅವರಿಗೆ 66 ವರ್ಷ ವಯಸ್ಸಾಗಿತ್ತು.