ಮಂಡ್ಯ: ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡುವ ಆದೇಶವನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ರದ್ದು ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.
ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ಧಿಯಾಗಬೇಕು, ಗ್ರಾಮಗಳಲ್ಲೇ ಎಲ್ಲ ಸವಲತ್ತು ಸಿಗಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಆಶಯ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಎಲ್ಲ ಜನರು ಕಳೆದ 22 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಹಳ್ಳಿಯನ್ನು ನಗರಸಭೆಗೆ ಸೇರಿಸಿ, ಹಾಳು ಮಾಡಬೇಡಿ ಎಂದು ಆಗ್ರಹ ಮಾಡುತ್ತಿದ್ದಾರೆ. ಸಾವಿರಾರು ಎಕರೆ ಭತ್ತದ ಜಮೀನು ಇದ್ದು, ಇದನ್ನು ನಗರಸಭೆಗೆ ಸೇರಿಸಿದರೆ ಕೃಷಿ ಜಮೀನು ಹಾಳಾಗಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಜನರ ಭಾವನೆಯನ್ನು ನಿರ್ಲಕ್ಷ್ಯ ಮಾಡಿ, ನಗರಸಭೆಗೆ ಸೇರಿಸುತ್ತಿದೆ. ಈ ಹಳ್ಳಿಯನ್ನು ಸರ್ಕಾರ ನಾಶ ಮಾಡುತ್ತಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ರೇವಣ್ಣಗೆ ಸವಾಲೆಸೆದ ಶಿವಲಿಂಗೇಗೌಡ
ಇಲ್ಲಿನ ಜನರು ಹಳ್ಳಿಯನ್ನು ಗ್ರಾಮ ಪಂಚಾಯಿತಿಯಲ್ಲೇ ಉಳಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಇದು ನಗರಸಭೆಗೆ ಸೇರಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಯೋಜನೆಗಳು ಸ್ಥಗಿತಗೊಳ್ಳುತ್ತವೆ. ಈ ಸರ್ಕಾರ ರೈತರ ತಲೆ ಮೇಲೆ ಕಲ್ಲು ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿದೆ. ಇದು ಗ್ರಾಮವಾಗಿಯೇ ಉಳಿಯಬೇಕೆಂಬ ಜನರ ಭಾವನೆಗೆ ದ್ರೋಹ ಬಗೆಯಬಾರದು. ಈ ಹಿಂದೆ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ, ಹಳ್ಳಿಯ ಮೇಲೆ ದೌರ್ಜನ್ಯ ನಡೆದಾಗ ಗೋಲಿಬಾರ್ ಆಗಿ ಇಬ್ಬರು ರೈತರು ಸತ್ತಿದ್ದರು. ಆಗ ಸರ್ಕಾರವೇ ಬಿದ್ದುಹೋಯಿತು. ಈಗ ಜನರ ಪ್ರತಿಭಟನೆಗೆ ಮನ್ನಣೆ ನೀಡಿ, ಗ್ರಾಮವನ್ನು ಉಳಿಸಬೇಕು ಎಂದರು.
ಕಾಂಗ್ರೆಸ್ ಶಾಸಕರು ಇಲ್ಲಿನ ಜನರಿಗೆ ಹೆದರಬೇಕಿದೆ. ಇಲ್ಲವಾದರೆ ಮುಂದೆ ಅನಾಹುತ ಕಾದಿದೆ. ಜನರ ಬಗ್ಗೆ ಶಾಸಕರು ಮಾತಾಡುವಾಗ ಎಚ್ಚರ ವಹಿಸಬೇಕು. ಜನರು ಬೇಡವೆಂದರೂ ನಗರಸಭೆಗೆ ಸೇರಿಸುತ್ತಾರೆ ಎಂದರೆ ಕಾಂಗ್ರೆಸ್ ನಾಯಕರಿಗೆ ಇಲ್ಲಿ ಏನೋ ಲಾಭ ಇದೆ ಎಂದರ್ಥ. ಈ ಬಗ್ಗೆ ನಾನು ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದೇನೆ. ಈ ಆದೇಶವನ್ನು ರದ್ದು ಮಾಡುವುದು ದೊಡ್ಡ ಕಷ್ಟವಲ್ಲ. ಸರ್ಕಾರ ಕೂಡಲೇ ಆದೇಶ ರದ್ದು ಮಾಡಬೇಕು. ಈ ಬಗ್ಗೆ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇನೆ. ಈ ಹಿಂದೆ ಗ್ರಾಮ ಪಂಚಾಯಿತಿಯ ಪ್ರತಿನಿಧಿಗಳು ನೀಡಿರುವ ಅನುಮೋದನೆ ಪತ್ರವೇ ಸುಳ್ಳು. ಇಲ್ಲಿನ ಪಂಚಾಯಿತಿಯಲ್ಲಿ 10 ಸದಸ್ಯರಿದ್ದು, ಬೋಗಸ್ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಪಂಚಾಯಿತಿ ಅಧ್ಯಕ್ಷರು, ಸದಸ್ಯರ ಅಭಿಪ್ರಾಯವನ್ನು ಈಗಲೂ ಕೇಳಲಿ. ಮತ ಬೇಕೆಂದರೆ ಹಳ್ಳಿಯ ಜನರು ಬೇಕು, ಚುನಾವಣೆ ಮುಗಿದ ಬಳಿಕ ಹಳ್ಳಿಯ ಜನರು ಬೇಡ ಎನ್ನಬಾರದು. ಇದು ಜನವಿರೋಧಿ ನಿಲುವು ಎಂದು ಕಿಡಿಕಾರಿದರು.ಇದನ್ನೂ ಓದಿ: ಅರಸೀಕೆರೆಯಲ್ಲಿ ಚುನಾವಣೆಗೆ ನಿಂತ್ಕೊಳಿ, ಜನ ಏನು ಅಂತ ತೋರಿಸ್ತಾರೆ: ಹೆಚ್.ಡಿ.ರೇವಣ್ಣಗೆ ಶಿವಲಿಂಗೇಗೌಡ ಸವಾಲ್

