ನವದೆಹಲಿ: ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಪಾರ್ಲೆ ಜಿ ಬಿಸ್ಕತ್ ತಯಾರಿಕ ಕಂಪನಿ ತನ್ನ ಸಂಸ್ಥೆಯ 10 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂಬ ಸುದ್ದಿಯನ್ನು ನಿರಾಕರಿಸಿದೆ.
ಸಂಸ್ಥೆಯ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಕೆಲ ಉತ್ಪನ್ನಗಳ ತಯಾರಿಕೆಯನ್ನು ಕಡಿತಗೊಳಿಸಲು ಅನಿವಾರ್ಯವಾಗಿ ನಿರ್ಧರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಸಂಸ್ಥೆಯ ವಕ್ತಾರರು, 8 ರಿಂದ 10 ಸಾವಿರ ಉದ್ಯೋಗ ಕಡಿತ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ನಾವು ಈ ಕುರಿತು ಯಾವುದೇ ಮಾಧ್ಯಮಕ್ಕೆ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
Advertisement
Advertisement
ಉದ್ಯೋಗ ಕಡಿತ ಸುದ್ದಿಯನ್ನು ಮಾಧ್ಯಮಗಳೇ ಹೆಚ್ಚು ಹೈಪ್ ಮಾಡಿವೆ. ನಾವು ಉದ್ಯೋಗ ಕಡಿತದ ಕುರಿತು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಆದರೆ ತೆರಿಗೆ ಕಡಿತಗೊಳಿಸುವ ನಮ್ಮ ಬೇಡಿಕೆ ಈಡೇರದಿದ್ದರೆ ಉದ್ಯೋಗ ನಷ್ಟ ಸಂಭವಿಸುತ್ತದೆ ಎಂದು ಹೇಳಿದ್ದಾರೆ.
Advertisement
ನಿಜ ಸಂಗತಿ ಎಂದರೆ ನಾವು ಈ ಮೊದಲಿನಂತೆ ಉತ್ಪಾದನಾ ಪ್ರಮಾಣವನ್ನು ಹೊಂದಿಲ್ಲವಾದರೂ ಸಂಸ್ಥೆಯ ಮಾನವ ಸಂಪನ್ಮೂಲವನ್ನು ಇದುವರೆಗೂ ಕಡಿತಗೊಳಿಸಿಲ್ಲ. ಸಂಸ್ಥೆಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬುವುದು ಸತ್ಯವಲ್ಲ. ಆದರೆ ಬಿಸ್ಕತ್ ಮೇಲೆ ಸದ್ಯ ವಿಧಿಸಲಾಗುತ್ತಿರುವ ಶೇ.18 ಜಿಎಸ್‍ಟಿ ತುಂಬಾ ಹೆಚ್ಚು ಎಂಬುವುದು ನಮ್ಮ ಭಾವನೆಯಾಗಿದೆ. ಈ ಹಿಂದೆ ಬಿಸ್ಕತ್‍ಗಳನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿತ್ತು. ಆದರೆ ಈಗ ಶೇ. 18 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ರಸ್ಕ್ ನಂತಹ ಉತ್ಪನ್ನಗಳಿಗೆ ಶೇ.5 ರಷ್ಟು ತೆರಿಗೆ ಮಾತ್ರ ವಿಧಿಸಲಾಗುತ್ತಿದೆ. ಇದೇ ವ್ಯಾಪ್ತಿಗೆ ಬಿಸ್ಕತ್ ಗಳನ್ನು ಕೂಡ ತರಬೇಕು ಎಂದರು.
Advertisement
ಭಾರತ ಮಾತ್ರವಲ್ಲದೇ ನೈಜಿರಿಯಾ, ಘಾನಾ, ಇಥಿಯೋಪಿಯಾ, ಕೀನ್ಯಾ, ನೇಪಾಳ ಹಾಗೂ ಮೆಕ್ಸಿಕೋ ದೇಶಗಳಲ್ಲಿಯೂ ಪಾರ್ಲೆ ತನ್ನ ಶಾಖೆಗಳನ್ನು ಒಳಗೊಂಡಿದೆ. ಭಾರತದಲ್ಲಿ 1929 ರಲ್ಲಿ ಸ್ಥಾಪನೆಯಾದ ಪಾರ್ಲೆ ಜಿ 10 ತಯಾರಿಕಾ ಘಟಕಗಳನ್ನು ಹೊಂದಿದೆ. ಅಲ್ಲದೇ 125 ಗುತ್ತಿಗೆ ತಯಾರಿಕಾ ಘಟಕಗಳನ್ನು ಒಳಗೊಂಡಿದ್ದು, ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಸುಮಾರು ಸಂಸ್ಥೆಯಲ್ಲಿ ಪೂರ್ಣಾವಧಿ ಹಾಗೂ ಗುತ್ತಿಗೆ ಸೇರಿದಂತೆ ಸುಮಾರು 1 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.