– ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ನೀಡುವ ಜಾಲತಾಣ ಅನಾವರಣ
– ಇಜ್ಞಾನ ಟ್ರಸ್ಟ್ ನಿರ್ವಹಿಸುತ್ತಿರುವ ಲಾಭಾಪೇಕ್ಷೆಯಿಲ್ಲದ ಜಾಲತಾಣ ಈಗ ಇನ್ನಷ್ಟು ವೈವಿಧ್ಯಮಯ
ಮೈಸೂರು: ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿಯ ಪ್ರಕಟಣೆಗೆ ಹೆಸರುವಾಸಿಯಾಗಿರುವ ejnana.com ಜಾಲತಾಣದ ಹೊಸ ರೂಪ ಲೋಕಾರ್ಪಣೆಯಾಗಿದೆ.
Advertisement
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ನಡೆಯುತ್ತಿರುವ ವಿಜ್ಞಾನ ಸಂವಹನ ಸಮಾವೇಶದ ಉದ್ಘಾಟನಾ ಸಮಾರಂಭದ ನಂತರ ಇಜ್ಞಾನ ಜಾಲತಾಣದ ಹೊಸ ಆವೃತ್ತಿಯನ್ನು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ ನಿರ್ದೇಶಕರಾದ ಡಾ. ಕೆ ಎಸ್ ಎಂ ಎಸ್ ರಾಘವರಾವ್, ಹಿರಿಯ ಪ್ರಧಾನ ವಿಜ್ಞಾನಿ ಎಎಸ್ ಕೆವಿಎಸ್ ಶರ್ಮ, ವಿಜ್ಞಾನ ಪ್ರಸಾರ್ ಪ್ರಮುಖ ವಿಜ್ಞಾನಿ ಡಾ. ಟಿ ವಿ ವೆಂಕಟೇಶ್ವರನ್ ಲೋಕಾರ್ಪಣೆಗೊಳಿಸಿದರು.
Advertisement
2007ರಲ್ಲಿ ಪ್ರಾರಂಭವಾದ ಇಜ್ಞಾನ ಜಾಲತಾಣವು ವೈವಿಧ್ಯಮಯ ಮಾಹಿತಿಯ ನಿರಂತರ ಪ್ರಕಟಣೆಯಿಂದಾಗಿ ಕನ್ನಡದ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಉದ್ದೇಶದಿಂದ ಜಾಲತಾಣವನ್ನು ಇದೀಗ ಉನ್ನತೀಕರಿಸಲಾಗಿದ್ದು, ಹೊಸ ವಿನ್ಯಾಸದ ಜೊತೆಗೆ ಅನೇಕ ಹೊಸ ವಿಭಾಗಗಳನ್ನೂ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಸೆ.20, 21 ರಂದು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ
Advertisement
Advertisement
ಹೊಸ ಸ್ವರೂಪದ ಜಾಲತಾಣದಲ್ಲಿ ಬೆಂಗಳೂರು ಮೂಲದ ಕ್ವಿನ್‍ಟೈಪ್ ಟೆಕ್ನಾಲಜೀಸ್ ಸಂಸ್ಥೆ ರೂಪಿಸಿರುವ ಡಿಜಿಟಲ್ ಪಬ್ಲಿಶಿಂಗ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಅದು ಇಜ್ಞಾನದ ಮಾಹಿತಿ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲಿದೆ. ಈ ತಂತ್ರಜ್ಞಾನವನ್ನು ಇಜ್ಞಾನ ಜಾಲತಾಣಕ್ಕೆ ಯಾವುದೇ ಶುಲ್ಕವಿಲ್ಲದೆ ಒದಗಿಸುವ ಮೂಲಕ ಕ್ವಿನ್‍ಟೈಪ್ ಸಂಸ್ಥೆ ಕನ್ನಡದಲ್ಲಿ ವಿಜ್ಞಾನ ಸಂವಹನವನ್ನು ಬಲಪಡಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.
ಇಜ್ಞಾನ ಜಾಲತಾಣದ ಕುರಿತು:
ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಇಜ್ಞಾನ ಜಾಲತಾಣವನ್ನು ನಿರ್ವಹಿಸುತ್ತಿದ್ದು, ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಜನರಿಗೆ ಸರಳವಾಗಿ ತಲುಪಿಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿದೆ. ತಂತ್ರಜ್ಞಾನ ಬರಹಗಾರ ಟಿ. ಜಿ. ಶ್ರೀನಿಧಿ ಈ ತಾಣದ ಸ್ಥಾಪಕ ಸಂಪಾದಕರಾಗಿದ್ದಾರೆ. 2017ರ ಇಂಡಿಯನ್ ಬ್ಲಾಗರ್ ಅವಾರ್ಡ್ಸ್‌ನಲ್ಲಿ ಇಜ್ಞಾನ ಜಾಲತಾಣಕ್ಕೆ ಅತ್ಯುತ್ತಮ ಕನ್ನಡ ಬ್ಲಾಗ್ ಎಂಬ ಗೌರವ ದೊರೆತಿದೆ.