– ರಾಜ್ಯ ಸರ್ಕಾರ ಅಗತ್ಯ ಭೂಮಿ ಹಸ್ತಾಂತರ ಮಾಡಿಲ್ಲ; ಸಂಸದರ ಆರೋಪ
ಮಡಿಕೇರಿ: ಮೈಸೂರು-ಕುಶಾಲನಗರ ಪ್ರಸ್ತಾವಿತ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ಯೋಜನೆ (Mysuru Kushalnagar Railway Project) ಕಾರಣಾಂತರಗಳಿಂದ ರದ್ದುಗೊಂಡಿರುವ ಮಾಹಿತಿ ರೈಲ್ವೆ ಅಧಿಕಾರಿಗಳಿಂದ ಹೊರಬಿದ್ದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರಾಸಕ್ತಿಯಿಂದ ಪ್ರಸ್ತಾವಿತ ಯೋಜನೆಯನ್ನೇ ಕೈಬಿಡಲಾಗಿದೆ.
ಹೌದು. ರೈಲು ಮಾರ್ಗವೇ ಇಲ್ಲದ ಕೊಡಗಿಗೆ ರೈಲು ಬೇಕೆಂಬ ಬೇಡಿಕೆ 2012 ರಿಂದಲೂ ಕೇಳಿಬರುತ್ತಲೇ ಇತ್ತಿ, ಅದಕ್ಕೆ ಪರ – ವಿರೋಧಗಳೂ ಇದ್ದವು. ಜಿಲ್ಲೆಗೆ ರೈಲು ಬಂದ್ರೆ ಇಲ್ಲಿನ ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದು ಪರಿಸರವಾದಿಗಳು ಸೇರಿದಂತೆ ಜಿಲ್ಲೆಯ ಕೆಲವು ಸ್ಥಳೀಯರ ವಾದವಾಗಿತ್ತು. ಹೀಗಾಗಿ ಕೊಡಗಿನ (Kodagu) ಹೆಬ್ಬಾಗಿಲು ಕುಶಾಲನಗರದವರೆಗಾದರೂ ರೈಲು ತರಬೇಕೆಂದು ಹಲವು ಪ್ರಯತ್ನಗಳು ನಡೆದಿತ್ತು. ಇದರ ಫಲವಾಗಿ ಮೈಸೂರು- ಕುಶಾಲನಗರವರೆಗಿನ ಅಂದಾಜು 87.2 ಕಿಮೀ ಉದ್ದದ ರೈಲು ಮಾರ್ಗದ ಯೋಜನೆಗೆ 2018-19ನೇ ಸಾಲಿನಲ್ಲಿ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿತ್ತು. ಬಳಿಕ ಸರ್ವೆ ಕಾರ್ಯವನ್ನೂ ನಡೆಸಲಾಗಿತ್ತು. ಇದೀಗ ರೈಲ್ವೆ ಇಲಾಖೆ ಅಧಿಕಾರಿಗಳು ಈ ಮಾರ್ಗ ದೀರ್ಘಾವಧಿಯಲ್ಲಿ ಲಾಭದಾಯಕವಾಗಿಲ್ಲ ಎಂಬ ವರದಿ ನೀಡಿದ್ದಾರೆ. ಹೀಗಾಗಿ ರೈಲ್ವೆ ಯೋಜನೆಯನ್ನೇ ಕೈಬಿಡಲಾಗಿದೆ ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ.
ಈ ಬಗ್ಗೆ ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಮಾತನಾಡಿ, ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತವಾಗಿದೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನ ರಾಜ್ಯ ಸರ್ಕಾರ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ರೈಲ್ವೆ ಇಲಾಖೆಯ ಗಮನಕ್ಕೆ ತಂದಿದ್ದೇನೆ. ಈ ಭಾಗಕ್ಕೆ ರೈಲ್ವೆ ಯೋಜನೆ ಅಗತ್ಯವಿದೆ. ಮೈಸೂರು-ಕೊಡಗು ಜನರ ಹಿತದೃಷ್ಟಿಯಿಂದ ಯೋಜನೆ ಅನುಷ್ಠಾನಗೊಳ್ಳಬೇಕು. ಮತ್ತೊಮ್ಮೆ ಕೇಂದ್ರದ ಗಮನ ಸೆಳೆಯುತ್ತೇನೆ. ರಾಜ್ಯ ಸರ್ಕಾರ ಕೂಡ ಇದಕ್ಕೆ ಸಹಕಾರ ನೀಡಬೇಕು ಎಂದಿದ್ದಾರೆ.
ಇನ್ನೂ ಈ ರೈಲ್ವೆ ಯೋಜನೆಯಿಂದ ಕೊಡಗು ಜಿಲ್ಲೆಯ ಕಾಫಿ ಉದ್ಯಮ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಬೆಳೆಗಳಾದ ತಂಬಾಕು ಮುಸುಕಿನ ಜೋಳ ಶುಂಠಿ ಇತ್ಯಾದಿ ವಾಣಿಜ್ಯ ಬೆಳೆಗಳ ಸಾಗಾಟ ಪ್ರಕ್ರಿಯೆಗಳಿಗೆ ಈ ಯೋಜನೆ ಲಾಭದಾಯಕವಾಗಿತ್ತು. ಅಲ್ಲದೇ ಮೈಸೂರು ಬೆಳಗೊಳ – ಕುಶಾಲನಗರ ನಡುವಿನ 80 ಕಿಮೀ ಅಂತರದ ಮಾರ್ಗದ ನಡುವೆ ಸೇತುವೆಗಳು ಇನ್ನಿತರ ನಿರ್ಮಾಣ ಸೇರಿದಂತೆ 600 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ಕೇಂದ್ರ ಯೋಜನಾ ಆಯೋಗದ ಮುಂದೆ ಇಡಲಾಗಿತ್ತು.
ಮಡಿಕೇರಿ ಶಾಸಕ ಮಂಥರ್ ಗೌಡ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೇರಿ ಮಾಡುವುದಕ್ಕೆ ಅವಕಾಶ ಇದೆ. ಲ್ಯಾಂಡ್ ಕೋಡುವುದು ರಾಜ್ಯ ಸರ್ಕಾರದ ಕೆಲಸ. ಪ್ರಸ್ತುತ ಕುಶಾಲನಗರದ ಗುಡ್ಡೆಹೊಸೂರು ವರೆಗೂ ಪ್ರಾಜೆಕ್ಟ್ ಮಾಡಿದ್ದಾರೆ. ಈಗ ಮೈಸೂರು ಜಿಲ್ಲೆ ದಾಟಿಯೇ ಕೊಡಗಿಗೆ ರೈಲು ಬರಬೇಕಿದೆ. ಸರಿಯಾದ ರೀತಿಯಲ್ಲಿ ಅಧಿಕಾರಿಗಳು ಲ್ಯಾಂಡ್ ಬಗ್ಗೆ ವರದಿಯನ್ನ ನೀಡಿದ್ರೆ ಮುಖ್ಯಮಂತ್ರಿಗಳೊಂದಿಗೆ ಮಾತಾನಾಡಿ ಭೂಮಿಯನ್ನು ನೀಡಲಾಗುತ್ತದೆ. ಈಗಾಗಲೇ ನಾಲ್ಕು ಲೈನ್ ರಸ್ತೆಗೆ ಲ್ಯಾಂಡ್ ರೈತರು ಬಿಟ್ಟು ಕೊಟ್ಟಿದ್ದಾರೆ. ರೈಲ್ವೆ ಸಚಿವ ಸೋಮಣ್ಣ ಅವರೊಂದಿಗೆ ಮಾತಾನಾಡಿ, ಅನುಮತಿ ಪಡೆಯುವ ಎಲ್ಲಾ ಕಾರ್ಯಗಳನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.



