ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಿನದಿಂದ ದಿನಕ್ಕೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಮೊದಲ ದಿನದಂದು ಈವರೆಗೂ ಹಣ ಗಳಿಕೆಯಲ್ಲಿ ಅದು ಯಾವತ್ತೂ ಹಿಂದೆ ಬಿದ್ದಿಲ್ಲ. ನಿನ್ನೆವರೆಗೂ 180 ಕೋಟಿಗೂ ಅಧಿಕ ಹಣವನ್ನು ಕಾಂತಾರ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಈ ವಾರದ ಕೊನೆಯಲ್ಲಿ ಸಿನಿಮಾ 200 ಕೋಟಿ ಕ್ಲಬ್ (200 Crore Club) ಸೇರಲಿದೆ ಎನ್ನುತ್ತಾರೆ ಟ್ರೇಡ್ ಅನಾಲಿಸಿಸ್.
ಈವರೆಗೂ ಕರ್ನಾಟಕವೊಂದರಲ್ಲೇ 100 ಕೋಟಿಗೂ ಅಧಿಕ ಹಣ ತಂದುಕೊಟ್ಟಿರುವ ಕಾಂತಾರ, ತೆಲಂಗಾಣ, ಉತ್ತರ ಭಾರತ, ಕೇರಳ, ವಿದೇಶದಿಂದ ಬಂದ ಒಟ್ಟು ಹಣ 80 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ವಾರದ ಒಳಗೆ ಸಲೀಸಾಗಿ ಕಾಂತಾರ ಸಿನಿಮಾ 200 ಕೋಟಿ ಕ್ಲಬ್ ಸೇರಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.
ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ (Box Office) ಭರ್ತಿ ಭರ್ತಿ ಆಗುತ್ತಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ ದೈವಕ್ಕೆ ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್.
ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ ‘ , ಚಿತ್ರರಸಿಕರ ನಿರೀಕ್ಷೆಯಂತೆ ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಗಳಿಸಿದೆ. ‘ಕಾಂತಾರ’ ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಕಾಂತಾರ ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಮ್ಸ್ ಯಶಸ್ಸಿನ ಮುಕುಟಕ್ಕೆ ಹೊಸ ಗರಿ ಮೂಡಿದೆ.
ಈವರೆಗೆ ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾಪ್ರಿಯರು ಕಾಂತಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ.