ಇನಾಮ್ದಾರ್ ಈ ಹೆಸರು ಕಿವಿಗೆ ಬಿದ್ದಾಕ್ಷಣ ಛತ್ರಪತಿ ಶಿವಾಜಿ ಮಹರಾಜ್ ನೆನಪಾಗೋದು ಸಹಜ. ಯಾಕಂದ್ರೆ, `ಇನಾಮ್ದಾರ್’ ಪದ್ದತಿಯನ್ನ ಭೂಮಿ ಮೇಲೆ ಅನುಷ್ಕಾನಕ್ಕೆ ತಂದಿದ್ದೇ ಅವರು. ಹೀಗ್ಯಾಕೆ, ನಾವು `ಇನಾಮ್ದಾರ್’ ಪದ್ದತಿ ಕುರಿತಾಗಿ ಮಾತನಾಡ್ತಿದ್ದೇವೆ ಅಂದರೆ ಅದೇ ಹೆಸರಲ್ಲಿ ಕನ್ನಡದಲ್ಲಿ ಒಂದು ಸಿನಿಮಾ ಬರುತ್ತಿದೆ. ಕರಾವಳಿ ಮೂಲದ ನಿರ್ದೇಶಕ ಸಂದೇಶ್ ಶೆಟ್ಟಿ ಆ ಚಿತ್ರವನ್ನು ನಿರ್ದೇಶನ ಮಾಡಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್ ಮೂಲಕ ಸಿನಿದುನಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ `ಇನಾಮ್ದಾರ್’ ಚಿತ್ರ ಈಗ ಟ್ರೈಲರ್ ನಿಂದ ರಾಜಕೀಯ ಪಡಸಾಲೆಯಲ್ಲೂ ಚರ್ಚೆಗೊಳಪಟ್ಟಿದೆ. ಛತ್ರಪತಿ ಶಿವಾಜಿ ಮಹರಾಜ್ ಕನ್ನಡದ ಕುಲ ತಿಲಕ ಎಂದು ಕೂಗಿ ಕೂಗಿ ಹೇಳ್ತಿರುವ `ಇನಾಮ್ದಾರ್’ ಮೇಲೆ ಕನ್ನಡಪರ ಹೋರಾಟಗಾರರು ಹಾಗೂ ಸಂಘಟನೆಗಳು ಮುಗಿಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
Advertisement
ಮರಾಠ ಸಾಮ್ರಾಜ್ಯದ ಚಕ್ರವರ್ತಿ ಛತ್ರಪತಿ ಶಿವಾಜಿ ಮಹರಾಜ್ ಕನ್ನಡಿಗನಾ? ಈ ಪ್ರಶ್ನೆ ಇಂದು ನಿನ್ನೆ ಚರ್ಚೆಗೊಳಪಟ್ಟಿರುವುದಿಲ್ಲ. ತಲೆತಲಾಂತರದಿಂದ ಬುಗಿಲೆದ್ದಿರುವ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ವಾದ-ವಿವಾದಗಳಂತೂ ನಡೆಯುತ್ತಲೇ ಇದೆ. ಶಿವಾಜಿ ಮಹರಾಜ್ ಮೂಲತಃ ಕನ್ನಡಿಗರೇ ಎನ್ನುವವರು ಇದ್ದಾರೆ. ಶಿವಾಜಿ ಕನ್ನಡಿಗನಲ್ಲ ಅಂತ ಕೆಂಡಕಾರುವವರು ಇದ್ದಾರೆ. ಹೀಗಿರುವಾಗ ನಿರ್ದೇಶಕ ಸಂದೇಶ್ ಶೆಟ್ಟಿ ಛತ್ರಪತಿ ಶಿವಾಜಿ ಮಹರಾಜ್ ಕನ್ನಡದ ಕುಲ ತಿಲಕ ಎನ್ನುತ್ತಾ ಅಖಾಡಕ್ಕಿಳಿದಿದ್ದಾರೆ. ಔರಂಗಜೇಬನ ಫ್ಲೆಕ್ಸ್ ಹಾಕೋಕೆ ಅವಕಾಶ ಕೊಡ್ತಾರೆ. ಅದೇ ಶಿವಾಜಿ ಪುತ್ಥಳಿ ಅನಾವರಣ ಮಾಡ್ತೀವಿ ಎಂದರೆ ರೊಚ್ಚಿಗೇಳ್ತಾರೆ. ಇದ್ಯಾವ ನ್ಯಾಯ ಎನ್ನುತ್ತಾ ಕಣ್ಣಲ್ಲೇ ಕೆಂಡ ಉಗುಳುತ್ತಿರುವ ಡೈರೆಕ್ಟರ್ ಸಂದೇಶ್, ಶಿವಾಜಿ ಮಹರಾಜರನ್ನು ಆರಾಧಿಸುವ `ಇನಾಮ್ದಾರ್’ ಕುಟುಂಬದ ಮೇಲೆ ಸಿನಿಮಾ ಮಾಡಿ ಮುಗಿಸಿದ್ದಾರೆ. 2 ನಿಮಿಷ 34 ಸೆಕೆಂಡಿನ ಟ್ರೈಲರ್ ಮೂಲಕವೇ ಕಿಚ್ಚು ಹಚ್ಚಿ ವಾದ-ವಿವಾದಕ್ಕೆ ನಾಂದಿಹಾಡಿದ್ದಾರೆ. ಇದನ್ನೂ ಓದಿ:ಬಿಕಿನಿ ಬಳಿಕ ಮತ್ತೆ ಬೋಲ್ಡ್ ಲುಕ್‌ನಲ್ಲಿ ‘ಗೀತಾ’ ಸೀರಿಯಲ್ ನಟಿ
Advertisement
Advertisement
`ಇನಾಮ್ದಾರ್’ ಚಿತ್ರ ಕೈಗೆತ್ತಿಕೊಳ್ಳುವ ಮೊದಲು ನಿರ್ದೇಶಕ ಸಂದೇಶ್ ಶೆಟ್ಟಿ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಡಾ. ಸರಜೂ ಕಾಟ್ಕರ್ ಅವರು ಬರೆದಿರುವ `ಶಿವಾಜಿ ಮೂಲ ಕನ್ನಡದ ನೆಲ’ ಪುಸ್ತಕವನ್ನೂ ಆಧಾರವಾಗಿಟ್ಟುಕೊಂಡು ಕಥೆ ಸಿದ್ದಪಡಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ `ಇನಾಮ್ದಾರ್’ ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣ ಸಂಘರ್ಷದ ಕಥೆಯನ್ನು ಸಿನಿಮಾವಾಗಿಸಿದ್ದಾರೆ. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಶಾಂತಿಧೂತರು, ಸಮಾನತೆ-ಸೌಹಾರ್ದತೆಯಿಂದ ಬಾಳಬೇಕು ಅನ್ನೋದು ಬರೀ ಬಾಯಿ ಮಾತಿಗೆ ಸೀಮಿತವಾಗಿದೆ. ಜಾತಿ, ಧರ್ಮದಿಂದ ಲಿಂಗ ತಾರತಮ್ಯದಿಂದ ಕಚ್ಚಾಡಿಕೊಳ್ಳುವುದು ಹೆಚ್ಚಾಗುತ್ತಲೇ ಇದೆ. ಅದನ್ನು ತಡೆಯುವ ನಿಟ್ಟಿನಲ್ಲಿ, ಸಮಾಜಕ್ಕೆ ಒಂದು ಸಂದೇಶ ಕೊಡುವ ಹಾದಿಯಲ್ಲಿ ಸಂದೇಶ್ ಶೆಟ್ಟಿ ಆಜ್ರಿಯವರು ಒಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರನ್ನೆಲ್ಲಾ ಒಟ್ಟುಗೂಡಿಸಿಕೊಂಡು ಸಿನಿಮಾ ಮಾಡಿದ್ದಾರೆ. `ಇನಾಮ್ದಾರ್’ ಮೂಲಕ ಬದಲಾವಣೆ ತರಲು ಹೊರಟು ನಿಂತಿದ್ದಾರೆ.
Advertisement
ಈ ಸಿನಿಮಾದಿಂದ ಬೆಳಗಾವಿ ಮೂಲದ ರಂಜನ್ ಛತ್ರಪತಿ ಅನ್ನೋರು ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ಸಂದೇಶ್ ಶೆಟ್ಟಿ ಆಜ್ರಿಯವರು ಪ್ರಮುಖ ಪಾತ್ರ ಪೋಷಣೆ ಮಾಡಿದ್ದಾರೆ. ಹಿರಿಯ ನಟರಾದ ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ ಸೇರಿದಂತೆ ಕಾಂತಾರ ಖ್ಯಾತಿಯ ಬೈಂದೂರು, ಪ್ರಶಾಂತ್ ಸಿದ್ದಿ, ರಘುಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ ಅವರಂತ ಕರಾವಳಿಯ ಪ್ರತಿಭೆಗಳ ಸಮಾಗಮ ಈ ಚಿತ್ರದಲ್ಲಾಗಿದೆ. ಕುಡ್ಲದ ಬೆಡಗಿ ಚಿರಶ್ರೀ ಅಂಚನ್ ಹಾಗೂ ಬಹುಭಾಷೆಯಲ್ಲಿ ಗುರ್ತಿಸಿಕೊಂಡಿರುವ ಎಸ್ತರ್ ನರೋನ್ಹಾ ನಾಯಕಿಯರಾಗಿ ಮಿಂಚಿದ್ದಾರೆ. `ಸಿಲ್ಕು ಮಿಲ್ಕು’ ಹಾಡಿನ ಮೂಲಕ ಬಂಟ್ವಾಳದ ಬ್ಯೂಟಿ ನಟಿ ಎಸ್ತರ್ ನರೋನಾ, ಪಡ್ಡೆಹುಡುಗರ ಮೈ ಬೆವರುವಂತೆ ಮಾಡಿದ್ದಾರೆ. ಉತ್ತರ ಕರ್ನಾಟಕದ ದಾಟಿಯಲ್ಲಿ, ರಾಕಿ ಸೋನು ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ `ಸಿಲ್ಕು ಮಿಲ್ಕು’ ಸಾಂಗ್ ಯೂಟ್ಯೂಬ್‍ನಲ್ಲಿ ಮಿಲಿಯನ್ಸ್ ಗಟ್ಟಲೇ ವೀವ್ಸ್ ಪಡೆದಿದೆ. ಗೀತಾ ಸಾಯಿ ಅವರ ನೃತ್ಯ ನಿರ್ದೇಶನ ಈ ಸಿನಿಮಾಕ್ಕಿದೆ.
ಇನ್ನೂ ಬೆಳಗಾವಿ, ಕುಂದಾಪುರ ಸೇರಿದಂತೆ ಹಲವೆಡೆ `ಇನಾಮ್ದಾರ್’ ಚಿತ್ರೀಕರಣ ನಡೆದಿದೆ. ಮುರುಳಿ ಛಾಯಾಗ್ರಹಣದಲ್ಲಿ, ಶಿವರಾಜ್ ಮೇಹು ಸಂಕಲನದಲ್ಲಿ ಸಿನಿಮಾ ತಯಾರಾಗಿದೆ. ಕತ್ತಲೆ ಕೋಣೆ ಎನ್ನುವ ವಿಭಿನ್ನ ಹಾರರ್ ಬೇಸ್ ಇರುವ ಸೈಂಟಿಫಿಕ್ ಥ್ರಿಲ್ಲರ್ ಚಿತ್ರವನ್ನು ತೆರೆಯ ಮೇಲೆ ತಂದಿದ್ದ ಸಂದೇಶ ಶೆಟ್ಟಿ ಆಜ್ರಿ, 3 ವರ್ಷಗಳ ಗ್ಯಾಪ್ ಬಳಿ ಈ ಬಾರಿ `ಇನಾಮ್ದಾರ್’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ. ನಿರ್ದೇಶಕ ಸಂದೇಶ್ ಶೆಟ್ಟಿಯವರ ಸ್ನೇಹಿತ ನಿರಂಜನ್ ಶೆಟ್ಟಿ ತಲ್ಲೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ಹಾಗೂ ತಸ್ಮೈ ಪ್ರೊಡಕ್ಷನ್ ನಿರ್ಮಾಣದಲ್ಲಿ `ಇನಾಮ್ದಾರ್’ ಅದ್ದೂರಿಯಾಗಿಯೇ ಮೂಡಿಬಂದಿದೆ. ಅಕ್ಟೋಬರ್ 27ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
Web Stories