ಸುಹಾಸ್‌ ಶೆಟ್ಟಿ ಹತ್ಯೆ ಕೇಸ್‌ NIA ಹೆಗಲಿಗೆ

Public TV
2 Min Read

ನವದೆಹಲಿ: ಕೇಂದ್ರ ಗೃಹ ಸಚಿವಾಲಯ (MHA)  ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ  ಹತ್ಯೆ ಪ್ರಕರಣದ (Suhas Shetty Murder Case) ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA)  ವಹಿಸಿದೆ.

ಬಿಜೆಪಿ ಕಾರ್ಯಕರ್ತರು, ನಾಯಕರು ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟಿಸಿದ್ದರು. ಈ ಪ್ರಕರಣದ ಸಂಬಂಧ ಈಗಾಗಲೇ ಪೊಲೀಸರು 11 ಮಂದಿಯನ್ನು ಬಂಧಿಸಿದ್ದರು.

nia mha suhas shetty order

ಮೇ 1 ರಂದು ಫಾಜಿಲ್‌ ಹತ್ಯೆಯ ಆರೋಪಿ ಸುಹಾಸ್‌ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ದೇಶ, ವಿದೇಶಗಳಿಂದ ಫಂಡಿಂಗ್‌ ನಡೆದಿದೆ. ರಾಜ್ಯದ ಪೊಲೀಸ್‌ (Police) ಇಲಾಖೆಯಿಂದ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಎನ್‌ಐಎಗೆ ಒಪ್ಪಿಸಬೇಕೆಂದು ಆಗ್ರಹಿಸಿ ಬಿಜೆಪಿ, ಸೇರಿದಂತೆ ಹಿಂದೂಪರ ಕಾರ್ಯರ್ತರು ಆಗ್ರಹಿಸಿದ್ದರು.

ವಿಜಯೇಂದ್ರ ಸ್ವಾಗತ:
ಕರಾವಳಿ ಜನತೆಯ ಮನವಿಗೆ ಸ್ಪಂದಿಸಿ ನಮ್ಮ ಕೇಂದ್ರ ಸರ್ಕಾರ ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿರುವ ನಿರ್ಧಾರ ಸ್ವಾಗತಾರ್ಹ ಕ್ರಮವಾಗಿದೆ, ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಕರಾವಳಿಯಲ್ಲಿ ಹಿಂದೂ ಸಮುದಾಯ ಆತಂಕ ಪಡುವ ಪರಿಸ್ಥಿತಿ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಭೀಕರವಾಗಿ ನಡು ರಸ್ತೆಯಲ್ಲಿ ಸುಹಾಸ್ ಕೊಲೆ ನಡೆದಿದೆ, ಈ ಪ್ರಕರಣದ ತನಿಖೆಯ ಹಾದಿ ಕಾಂಗ್ರೆಸ್ ಸರ್ಕಾರದ ಆಡಳಿತದ ನೆರಳಿನಲ್ಲಿ ದಿಕ್ಕು ತಪ್ಪುತ್ತಿದ್ದ ಪರಿ ಹಾಗೂ ನ್ಯಾಯದ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರ ನಿರೀಕ್ಷೆ ಕುಸಿಯುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎನ್ಐಎ ಗೆ ವಹಿಸಿರುವ ಕ್ರಮ ಕೊಲೆಗಡುಕರಿಗೆ ಶಿಕ್ಷೆಯಾಗುವ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳ ಷಡ್ಯಂತರ ಬಯಲು ಮಾಡುವ ಭರವಸೆ ಹುಟ್ಟಿಸಿದೆ ಎಂದಿದ್ದಾರೆ.

ಕೋಮು ನಿಗ್ರಹ ದಳದ ಮೂಲಕ ಹಿಂದೂ ಕಾರ್ಯಕರ್ತರನ್ನಷ್ಟೇ ಟಾರ್ಗೆಟ್ ಮಾಡಿ ಕರಾವಳಿ ಪ್ರದೇಶದಲ್ಲಿ ಹಿಂದೂ ಸಮಾಜದ ಯುವಕರ ಭವಿಷ್ಯವನ್ನು ಮುಸುಕಾಗಿಸುವ ಮುಸ್ಲಿಂ ಓಲೈಕೆಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಲು ಬಳಸಿಕೊಳ್ಳುತ್ತಿದ್ದು ಈ ಸಂಬಂಧ ಬಿಜೆಪಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದ್ದಾರೆ.

Share This Article