ಮುಂಬೈ: ದೇಶದ ಆರ್ಥಿಕ ಸುಧಾರಣೆ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ಹಣವನ್ನು ನೀಡಿದೆ.
ದೇಶದ ಕೇಂದ್ರ ಬ್ಯಾಂಕ್ ಆಗಿರುವ ಆರ್‌ಬಿಐ ತನ್ನ ಬಳಿಯಿರುವ ಡಿವಿಡೆಂಡ್ ಮತ್ತು ಸರ್ ಪ್ಲಸ್ ನಿಧಿಯಿಂದ ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ಸರ್ಕಾರಕ್ಕೆ ವರ್ಗಾಯಿಸಲಿದೆ. ಈ ನಿಧಿಯನ್ನು ಸರ್ಕಾರ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಬಳಕೆ ಮಾಡಲಿದೆ. ಇಷ್ಟು ದೊಡ್ಡ ಮೊತ್ತವನ್ನು ಆರ್‌ಬಿಐ ತನ್ನಲ್ಲಿಯ ಸರ್ ಪ್ಲಸ್(ಮೀಸಲು ನಿಧಿ)ನಿಂದ 1.23 ಲಕ್ಷ ಕೋಟಿ ರೂ. ಮತ್ತು ಉಳಿದ ಮೊತ್ತ 52,637 ಕೋಟಿ ರೂ.ವನ್ನು ಸರ್ ಪ್ಲಸ್ ರಿಸರ್ವ್ ನಿಂದ ವರ್ಗಾಯಿಸಲಿದೆ.
Advertisement
Advertisement
2016-17ನೇ ಆರ್ಥಿಕ ವರ್ಷದಲ್ಲಿ ಆರ್‌ಬಿಐ ಬ್ಯಾಲೆನ್ಸ್ ಶೀಟ್ 36.2 ಲಕ್ಷ ಕೋಟಿ ರೂ. ಹೊಂದಿತ್ತು. ಸಾಮಾನ್ಯ ಕಂಪನಿಗಳ ರೀತಿಯಲ್ಲಿ ಆರ್‌ಬಿಐ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಲ್ಲ. ಬ್ಯಾಂಕಿನ ಒಟ್ಟು ಸಂಪನ್ಮೂಲದ ಶೇ.26ರಷ್ಟು ಭಾಗ ರಿಸರ್ವ್ ರೂಪದಲ್ಲಿ ಇರಿಸಲಾಗುತ್ತದೆ. ವಿದೇಶಿ ವಿನಿಮಯ ಮತ್ತು ಭಾರತದ ಸರ್ಕಾರಿ ಭದ್ರತೆಯ ನಿಯಮದಂತೆ ಶೇ.26ರಷ್ಟು ಸಂಪನ್ಮೂಲವನ್ನು ಚಿನ್ನದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಸದ್ಯ ಆರ್‌ಬಿಐ 566 ಟನ್ ಕ್ಕಿಂತಲೂ ಹೆಚ್ಚು ಚಿನ್ನವನ್ನು ಹೊಂದಿದೆ. ಚಿನ್ನದ ಸಂಗ್ರಹಣೆಯನ್ನು ವಿದೇಶಿ ವಿನಿಮಯದೊಂದಿಗೆ ಜೋಡಿಸಿದಾಗ ಬ್ಯಾಂಕಿನ ಸಂಪತ್ತು ಶೇ.77ರಷ್ಟಾಗುತ್ತದೆ. ಕೆಲವೊಮ್ಮೆ ಇದೇ ವಿಷಯಕ್ಕಾಗಿ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ನಡುವೆ ಗೊಂದಲಗಳು ಉಂಟಾಗುತ್ತವೆ. ಆರ್‍ಬಿಐ ಮೀಸಲು ನಿಧಿ ಎಷ್ಟಿರಬೇಕೆಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ.
Advertisement
Advertisement
ಆರ್‌ಬಿಐ ಬಳಿ ರಿಸರ್ವ್ ಬಂದಿದ್ದು ಹೇಗೆ?
ಆರ್‌ಬಿಐ ಎಲ್ಲ ರಿಸರ್ವ್ ಒಂದೇ ರೀತಿಯಾಗಿರಲ್ಲ. 2017-18ರಲ್ಲಿ ಆರ್‌ಬಿಐ ರಿಸರ್ವ್ 6.9 ಲಕ್ಷ ಕೋಟಿ ರೂ. ಇತ್ತು. ಈ ರಿಸರ್ವ್ ವಿದೇಶಿ ವಿನಿಮಯ ಸಂಗ್ರಹ ಮತ್ತು ಗೋಲ್ಡ್ ರಿಸರ್ವ್ ಮೌಲ್ಯವನ್ನು ತೋರಿಸುತ್ತದೆ. ಮಾರುಕಟ್ಟೆಯಲ್ಲಿ ಆಸ್ತಿಯ ಮೌಲ್ಯವು ಬದಲಾದಂತೆ ರಿಸರ್ವ್ ಮೊತ್ತದಲ್ಲಿಯೂ ಕೆಲ ಬದಲಾವಣೆ ಆಗುತ್ತದೆ. ಕಳೆದ ವರ್ಷ ಅಮೆರಿಕಾದ ಡಾಲರ್ ಮುಂದೆ ಭಾರತದ ರೂಪಾಯಿ ಮೌಲ್ಯ ಕುಸಿತಗೊಂಡಾಗ ಚಿನ್ನದ ಬೆಲೆ ಮತ್ತು ಸಿಜಿಆರ್‍ಎ (Currency and Gold Revaluation Account) ಶೇ.30.5ರಷ್ಟು ಏರಿಕೆ ಕಂಡಿತ್ತು.
ಕಂಟಿಜೆನ್ಸಿ ಫಂಡ್:
ಕಂಟಿಜೆನ್ಸಿ ಫಂಡ್ (ಸಿಎಫ್-Contingency Fund) ಸಹ ರಿಸರ್ವ್ ಕಾಪಾಡಿಕೊಳ್ಳಲು ವಿಶೇಷ ಪಾತ್ರವನ್ನು ನಿರ್ವಹಿಸುತ್ತದೆ. ಮಾನಿಟರಿ ಪಾಲಿಸಿ, ಎಕ್ಸ್ ಚೇಂಜ್ ರೇಟ್ ಇತರೆ ಅವಶ್ಯಕತೆಗಳನ್ನು ಪೂರೈಸಲು ಕಂಟಿಜೆನ್ಸಿ ಫಂಡ್ ಸಹಾಯ ಮಾಡುತ್ತದೆ. ಈ ನಿಧಿಯನ್ನು ಮಾರುಕಟ್ಟೆಗೆ ಬಂಡವಾಳವಾಗಿ ಉಪಯೋಗಿಸಿ ಲಿಕ್ವಿಡಿಟಿಯ ಸಮತೋಲನವನ್ನು ಆರ್ ಬಿಐ ಮಾಡಿಕೊಳ್ಳುತ್ತದೆ. ಈ ಮೂಲಕ ಆರ್‌ಬಿಐನಲ್ಲಿ ವಿದೇಶಿ ವಿನಿಮಯದ ಸಂಗ್ರಹದಲ್ಲಿ ಏರಿಕೆ ಕಾಣುವಂತೆ ಮತ್ತು ಮಾರುಕಟ್ಟೆಯಲ್ಲಿಯ ಬೆಲೆ ಏರಿಕೆ-ಇಳಿಕೆಯನ್ನು ನಿಯಂತ್ರಣ ಮಾಡುವ ಕೆಲಸವನ್ನು ಆರ್‌ಬಿಐ ಮಾಡುತ್ತದೆ. 2017-18ರಲ್ಲಿ 2.32 ಲಕ್ಷ ಕೋಟಿ ರೂ. ಕಂಟಿಜೆನ್ಸಿ ಫಂಡ್ ಆರ್‌ಬಿಐ ಬಳಿ ಇತ್ತು. ಸಿಎಫ್ ನಿಧಿ ಆರ್‌ಬಿಐನ ಆಸ್ತಿಯ ಒಟ್ಟಾರೆ ಶೇ.6.4ರಷ್ಟಿತ್ತು. ಸಿಜಿಆರ್‍ಎ ಮತ್ತು ಸಿಎಫ್ ಎರಡು ಸೇರಿಸಿದಾಗ ಆರ್‌ಬಿಐ ಆಸ್ತಿಯ ಮೌಲ್ಯ ಶೇ.26ರಷ್ಟು ಆಗಲಿದೆ.
ಆರ್‌ಬಿಐ ಸರ್ ಪ್ಲಸ್ ಎಷ್ಟಿದೆ?
ಆರ್‌ಬಿಐ ತನ್ನ ಬಳಿಯಿರುವ ಸರ್ ಪ್ಲಸ್ ನ್ನು ಸದ್ಯ ಸರ್ಕಾರಕ್ಕೆ ವರ್ಗಾಯಿಸಿದೆ. ಆರ್‌ಬಿಐ ತನ್ನ ಹಣಕಾಸಿನ ಸ್ಟೇಟ್‍ಮೆಂಟ್ ಎರಡು ಪ್ರಮುಖ ಭಾಗಗಳಿವೆ. ಮೊದಲನೇಯದ್ದು ಆರ್‌ಬಿಐ ತನ್ನ ಆದಾಯಕ್ಕೆ ತೆರಿಗೆಯನ್ನು ನೀಡಲ್ಲ. ಹಾಗಾಗಿ ತನ್ನ ಅವಶ್ಯಕತೆಗೆ ಬಳಕೆಯಾಗಿ ಉಳಿದ ಮೊತ್ತವನ್ನು ಸರ್ ಪ್ಲಸ್ ರೂಪದಲ್ಲಿ ಉಳಿಸಿಕೊಳ್ಳುತ್ತದೆ. ಸರ್ ಪ್ಲಸ್ ರೂಪದಲ್ಲಿ ಉಳಿಸಿಕೊಂಡಿರುವ ಮೊತ್ತವನ್ನು ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. ಎರಡನೇಯದ್ದು ತನ್ನ ಸೆಕ್ಯೂರಿಟಿಗೆ ಬಡ್ಡಿಯನ್ನು ಆರ್‌ಬಿಐ ಪಡೆದುಕೊಳ್ಳುತ್ತದೆ. 2017-18ನೇ ವರ್ಷದಲ್ಲಿ ಆರ್‌ಬಿಐ ಕಂಟಿಜೆನ್ಸಿ ಫಂಡ್ ನಿಂದ 14,200 ಕೋಟಿ ರೂ.ಯನ್ನು ತನ್ನ ಖರ್ಚಿಗೆ ಬಳಸಿಕೊಂಡಿತ್ತು. ಸಿಎಫ್ ನಿಂದ ಮೊತ್ತ ಹೊರ ಹೋದಷ್ಟು ಆರ್‌ಬಿಐ ಸರ್ ಪ್ಲಸ್ ಕಡಿಮೆ ಆಗುತ್ತದೆ. 2013-14ರಿಂದ ಮೂರು ವರ್ಷ ಆರ್‌ಬಿಐ ಸಿಎಫ್ ನಿಂದ ಹಣ ಹೊರ ತೆಗೆದಿಲ್ಲ. ಟೆಕ್ನಿಕಲ್ ಕಮಿಟಿ ಪ್ರಕಾರ ಆರ್‌ಬಿಐ ಎಕನಾಮಿಕ್ ಕ್ಯಾಪಿಟಲ್ ಹೊಂದಿದ್ದರಿಂದ ಸಿಎಫ್ ನಿಂದ ತಗೆಯಲಿಲ್ಲ. ಕಳೆದ ವರ್ಷ ಬ್ಯಾಂಕುಗಳು ಸಿಎಫ್ ನಲ್ಲಿ ಹಣವನ್ನು ಮೀಸಲಿರಿಸಿವೆ.
ಸರ್ ಪ್ಲಸ್ ಹೆಚ್ಚಾಗಿದ್ದು ಹೇಗೆ?
ಈ ವರ್ಷ ಆರ್‌ಬಿಐ ದಾಖಲೆಯ ಪ್ರಮಾಣದಲ್ಲಿ ಸರ್ ಪ್ಲಸ್ ಹೊಂದಿತ್ತು. ಕಾರಣ ಕಳೆದ ವರ್ಷ ಬ್ಯಾಂಕ್ ಚಿನ್ನ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿತ್ತು. ಹಾಗಾಗಿ ಆರ್‌ಬಿಐ ಹೆಚ್ಚಿನ ಲಾಭಾಂಶದಲ್ಲಿ ಡಾಲರ್ ನ್ನು ಮಾರಾಟ ಮಾಡಿತ್ತು. ಹಣಕಾಸಿನ ಮಾರುಕಟ್ಟೆ (Money market)ಯಲ್ಲಿ ದಾಖಲೆ ಪ್ರಮಾಣದಲ್ಲಿ ಬಾಂಡ್ ಖರೀದಿಸಿದ್ದರಿಂದ, ಆರ್‌ಬಿಐ ಒಳ್ಳೆಯ ಬಡ್ಡಿ ಲಭ್ಯವಾಗುತ್ತಿದೆ. ನಿವೃತ್ತ ಆರ್‌ಬಿಐ ಗವರ್ನರ್ ಬಿಮಲ್ ಜಲನ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಹಣ ನೀಡಬಹುದು ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸ್ಸನ್ನು ಆರ್‌ಬಿಐ ಈಗ ಅನುಷ್ಠಾನ ಮಾಡಿದ್ದು ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ಹಣವನ್ನು ವರ್ಗಾಯಿಸಿದೆ.
ಇದೇ ಮೊದಲ ಬಾರಿಯಲ್ಲ:
ಸರ್ಕಾರಕ್ಕೆ ಹಣವನ್ನು ಆರ್‌ಬಿಐ ವರ್ಗಾವಣೆ ಮಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಆದರೆ ಇಷ್ಟೊಂದು ದಾಖಲೆ ಪ್ರಮಾಣದಲ್ಲಿ ವರ್ಗಾವಣೆ ಮಾಡುತ್ತಿರುವುದು ಇದೇ ಮೊದಲು. 2008 – 15,011 ಕೋಟಿ ರೂ., 2009 – 25,009 ಕೋಟಿ ರೂ., 2010 – 18,759 ಕೋಟಿ ರೂ., 2011 – 15,009 ಕೋಟಿ ರೂ.,2012 – 16,010 ಕೋಟಿ ರೂ., 2013 – 33,010 ಕೋಟಿ ರೂ., 2014 – 52,679 ಕೋಟಿ ರೂ., 2015 – 65,896 ಕೋಟಿ ರೂ., 2016 – 65,876 ಕೋಟಿ ರೂ., 2017 – 30,659 ಕೋಟಿ ರೂ., 2018 – 50,000 ಕೋಟಿ ರೂ. ವರ್ಗಾವಣೆಯಾಗಿದೆ.