ಚಂಡೀಗಢ: ಹನುಮ ವೇಷಧಾರಿಯೊಬ್ಬರು (Lord Hanuman) ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ.
ಮೃತರನ್ನು ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಇವರು ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಲೀಲಾ ಸ್ಕಿಟ್ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಹರೀಶ್ ಮೆಹ್ತಾ (Harish Mehta) ಅವರು ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಸ್ಕಿಟ್ ಮಾಡ್ತಿದ್ದಂತೆಯೇ ಹರೀಶ್ ಮೆಹ್ತಾ ಏಕಾಏಕಿ ಕುಸಿದು ಬಿದ್ದರು. ಆದರೆ ಪ್ರೇಕ್ಷಕರು ಮಾತ್ರ ಇದು ಸ್ಕಿಟ್ ಭಾಗವೆಂದು ಭಾವಿಸಿ ಕೂಡಲೇ ಯಾರೂ ರಕ್ಷಣೆಗೆ ಬರಲಿಲ್ಲ. ಆದರೆ ಕೆಲಹೊತ್ತಾದರೂ ಮೆಹ್ತಾ ಅವರು ಎದ್ದೇಳಲೇ ಇಲ್ಲ. ಇದರಿಂದ ಆತಂಕಗೊಂಡ ಜನ ತಕ್ಷಣವೇ ಕಾರ್ಯಪ್ರವೃತ್ತರಾದರು.
ಕೂಡಲೇ ಸ್ಥಳೀಯರು ಮೆಹ್ತಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಅವರಿಗೆ ಹೃದಯಾಘಾತವಾಗಿರುವುದಾಗಿ ವೈದರು ಹೇಳಿದ್ದಾರೆ. ಹರೀಶ್ ಮೆಹ್ತಾ ಅವರು, ಕಳೆದ 25 ವರ್ಷಗಳಿಂದ ಹಲವಾರು ರಾಮಲೀಲಾ ಸ್ಕಿಟ್‌ಗಳಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇತ್ತ ನಿನ್ನೆ ಅಯೋಧ್ಯೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಅಯೋಧ್ಯೆಯಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದ 65 ವರ್ಷದ ವ್ಯಕ್ತಿಯನ್ನು ಇಂಡಿಯನ್ ಏರ್ ಫೋರ್ಸ್ (IAF) ತಂಡವು ರಕ್ಷಿಸಿದೆ.