-3 ತಿಂಗಳಲ್ಲಿ ಚಿರತೆ, ಹುಲಿ ಸೇರಿ 20 ಅಪರೂಪದ ಪ್ರಾಣಿಗಳ ಸರಣಿ ಸಾವು
ಆನೇಕಲ್: ಮೈಸೂರು ಮಹಾರಾಜರ ಕುಟುಂಬ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಇರಿಸಿದ್ದ ಚಿರತೆ ದಿಢೀರ್ ಸಾವನ್ನಪ್ಪಿದ್ದು, ಬನ್ನೇರುಘಟ್ಟ ಪಾರ್ಕ್ ಅಧಿಕಾರಿಗಳ ವಿರುದ್ಧ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡಿಪುರ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಚಿರತೆ ಮರಿಯನ್ನು ಮೈಸೂರು ಮಹಾರಾಜರ ಕುಟುಂಬ ರಕ್ಷಣೆ ಮಾಡಿತ್ತು. ಅದಕ್ಕೆ ಶ್ಯಾಡೋ ಎಂದು ಹೆಸರಿಟ್ಟು, ಮೈಸೂರು ಮೃಗಾಲಯಕ್ಕೆ ಹಸ್ತಾಂತರಿಸಿದ್ದರು. ಬಳಿಕ ಅಲ್ಲಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಇದೀಗ ಚಿರತೆ ದಿಢೀರ್ ಸಾವನ್ನಪ್ಪಿದೆ. ಚಿರತೆ ಸಾವನ್ನಪ್ಪಿದ್ದು ಯಾಕೆ? ಚಿರತೆಗೆ ಏನಾಯ್ತು ಎಂಬ ಪ್ರಶ್ನೆ ಮೂಡಿದೆ.ಇದನ್ನೂ ಓದಿ: ಮುಂಬೈ ದಾಳಿಕೋರ ತಹವ್ವೂರ್ ಅರ್ಜಿ ವಜಾ – ಶೀಘ್ರವೇ ಭಾರತಕ್ಕೆ ಹಸ್ತಾಂತರ
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ರೆಸ್ಕ್ಯೂ ಸೆಂಟರ್‌ಲ್ಲಿದ್ದ ಹೆಣ್ಣು ಚಿರತೆ ಶ್ಯಾಡೋ ದಿಢೀರ್ ಸಾವನ್ನಪ್ಪಿದೆ. ಆದರೆ ಆರೋಗ್ಯವಾಗಿದ್ದ ಚಿರತೆ ಸಾವಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅನುಭವಿ ವೈದ್ಯರು ಮತ್ತು ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯಗಳು ಕಾರಣ ಎಂದು ಪ್ರಾಣಿ ಪ್ರಿಯರ ಆರೋಪವಾಗಿದೆ. ಇನ್ನೂ ಕಳೆದ ಮೂರು ತಿಂಗಳಲ್ಲಿ ಚಿರತೆ, ಹುಲಿ ಸೇರಿ 20 ಅಪರೂಪದ ಪ್ರಾಣಿಗಳ ಸರಣಿ ಸಾವನ್ನಪ್ಪಿದೆ.
ಇನ್ನೂ 2 ಸಾವಿರಕ್ಕೂ ಅಧಿಕ ಅಪರೂಪದ ವ್ಯನ್ಯ ಜೀವಿಗಳ ತಾಣವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ವರ್ಷಕ್ಕೆ 50 ಕೋಟಿ ರೂ.ಗಿಂತಲೂ ಅಧಿಕ ಹಣ ಸಂಗ್ರಹವಾಗುತ್ತಿದೆ. ಆದರೆ ಪ್ರಾಣಿಗಳ ಪಾಲನೆ ಪೋಷಣೆಗಿರುವುದು ಓರ್ವ ವೈದ್ಯ ಮಾತ್ರ. ನುರಿತ ವೈದ್ಯರ ಜೊತೆಗೆ ಇಬ್ಬರು ಆರ್‌ಎಫ್‌ಓ ಮತ್ತು ಡೆಪ್ಯುಟಿ ಡೈರೆಕ್ಟರ್ ಹುದ್ದೆ ಖಾಲಿ ಇದೆ. ಡಿಆರ್‌ಎಫ್‌ಓಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಒತ್ತಡದಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೆ 2024-25ನೇ ಸಾಲಿನಲ್ಲಿ 15 ಕೋಟಿ ರೂ.ಗೂ ಅಧಿಕ ಹಣವನ್ನು ಕಚೇರಿ (ಅಂದಾಜು 7ಕೋಟಿ ರೂ.) ಸೇರಿದಂತೆ ಅನಗತ್ಯ ಕಾಮಗಾರಿಗಳಿಗೆ ಹಣ ದುರ್ಬಳಕೆ ಮಾಡಲಾಗುತ್ತಿದೆ.
ಈ ಬಗ್ಗೆ ಪ್ರಶ್ನಿಸಿದಾಗ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಅವರು, 2,000ಕ್ಕೂ ಅಧಿಕ ಪ್ರಾಣಿಗಳಿರುವ ಉದ್ಯಾನವನದಲ್ಲಿ ವರ್ಷಕ್ಕೆ ನೂರಕ್ಕೂ ಅಧಿಕ ಪ್ರಾಣಿಗಳು ಸಾಯುವುದು ಸರ್ವೇ ಸಾಮಾನ್ಯವಾಗಿದೆ. ಕಾಮಗಾರಿಗಳನ್ನು ಪ್ರಾಧಿಕಾರದ ಅನುಮತಿ ಪಡೆದು ನಡೆಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಾಣಿಗಳು ಮತ್ತು ಪ್ರವಾಸಿಗರಿಗೆ ಆದ್ಯತೆ ನೀಡಬೇಕಿದ್ದ ಉದ್ಯಾನವನದ ಅಧಿಕಾರಿಗಳು ಕೋಟಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಅಪರೂಪದ ಪ್ರಾಣಿಗಳ ಪಾಲನೆ ಪೋಷಣೆಗೆ ಹೆಚ್ಚು ಗಮನ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.ಇದನ್ನೂ ಓದಿ: ಚಿತ್ರರಂಗ ಕೇಳಿದ್ದೆಲ್ಲಾ ಸಿಎಂ ಕೊಡುತ್ತಲೇ ಬಂದಿದ್ದಾರೆ: ನರಸಿಂಹಲು