ಬೆಳಗಾವಿ: ಕೂಡಲಸಂಗಮ ಅಭಿವೃದ್ಧಿ ಮಂಡಳಿ ಯೋಜನೆ (Kudalasangama Development Board Project) ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಶೀಘ್ರದಲ್ಲಿ ಬಾಕಿ ಉಳಿದಿರುವ ಮ್ಯೂಸಿಯಂ ಕೆಲಸವನ್ನೂ ಮುಗಿಸಿ ಜನರಿಗೆ ಸಮರ್ಪಣೆ ಮಾಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯರಾದ ನಿರಾಣಿ ಹಣಮಂತ ರುದ್ರಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಮ್ಮ ಕೂಸು, ನಮ್ಮ ಮಹತ್ವಾಕಾಂಕ್ಷೆ ಯೋಜನೆ. ಈ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿರುವುದು ನಿಜ. ಈಗಾಗಲೇ ಸಿವಿಲ್ ಕಟ್ಟಡ ಕಾಮಗಾರಿ ಕೆಲಗಳು ಮುಗಿದಿವೆ. ಇನ್ನೂ ಮ್ಯೂಸಿಯಂ ಕೆಲಸಗಳು ಮಾತ್ರ ಬಾಕಿ ಇದ್ದು, ಕ್ಷಿಪ್ರಗತಿಯಲ್ಲಿ ಆ ಕೆಲಸಗಳನ್ನೂ ಮುಗಿಸುವ ಬದ್ಧತೆ ನಮ್ಮ ಸರ್ಕಾರಕ್ಕೆ ಇದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಕೃಷಿ ಮಾಡೋ ಯುವಕರಿಗೆ ಹೆಣ್ಣು ಸಿಕ್ತಿಲ್ಲ, ಇಂತವರಿಗೆ ಸರ್ಕಾರ 25 ಲಕ್ಷ ಸಹಾಯ ಧನ ನೀಡಬೇಕು: ಪುಟ್ಟಣ್ಣ
ಸಿದ್ದೇಶ್ವರ ಶ್ರೀಗಳು ತಜ್ಞರ ಸಮಿತಿ ರಚಿಸಿ ಮ್ಯೂಸಿಯಂ ಹೇಗಿರಬೇಕು ಎಂಬ ಕುರಿತು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳ ಅನ್ವಯ ಕಟ್ಟಡ ಕೆಲಸ ಮುಗಿದಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಇವತ್ತಿನ ಕಾಲಕ್ಕೆ ಬಸವಣ್ಣನ ಜೀವನ ಅರ್ಥ ಮಾಡಿಸುವ ಶೈಲಿಯಲ್ಲಿ ಮ್ಯೂಸಿಯಂ ಮಾಡುವ ಕೆಲಸ ಮಾತ್ರ ಬಾಕಿ ಇದೆ. ಬಸವಣ್ಣನ ಜೀವನ ದರ್ಶನ ಮ್ಯೂಸಿಯಂ ಗೆ ಹೆಚ್ಚುವರಿಯಾಗಿ 10.70 ಕೋಟಿ ರೂ. ಅಂದಾಜು ತಯಾರು ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಆ ಹಣವನ್ನೂ ಮಂಜೂರು ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಉಳಿದಂತೆ ಈ ಹಿಂದೆ ಕಾಂಗ್ರೆಸ್ (Congress) ಸರ್ಕಾರದ ಇದದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಕೂಡಲಸಂಗಮ ಅಭಿವೃದ್ಧಿ ಮಂಡಳಿ ಯೋಜನೆ 64 ಕೋಟಿ ರೂ. ಮಂಜೂರು ಮಾಡಿ ಗುದ್ದಲಿ ಪೂಜೆ ನೆರವೇರಿಸಿದ್ದರು. ತದನಂತರ ಕಾಲಕಾಲಕ್ಕೆ ತಕ್ಕಂತೆ ಅಗತ್ಯ ಅನುದಾನ ನೀಡಿದ್ದೇವೆ. ಬಾಕಿ ಅಭಿವೃದ್ಧಿಗೆ ಕೊಡಬೇಕಾದ ಅನುದಾನ ನೀಡಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ಕೆಲಸವನ್ನು ಆರಂಭಿಸಿದ್ದು ನಾವೇ, ಇಲ್ಲಿವರೆಗೆ ತಂದಿರುವುದೂ ನಾವೇ. ಬಾಕಿ ಇರುವ ಕೆಲಸವನ್ನೂ ನಾವೇ ಮುಗಿಸುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಈಗಲೂ ಸಹ ಮಂಡಳಿಯಲ್ಲಿ 9.60 ಕೋಟಿ ರೂ. ಅನುದಾನ ಇದೆ. ಅದನ್ನು ಮ್ಯೂಸಿಯಂ ಕಾಮಗಾರಿಗೆ ಬಳಸಲಿದ್ದೇವೆ ಎಂದರು. ಇದನ್ನೂ ಓದಿ: ಕಾವೇರಿ-2, ಇ-ಸ್ವತ್ತು ಡಿಜಿಟಲ್ ಡೇಟಾ ಲಿಂಕ್‌ಗೆ ತ್ವರಿತ ಪರಿಹಾರ: ಕೃಷ್ಣ ಬೈರೇಗೌಡ
ಒಟ್ಟಾರೆ ಸಿದ್ದೇಶ್ವರ ಶ್ರೀ ನೀಡಿದ ನೀಲಿನಕ್ಷೆ ಪ್ರಕಾರವಾಗಿಯೇ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ನಿಜ. ಆದರೆ, ಮುಂದಿನ ದಿನಗಳಲ್ಲಿ ವಿಶೇಷವಾಗಿ ಪರಿಗಣಿಸಿ ಕ್ಷಿಪ್ರಗತಿಯಲ್ಲಿ ಕಾಮಗಾರಿ ಮುಗಿಸಲು ಪ್ರಯತ್ನಿಸಲಾಗುವುದು. ಇಷ್ಟು ದಿನ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದರು. ಆದರೆ, ಮುಖ್ಯಮಂತ್ರಿಗಳಿಗೆ ಸಮಯ ಇಲ್ಲದ ಕಾರಣ ಆಯಾ ಜಿಲ್ಲೆಯ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇನ್ಮೇಲೆ ಕಾಮಗಾರಿಗೆ ವೇಗ ತಂದು ಮ್ಯೂಸಿಯಂ ಕೆಲಸ ಮುಗಿಸಿ ಜನರಿಗೆ ಸಮರ್ಪಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಸದಸ್ಯರಾದ ನಿರಾಣಿ ಹಣಮಂತ ರುದ್ರಪ್ಪ ಅವರು ಕಾಮಗಾರಿಯನ್ನು ಮುಗಿಸುವ ಸಮಯವನ್ನು ಖಚಿತಪಡಿಸಿ ಎಂದು ಕೇಳಿದಾಗ ಸಿಡಿಮಿಡಿಗೊಂಡ ಸಚಿವ ಕೃಷ್ಣ ಬೈರೇಗೌಡ ಅವರು, 2016-17 ರಲ್ಲೇ ಈ ಕಾಮಗಾರಿಗೆ ಚಾಲನೆ ನೀಡಿ ಅಂದಿನ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ನಂತರ ಅಧಿಕಾರಕ್ಕೆ ಬಂದ ನೀವೇನು ನಿದ್ದೆ ಮಾಡ್ತಾ ಇದ್ರ? ನಿಮ್ಮಿಂದಲೇ ಕೆಲಸ ನಿಧಾನವಾಗಿದೆ. ನೈಜತೆಯ ವಿಚಾರ ಹೇಳಿದರೆ ಅದನ್ನು ರಾಜಕೀಯವಾಗಿ ಬಳಕೆ ಮಾಡಬಾರದು ಎಂದು ಆಕ್ರೋಶ ಹೊರಹಾಕಿದರು. ಅಲ್ಲದೇ ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಸಂಬಂಧಪಟ್ಟ ಜಮೀನನ್ನು ಬೇರೆಯವರಿಗೆ ನೀಡುವ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿದರು.

