ವಾರದಿಂದ ವಿವಾದದ ಕಿಡಿ ಹೊತ್ತಿಸಿರುವ ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ಹಲವು ರಾಜ್ಯಗಳು ನಿಷೇಧ (Ban) ಮಾಡಿವೆ. ಇನ್ನೂ ಕೆಲವು ರಾಜ್ಯಗಳಲ್ಲಿ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಅದರಂತೆ ಪಶ್ಚಿಮ ಬಂಗಾಳದಲ್ಲೂ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಚಿತ್ರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ನಡೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ದಿದಿ ವಿರುದ್ಧ ಗುಡುಗಿದ್ದಾರೆ.
ಮಮತಾ ಬ್ಯಾನರ್ಜಿ ಕ್ರಮವನ್ನು ಖಂಡಿಸಿರುವ ಸ್ಮೃತಿ ಇರಾನಿ, ಈ ಸಿನಿಮಾವನ್ನು ವಿರೋಧಿಸುವವರು ಭಯೋತ್ಪಾದನೆಗೆ ಬೆಂಬಲಿಸಿದಂತೆ ಎಂದು ಹೇಳಿಕೆ ನೀಡಿದ್ದಾರೆ. ಈ ಸಿನಿಮಾವನ್ನು ವಿರೋಧಿಸುವವರು ಭಯೋತ್ಪಾದಕರ ಜೊತೆ ಕೈ ಜೋಡಿಸಿದ್ದಾರೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇಂತಹ ಚಿತ್ರಗಳನ್ನು ಎಲ್ಲರೂ ನೋಡಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.
ದಿ ಕೇರಳ ಸ್ಟೋರಿ ಚಿತ್ರದ ನಿರ್ಮಾಪಕರು ಪಶ್ಚಿಮ ಬಂಗಾಳದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಅದೇ ಅರ್ಜಿಯಲ್ಲೇ ತಮಿಳು ನಾಡು ಸರಕಾರಕ್ಕೆ ಚಿತ್ರಮಂದಿರಗಳಿಗೆ ಭದ್ರತೆ ನೀಡುವಂತೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಭದ್ರತೆ ದೃಷ್ಟಿ ಕಾರಣವನ್ನು ನೀಡಿ ತಮಿಳು ನಾಡಿನ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರಿಂದ ಒಂದೇ ಅರ್ಜಿಯಲ್ಲೇ ಎರಡೂ ವಿಷಯಗಳನ್ನು ಪ್ರಸ್ತಾಪ ಮಾಡಿದೆ ಚಿತ್ರತಂಡ. ಇದನ್ನೂ ಓದಿ:ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್
ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲೂ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದರು. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ.