ನಾಮಿನೇಷನ್ ಲಿಸ್ಟ್ ನಲ್ಲಿ ಇಲ್ಲ ‘ದಿ ಕಾಶ್ಮೀರ್ ಫೈಲ್ಸ್’ : ಬಾಯ್ಕಾಟ್ ಆಸ್ಕರ್ ಎಂದ ಫ್ಯಾನ್ಸ್

ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ನಡೆದ ಆಸ್ಕರ್ ಪ್ರಶಸ್ತಿಯ ನಾಮ ನಿರ್ದೇಶನ ಘೋಷಣೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ. ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಸಂಜೆ 7 ಗಂಟೆಯ ಹೊತ್ತಿಗೆ ಈ ಪ್ರಕ್ರಿಯೆ ನಡೆದಿದ್ದು ಭಾರತದ ಹಲವು ಸಿನಿಮಾಗಳ ನಾಮಿನೇಷನ್ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ನಿರೀಕ್ಷಿಸಲಾಗಿತ್ತು. ಅದರಲ್ಲೂ ದಿ ಕಾಶ್ಮೀರ್ ಫೈಲ್ ನಾಮ ನಿರ್ದೇಶನ ಪಟ್ಟಿಯಲ್ಲಿ ಇರಲಿದೆ ಎಂದೇ ನಂಬಲಾಗಿತ್ತು. ನಂಬಿಕೆ ಹುಸಿಯಾಗಿದೆ.
ಈ ಬಾರಿಯ ಆಸ್ಕರ್ ಪ್ರಶಸ್ತಿಗಾಗಿ ಕನ್ನಡದ ಸಿನಿಮಾಗಳಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ, ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರಗಳು ಕೂಡ ಇದ್ದವು. ಜೊತೆಗೆ ತೆಲುಗು ಸಿನಿಮಾ ರಂಗದಿಂದ ಆರ್.ಆರ್.ಆರ್, ತಮಿಳಿನಿಂದ ಇರುವಿನ್ ನಿಲಳ್ ಹಾಗೂ ರಾಕೆಟ್ರಿ ದಿ ನಂಭಿ ಎಫೆಕ್ಟ್ ಚಿತ್ರಗಳು ಸ್ಪರ್ಧೆ ಮಾಡುತ್ತಿವೆ. ಹಿಂದಿಯಿಂದ ಗಂಗೂಬಾಯಿ ಕಾಠಿಯಾವಾಡಿ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಳಿವೆ. ಗುಜರಾತಿನಿಂದ ಛೆಲ್ಲೋ ಶೋ, ಚಿತ್ರವೊಂದನ್ನು ಕಳುಹಿಸಲಾಗಿದೆ. ಮಿ ವಸಂತ್ ರಾವ್, ದಿ ನೆಕ್ಸ್ಸಟ್ ಮಾರ್ನಿಂಗ್, ತುಜೆ ಸಾಥಿ ಕಹಿ ಸೇರಿದಂತೆ ಭಾರತದಿಂದಲೇ ಹಲವು ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದವು. ಆದರೆ, ಈ ಸಿನಿಮಾಗಳ ಪೈಕಿ ಕೇವಲ ಮೂರು ಚಿತ್ರಗಳು ನಾಮಿನೇಷನ್ ಪಟ್ಟಿಯಲ್ಲಿವೆ.
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಮತ್ತು ಆಲ್ ದಟ್ ಬ್ರೀಥ್ಸ್, ದಿ ಎಲಿಫೆಂಟ್ ವಿಸ್ಪರ್ಸ್ ಕಿರುಚಿತ್ರಗಳು ನಾಮ ನಿರ್ದೇಶನಗೊಂಡಿವೆ. ಆದರೆ, ದಿ ಕಾಶ್ಮೀರ್ ಫೈಲ್ಸ್ ಇಲ್ಲ ಎನ್ನುವ ಕಾರಣಕ್ಕಾಗಿ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಆಸ್ಕರ್ ಹ್ಯಾಶ್ ಟ್ಯಾಗ್ ಮೂಲಕ ಬಹಿಷ್ಕರಿಸಿ ಎಂದು ಅಭಿಮಾನ ನಡೆಸಿದ್ದಾರೆ. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ
ಈ ಬಾರಿಯ ಪ್ರಶಸ್ತಿಗಾಗಿ ಒಟ್ಟು ಮುನ್ನೂರು ಸಿನಿಮಾಗಳನ್ನು ಆಯ್ಕೆ ಮಾಡಲಾಗಿತ್ತು. ಮುನ್ನೂರು ಸಿನಿಮಾಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ನಾಮಿನೇಷನ್ ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಆಸ್ಕರ್ ಪ್ರಶಸ್ತಿಗಾಗಿ ಆಯ್ಕೆ ನಡೆಯುತ್ತದೆ. ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಮಾರ್ಚ್ 12ರಂದು ಘೋಷಿಸಲಾಗುವುದು. ಇಂದು ಕೇವಲ ನಾಮ ನಿರ್ದೇಶನಗೊಂಡ ಸಿನಿಮಾಗಳನ್ನು ಮಾತ್ರ ಘೋಷಿಸಲಾಗುತ್ತದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k