UGCET: ದಾಖಲೆಗಳ ಆನ್‌ಲೈನ್ ಪರಿಶೀಲನೆ – ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟ

Public TV
2 Min Read
KEA

ಬೆಂಗಳೂರು: ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್ ಸೇರಲು ಬಯಸಿ, ಅಭ್ಯರ್ಥಿಗಳು ಯುಜಿಸಿಇಟಿ-2024 (UGCET-2024) ಆನ್‌ಲೈನ್ ಅರ್ಜಿಯಲ್ಲಿ ಕ್ಲೇಮ್ ಮಾಡಿದ್ದ ವಿವಿಧ ಮೀಸಲಾತಿಗಳನ್ನು ಪರಿಗಣಿಸಿ ಆನ್‌ಲೈನ್ ಮೂಲಕ ಪರಿಶೀಲನೆ ನಡೆಸಲಾಗಿದೆ. ಈ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿದ SATS (ಸ್ಯಾಟ್ಸ್) ಸಂಖ್ಯೆ ಆಧರಿಸಿ ಅಭ್ಯರ್ಥಿಗಳ ವ್ಯಾಸಂಗ, ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗದ ವಿವರಗಳನ್ನು ಪರಿಶೀಲಿಸಲಾಗಿದೆ. ಅದೇ ರೀತಿಯಾಗಿ, RD (ಆರ್‌ಡಿ) ಸಂಖ್ಯೆ ಆಧರಿಸಿ ಮೀಸಲಾತಿ (ಎಸ್‌ಸಿ, ಎಸ್‌ಟಿ, ಪ್ರವರ್ಗ-1, 2ಎ, 2ಬಿ, 3ಎ, 3ಬಿ) 371(ಜೆ), ಧಾರ್ಮಿಕ ಅಲ್ಪಸಂಖ್ಯಾತ, ಎನ್‌ಸಿಎಲ್‌ಸಿ (Non Creamy Layer Certificate) ಮತ್ತು ಇತರೆ ಮಾಹಿತಿಯನ್ನು ಆಯಾ ಇಲಾಖೆಯ ವೆಬ್‌ಸರ್ವೀಸ್ ಮೂಲಕ ಪರಿಶೀಲಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿಯಲ್ಲಿ ಕೋಟಿ ಕೋಟಿ ಹಣ ಅಕ್ರಮ ವರ್ಗಾವಣೆ ಬಯಲಿಗೆ

ಅರ್ಹತಾ ಕಂಡಿಕೆ ಇ, ಎಫ್, ಜಿ, ಹೆಚ್ ಮತ್ತು ಒ ಕ್ಲಾಸ್ ಗಳಿಗೆ ಅನ್ವಯಿಸುವಂತೆ ಆಯಾ ಇಲಾಖೆಯವರು ಪರಿಶೀಲನೆ ನಂತರ ನೀಡಿದ ಅರ್ಹತೆಯನ್ನು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

SATS ಮತ್ತು RD ಸಂಖ್ಯೆ ಆಧರಿಸಿ ಮಾಡಲಾಗಿರುವ ಪರಿಶೀಲನೆಯ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನ ಲಿಂಕ್‌ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ನಿಗದಿತ ಲಿಂಕ್‌ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ವಿವರಗಳನ್ನು ನೋಡಬಹುದು. ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಲಿಂಕ್‌ನ್ನು ಸದ್ಯದಲ್ಲಿಯೇ ಸಕ್ರಿಯಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮುಂದಿನ ಹಂತಗಳು: ಅಭ್ಯರ್ಥಿಗಳು ಪ್ರಕಟಿಸಲಾಗುವ ವೇಳಾಪಟ್ಟಿಯ ಅನುಸಾರ ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆದ್ಯತಾ ಕ್ರಮದಲ್ಲಿ ಆಸಕ್ತಿ ಇರುವ ಕಾಲೇಜು ಮತ್ತು ಕೋರ್ಸ್‌ಗಳ ಪಟ್ಟಿ ಮಾಡಿಕೊಳ್ಳಬೇಕು. ಮೊದಲನೇ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದ ನಂತರ ಪ್ರಾಧಿಕಾರದ ವೆಬ್‌ಸೈಟ್‌ನ ಲಿಂಕ್‌ನಲ್ಲಿ ಆಯ್ಕೆ (options) ಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು.

ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಮ್, ಎನ್, ಜೆಡ್, ಗಳನ್ನು ನಮೂದಿಸಿರುವ ಅಭ್ಯರ್ಥಿಗಳಿಗೆ ಆಫ್‌ಲೈನ್ ಪರಿಶೀಲನೆಗೆ ಹಾಜರಾಗಲು ಪ್ರತ್ಯೇಕ ವೇಳಾಪಟ್ಟಿ ನೀಡಿ ಪರಿಶೀಲನೆ ಮಾಡಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳಿಗೆ ವೆರಿಫಿಕೇಶನ್ ಸ್ಲಿಪ್ ನೀಡಲಾಗಿದೆ. ಈ ಅಭ್ಯರ್ಥಿಗಳು ಮೇಲಿನ ಲಿಂಕ್‌ನ್ನು ಪರಿಶೀಲಿಸಬೇಕಾಗಿಲ್ಲ. ಆಫ್‌ಲೈನ್ ಪರಿಶೀಲನೆಗೆ ಗೈರು ಹಾಜರಾಗಿರುವ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಅರ್ಹತೆ ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಡಿಸಿಇಟಿ-2024 ಫಲಿತಾಂಶ ಪ್ರಕಟ: ಡಿಸಿಇಟಿ-24ರ ಫಲಿತಾಂಶವನ್ನು ಕೆಇಎ ಶನಿವಾರ ಮಧ್ಯಾಹ್ನ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಒಟ್ಟು 17,483 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು.

ಡಿಪ್ಲೊಮಾ ಪರೀಕ್ಷೆಯಲ್ಲಿ ನಿಗದಿತ ಅರ್ಹತೆ ಹೊಂದಿದ್ದು, ಡಿಸಿಇಟಿ ಪರೀಕ್ಷೆಗೆ ಹಾಜರಾಗಿ ರ‍್ಯಾಂಕ್ ಪ್ರಕಟವಾಗಿರದಿದ್ದರೆ ಅಂತಹ ಅಭ್ಯರ್ಥಿಗಳು ಡಿಪ್ಲೊಮಾ ಅಂಕ ಮತ್ತು ಅಂಕಪಟ್ಟಿಯನ್ನು ಪಿಡಿಎಫ್ ಫಾರ್ಮ್ಯಟ್‌ನಲ್ಲಿ ಪ್ರಾಧಿಕಾರದ ಇಮೇಲ್ keaugcet24@gmail.com ಸಲ್ಲಿಸಿದಲ್ಲಿ ಅರ್ಹತೆಯನ್ನು ಪರಿಶೀಲಿಸಿ, ನಿಯಮಾನುಸಾರ ರ‍್ಯಾಂಕ್ ನೀಡಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಎರಡು ಬಲಿಷ್ಠ ತಂಡಗಳ ಮಧ್ಯೆ ಫೈನಲ್‌ ಪಂದ್ಯ

Share This Article