ಮಂಗಳೂರು: ರಾಜ್ಯದ ಹಲವೆಡೆ ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆ ಹಾಗೂ ಮೂಲಭೂತ ಸೌಕರ್ಯಗಳಿಂದ ಮುಚ್ಚುವ ಸ್ಥಿತಿಗೆ ತಪುಪಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಾಲೆಯೊಂದರ ಆವರಣದಲ್ಲಿ ಬೆಳೆದ ಮಲ್ಲಿಗೆ ಹೂಗಳೇ ಶಿಕ್ಷಕರನ್ನು ನೇಮಿಸಿ ಆ ಶಾಲೆಯನ್ನೂ ಉಳಿಸಿದೆ.
Advertisement
ಹೌದು. ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವುದೇ ಖಾಸಗಿ ಶಾಲೆಗಿಂತಲೂ ಕಡಿಮೆಯಿಲ್ಲ ಎನ್ನುವಂತೆ ಬೆಳೆದು ನಿಂತಿದೆ. ಇದಕ್ಕೆ ಕಾರಣ ಶಾಲೆಯ ಹೂದೋಟದಲ್ಲಿರುವ ಮಲ್ಲಿಗೆ ಹೂವು. 12 ವರ್ಷಗಳ ಹಿಂದೆ ಕೇವಲ 7 ಮಕ್ಕಳನ್ನು ಹೊಂದಿ ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಈ ಮಲ್ಲಿಗೆ ಹೂವು ಉಳಿಸಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಹೇಳಿದ್ದಾರೆ.
Advertisement
Advertisement
2013ರಲ್ಲಿ ಶಾಲಾಭಿವೃದ್ಧಿ ಸಮಿತಿ ಶಾಲೆಯ ತೋಟದಲ್ಲಿ 10 ಮಲ್ಲಿಗೆ ಗಿಡಗಳನ್ನು ತಂದು ನೆಟ್ಟಿದ್ದರು. ದಿನಕಳೆದಂತೆ ಗಿಡಗಳಲ್ಲಿ ಅರಳಿದ ಮಲ್ಲಿಗೆಯನ್ನು ಒಟ್ಟು ಸೇರಿಸಿದಾಗ ದೊಡ್ಡ ಮೊತ್ತ ಶಾಲೆಯ ಕೈ ಸೇರುತ್ತಿತ್ತು. ಸದ್ಯ 30 ಮಲ್ಲಿಗೆ ಬುಡಗಳನ್ನು ಹೊಂದಿರುವ ಈ ಶಾಲೆ ವಾರ್ಷಿಕ 40 ರಿಂದ 45 ಸಾವಿರ ರೂಪಾಯಿ ಆದಾಯ ಪಡೆಯುತ್ತಿದೆ. ಇದೇ ಆದಾಯದಲ್ಲಿ ಇಬ್ಬರು ಗೌರವ ಶಿಕ್ಷಕರನ್ನು ನೇಮಕ ಮಾಡಿದ್ದು ಮಲ್ಲಿಗೆ ಮಾರಾಟದಿಂದ ಬಂದ ಹಣದಲ್ಲೇ ಸಂಬಳ ನೀಡಲಾಗುತ್ತಿದೆ. ದಾನಿಗಳ ಸಹಾಯದಿಂದ ಹೆಚ್ಚುವರಿ ತರಗತಿ ಕೊಠಡಿ, ಛಾವಣಿ ದುರಸ್ತಿ, ಶೌಚಾಲಯ ಹೀಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಸದ್ಯ ಈ ಶಾಲೆಯಲ್ಲಿ 80 ಮಕ್ಕಳು ಕಲಿಯುತ್ತಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಸೀಕ್ವೆರಾ ತಿಳಿಸಿದ್ದಾರೆ.
Advertisement
ಒಟ್ಟಾರೆ ಮುಚ್ಚುವ ಸ್ಥಿತಿಯಲ್ಲಿದ್ದ ಓಜಲ ಸರಕಾರಿ ಶಾಲೆಯ ಸಿಬ್ಬಂದಿ ಹಾಗೂ ಪೋಷಕರ ಶ್ರಮದಿಂದಾಗಿ ಮತ್ತೆ ಅಭಿವೃದ್ಧಿ ಕಂಡಿದೆ. ಈ ಶಾಲೆಯ ಮಾದರಿಯನ್ನು ರಾಜ್ಯದ ಎಲ್ಲಾ ಶಾಲೆಗಳು ಅಳವಡಿಸಿಕೊಂಡರೆ ಆರ್ಥಿಕ ವಿಷಯದಲ್ಲಿ ಸ್ವಾವಲಂಬಿಗಳಾಗಿ ಮತ್ತಷ್ಟು ಅಭಿವೃದ್ಧಿ ಪಡಿಸಬಹುದು.