ಶ್ರೀನಗರ: ಭಾತರದೊಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಆರು ಜನ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೆರನ್ ಸೆಕ್ಟರ್ ನಲ್ಲಿ ಒಳ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಆರು ಜನ ಭಯೋತ್ಪಾದಕರನ್ನು ಭಾರತೀಯ ಸೇನೆ ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ಶ್ರೀನಗರದಿಂದ 94 ಕಿಮೀ ದೂರದಲ್ಲಿರುವ ಕೆರನ್ ಸೆಕ್ಟರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇನ್ನೋರ್ವ ಯೋಧ ಗಾಯಗೊಂಡಿದ್ದರು. ಸ್ಥಳದಲ್ಲಿ ಸೈನಿಕರು ಪಹರೆ ನಡೆಸುತ್ತಿದ್ದ ವೇಳೆ ಒಳ ನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರು ಯೋಧರ ಗುಂಡಿಗೆ ಬಲಿಯಾಗಿದ್ದಾರೆ.
ಸೇನಾ ಪಡೆಗಳು ಇನ್ನೂ ಸ್ಥಳದಲ್ಲಿಯೇ ಪಹರೆ ಕಾಯುತ್ತಿದ್ದು, ಅಡಗಿಕೊಂಡಿರುವ ಭಯೋತ್ಪಾದಕರಿಗಾಗಿ ಶೋಧ ನಡೆಸುತ್ತಿದ್ದಾರೆ. ಕಳೆದ ಎರಡು ವಾರಗಳಲ್ಲಿ ಇಂದು ಹತರಾದ 6 ಜನ ಭಯೋತ್ಪಾದಕರನ್ನು ಒಳಗೊಂಡಂತೆ ಒಟ್ಟು 21 ಉಗ್ರರು ಹತರಾಗಿದ್ದಾರೆ.
ಕಳೆದರೆಡು ದಿನಗಳ ಹಿಂದೆಯಷ್ಟೇ ಕೇಂದ್ರ ಗೃಹ ಮಂತ್ರಿ ರಾಜನಾಥ ಸಿಂಗ್ ಸೇರಿದಂತೆ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹಾಗೂ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಮಂತ್ರಿ ಜಿತೇಂದ್ರ ಸಿಂಗ್ ಕುಪ್ವಾರಾ ಜಿಲ್ಲೆಗೆ ಭೇಟಿ ನೀಡಿ ಗಡಿ ಪ್ರದೇಶದ ಜನರನ್ನು ಭೇಟಿಯಾಗಿದ್ದರು.
ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ರಂಜಾನ್ ಒಪ್ಪಂದ ಮಾಡಿಕೊಂಡರು ಭಯೋತ್ಪಾದಕರ ದಾಳಿಗಳು ಇನ್ನೂ ನಿಂತಿಲ್ಲ. ಹಾಗಾಗಿ ರಂಜಾನ್ ಸಂದರ್ಭದಲ್ಲಿ ಈ ದಾಳಿಗಳು ನಡೆದಲ್ಲಿ ಸೇನೆ ಸಮರ್ಥವಾಗಿ ಮುಕ್ತವಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಿ ಎಂದು ರಾಜನಾಥ್ ಸಿಂಗ್ ಆದೇಶಿಸಿದ್ದಾರೆ.