ಡೆಹ್ರಾಡೂನ್: ಕಳೆದ 15 ದಿನಗಳಿಂದ ಉತ್ತರಕಾಶಿಯ (Uttarkashi) ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದಲ್ಲಿ (Silkyara Tunnel) ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಭಾರತೀಯ ಸೇನೆ ಕೈ ಜೋಡಿಸಿದೆ. ವಾಯುಪಡೆ (Indian Air Force) ಡಿಆರ್‌ಡಿಒ ಉಪಕರಣಗಳನ್ನು ತೆಗೆದುಕೊಂಡು ಘಟನಾ ಸ್ಥಳಕ್ಕೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗರ್ ಯಂತ್ರದ ಬ್ಲೇಡ್‍ಗಳು ಅವಶೇಷಗಳ ಅಡಿ ಸಿಲುಕಿದ ಬಳಿಕ, ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣೆಗೆ ಕೊನೆಯ ಮಾರ್ಗವಾಗಿ ಕೈಯಿಂದ ಕೊರೆಯಲು ತಯಾರಿ ನಡೆಸಲಾಗಿದೆ. ಮಾನವ ಸಂಪನ್ಮೂಲ ಬಳಸಿ ಸುರಂಗದ 10-15 ಮೀಟರ್‍ಗಳನ್ನು ಕೊರೆಯಲು ಸುಮಾರು 18 ಗಂಟೆಗಳ ಕಾಲ ತೆಗೆದುಕೊಳ್ಳಲಿದೆ. ಇದಕ್ಕಾಗಿ ಭಾರತೀಯ ಸೇನೆ, ಕೇಂದ್ರ ಮತ್ತು ರಾಜ್ಯದ ಏಜೆನ್ಸಿಗಳು ಸೇರಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ – ನೆನೆಪಿದೆಯಾ ಆ ಕರಾಳ ದಿನಗಳು..?
ಅವಶೇಷಗಳ ಅಡಿ ಸಿಲುಕಿರುವ ಆಗರ್ ಯಂತ್ರದ ಭಾಗಗಳನ್ನು ಕತ್ತರಿಸಿ ತೆಗೆಯಲು ಭಾನುವಾರ ಹೈದರಾಬಾದ್‍ನಿಂದ ಪ್ಲಾಸ್ಮಾ ಕಟ್ಟರ್ ತರಿಸಿ ಯತ್ನಿಸಲಾಗಿದೆ. ಅಲ್ಲದೇ ಯಂತ್ರದ ಮೂಲಕ ಕಾರ್ಯಾಚರಣೆ ಮಾಡುವುದನ್ನು ನಿಲ್ಲಿಸಿ, ಕಾರ್ಮಿಕರನ್ನು ಕರತರಲು ಪೈಪ್‍ನ್ನು ಕೈಯ್ಯಾರೆ ತಳ್ಳಲಾಗುತ್ತಿದೆ. ಇದರೊಂದಿಗೆ ಲಂಬವಾಗಿ ಕೊರೆಯಲು ಒಂದು ಯಂತ್ರ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಶೇಷಗಳ ಅಡಿ ಸಿಲುಕಿರುವ ಕಾರ್ಮಿಕರಿಗೆ ಪೈಪ್‍ಗಳ ಮೂಲಕ ಆಹಾರ, ಔಷಧ ಹಾಗೂ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ.12 ರಂದು ಉತ್ತರಕಾಶಿಯಲ್ಲಿ ಬೆ.5 ಗಂಟೆ ಸುಮಾರಿಗೆ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ-ಬರ್ಕೋಟ್ ಸುರಂಗದ ಒಂದು ಭಾಗವು ಕುಸಿದಿತ್ತು. ಇದರಿಂದಾಗಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಅವಶೇಷಗಳೊಳಗೆ ಸಿಲುಕಿಕೊಂಡಿದ್ದಾರೆ. ಸಿಲುಕಿದವರ ರಕ್ಷಣೆಗೆ ಕಳೆದ 15 ದಿನಗಳಿಂದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ