ಬೆಂಗಳೂರು: ವಿಪಕ್ಷ ನಾಯಕನಾಗಿ ನನ್ನ ಸ್ಥಾನದ ಗೌರವ ಉಳಿಸುವ ಕೆಲಸ ಮಾಡುತ್ತೇನೆ. ನೀವು ನಿಮ್ಮ ಸಚಿವ ಸ್ಥಾನಕ್ಕೆ ಅನುಗುಣವಾಗಿ ಮಾತನಾಡಬೇಕಿತ್ತು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಸಚಿವ ಎಂ.ಬಿ ಪಾಟೀಲರಿಗೆ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯವ, ನನಗ್ಯಾರೂ ಕೇಳೋರಿಲ್ಲ ಅಂತ ಲಜ್ಜೆಗೆಟ್ಟವ ಎಂದಿದ್ದೀರಲ್ಲವೇ? ನೀವು ಹರಿಶ್ಚಂದ್ರರೇ? ಎಂದು ಎಂ.ಬಿ ಪಾಟೀಲ್ (MB Patil) ಅವರಿಗೆ ಪ್ರಶ್ನಿಸಿದರಲ್ಲದೇ, ಈ ಪ್ರಪಂಚದಲ್ಲಿ ಯಾರೂ ಹರಿಶ್ಚಂದ್ರರಲ್ಲ ಎಂದು ನುಡಿದರು. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ – ಎಂ.ಬಿ ಪಾಟೀಲ್ ಲೇವಡಿ
- Advertisement -
- Advertisement -
302 ಡೆಫಾಡೆಲ್ ಅಪಾರ್ಟ್‍ಮೆಂಟ್ ಯಾರದ್ದು? ನಿಮ್ಮದೇ ಅಲ್ಲವೇ? ಎಂದು ಎಂ.ಬಿ.ಪಾಟೀಲರನ್ನು ಕೇಳಿದ ಅವರು, ನಿಮ್ಮದ್ದಕ್ಕೇ ನೀವು 2 ಸೈಟ್ ಬರೆದುಕೊಂಡಿದ್ದೀರಿ. ಇನ್ನು ಮೂರು ವಿಜಯಪುರದಲ್ಲಿ ಬರೆದುಕೊಂಡಿದ್ದೀರಿ. ಸೋಲಾಪುರ ರಸ್ತೆ, ಕೆಎಚ್‍ಬಿ ಕಾಲೊನಿಯಲ್ಲಿ ಅವು ಇವೆ. ಈಗ ಹೇಳಿ ಲೂಟಿ ಮಾಡುತ್ತಿರುವುದು ನಾನಾ ನೀವಾ? ಅಂತ ಪ್ರಶ್ನೆ ಮಾಡಿದರು.
- Advertisement -
ಪತ್ರಕರ್ತರನ್ನು ಕೂರಿಸಿ 2 ಗಂಟೆ ಅವರ ತಲೆ ತಿನ್ನಲು ನನ್ನ ಅಪರಾಧವಾದರೂ ಏನು? ನೀವು ನನ್ನ ಬಡತನವನ್ನು ಇಷ್ಟು ಹೀಯಾಳಿಸಿ ಬಿಟ್ಟಿರಲ್ಲವೇ? ಲಜ್ಜೆಗೆಟ್ಟ ವ್ಯಕ್ತಿ ಎಂದಿರಲ್ಲವೇ? ನಾನು ಯಾವುದರಲ್ಲಿ ಲಜ್ಜೆಗೆಟ್ಟವ? ಹೇಳಿ ಎಂದು ಮರುಪ್ರಶ್ನೆ ಮಾಡಿದರು.
- Advertisement -
ದುಡ್ಡು ಪೂರ್ತಿ ಕಟ್ಟಿದ್ದೇನೆ:
ನಾನು ಮಾಡಿದ ಲೋಪ ಏನು? ಅಪರಾಧವಾದರೂ ಏನು? ಹೇಳಿ ನೋಡೋಣ. ಸೇಲ್ ಡೀಡ್‍ಗೆ ಲೆಟರ್ (Sale Deed Letter) ಬರೆದಿದ್ದಾರೆ ಎಂದಿದ್ದೀರಿ. ಸೇಲ್ ಡೀಡ್‍ಗೆ ಅಲ್ಲದೇ ಇನ್ನೇನಕ್ಕೆ ಲೆಟರ್ ಕೊಡಬೇಕು? ಅದು ನನ್ನ ನಿವೇಶನ. ದುಡ್ಡು ಪೂರ್ತಿ ಕಟ್ಟಿದ್ದೇನೆ. ಶೆಡ್ ಗಿರಾಕಿ ಎಂದಿದ್ದೀರಲ್ಲವೇ? ಶೆಡ್ ಕಟ್ಟಿದೀನಿ. ನ್ಯಾಯವಾಗಿಯೇ ಕಟ್ಟಿದ್ದೇನೆ. ಸಾಕಾಗದಿದ್ದರೆ ನೋಟಿಸ್ ಕೊಡಿ. ಇದುವರೆಗೆ ಸಾಲಗಾರನಲ್ಲದ ನಾನು ಸಾಲ ಮಾಡಿಯಾದರೂ ನಿಮಗೆ ತೃಪ್ತಿ ಆಗುವಂತೆ ಶೆಡ್ ಕಟ್ಟಿಸುವೆ. ನನ್ನ ದುಡಿಮೆಯಲ್ಲಿ ಏನು ಸಾಧ್ಯವೋ ಅದನ್ನು ಮಾಡಿದ್ದೇನೆ. ಕಾನೂನು ಬಿಟ್ಟು ಆಚೆ ಈಚೆ ಹೋಗುವವನಲ್ಲ. ನಾನೇನಾದರೂ ನಿಮ್ಮ ಬಗ್ಗೆ ವಿಷಯ ಹೊರಗಡೆ ತಂದರೆ ನಿಮಗೆ ನಿದ್ದೆ ಬರೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಖರ್ಗೆ ಕುಟುಂಬವನ್ನು ರಕ್ಷಣೆ ಮಾಡಿ. ನನಗೇನೂ ತೊಂದರೆ ಇಲ್ಲ. ಅಲ್ಲಿ ಆಗಿರುವುದೇನು ಎಂದು ನನಗೆ ಗೊತ್ತಿದೆ. ಈಗಾಗಲೇ ಅವರು ನಿದ್ದೆ ಬಿಟ್ಟಿದ್ದಾರೆ. ಅವರು ನಿಮ್ಮನ್ನು ಎತ್ತಿಕಟ್ಟಿ ನನ್ನ ಮೇಲೆ ಏನೋ ಮಾಡಿಸಲು ಹೊರಟಿದ್ದಾರೆ. ನಾನು ಯಾರಿಗೂ ಭಯ ಪಡಬೇಕಿಲ್ಲ, ನನ್ನನ್ನು ಏನೂ ಮಾಡಲಾಗೋದಿಲ್ಲ. ನೀವೇನೂ ಮಾಡಲಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ನೀವು ಇನ್ನೂ ಒಂದು ವರ್ಷ ಹುಡುಕಿದರೂ ನನ್ನ ಒಂದೇ ಒಂದು ತಪ್ಪನ್ನು ತರಲಾಗದು. ಈ ಶೆಡ್ ಖರ್ಗೆ, ದೇಶಪಾಂಡೆಯವರಿಗೂ ಗೊತ್ತಿತ್ತು. ನಾನೇ ಹೇಳಿಕೊಂಡಿದ್ದೆ. ಕಾಂಗ್ರೆಸ್‌ನಲ್ಲಿರುವ ನನಗ್ಯಾಕೆ ಅನ್ಯಾಯ ಮಾಡುತ್ತೀರಿ ಎಂದಿದ್ದೆ. ಕಾಂಗ್ರೆಸ್ಸಿಗರಿಗೆ ನನ್ನ ಬಗ್ಗೆ ಮುಂದೆ ಪ್ರೀತಿ, ಹಿಂದಿನಿಂದ ದ್ವೇಷ ಇದ್ದುದು ಈಗ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.
ಸೈಟ್ ಪುಕ್ಕಟೆ ಕೊಟ್ಟದ್ದಲ್ಲ:
ಸಚಿವ ಎಂ.ಬಿ ಪಾಟೀಲ್ ಅವರು 2 ಗಂಟೆಗಳ ಕಾಲ ಪತ್ರಿಕಾಗೋಷ್ಠಿ ನಡೆಸಿ ನಾನು ಏನೋ ಮಾಡಬಾರದ ತಪ್ಪು ಮಾಡಿದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು. ಕೆಐಎಡಿಬಿ ಸೈಟ್ ಮಾಡುವುದು ಯಾಕಾಗಿ? ಅದರಲ್ಲಿ ನಾನು 2006-07ರಲ್ಲಿ ಸೈಟ್ ಪಡೆದುದು ನಿಜ. ಅದೇನೂ ಪುಕ್ಕಟೆ ಕೊಟ್ಟಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.
ಎಲ್ಲರಂತೆ ನಾನು ವೇರ್‍ಹೌಸ್ ಇನ್ನೇನೋ ಉದ್ದೇಶದಿಂದ ನಿವೇಶನ ಪಡೆದಿದ್ದೇನೆ. ನಾವು ಬಡತನದಲ್ಲಿ ಬಂದವರು. ನಮ್ಮಲ್ಲಿ ಹಣ ಇರಲಿಲ್ಲ. ಅದಾದ ನಂತರ ಕಂತು ಕಟ್ಟಲು ಕಷ್ಟವಾದುದೂ ನಿಜ. ನಿಮ್ಮಲ್ಲಿ ನಾನು ಹಣ ಕೊಡಿ; ವಿನಾಯಿತಿ ಕೊಡಿ ಎಂದು ಕೇಳಿದ್ದೇನಾ? ಆದರೆ, ಕಾಂಗ್ರೆಸ್ ಕಾಲದಲ್ಲಿ ನನಗೆ ಅನ್ಯಾಯ ಆಗಿದೆ. ಆಗ ಅದನ್ನು ಕ್ಯಾನ್ಸಲ್ ಮಾಡಿದರು. ನಾನು ಆಗ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಜನರಲ್ ಸೆಕ್ರೆಟರಿ ಆಗಿದ್ದೆ. ಆದರೂ ನೀವು ನಿವೇಶನ ರದ್ದು ಮಾಡಿದ್ರಿ, ಯಾಕೆ ಮಾಡಿದ್ದೀರಿ ಅಂತ ಹೇಳಿ? ಅದಾದ ಬಳಿಕ ನಾನು ಕೋರ್ಟ್‌ಗೆ ಹೋದೆ. ಇವತ್ತು ಶೆಡ್ ಕಟ್ಟಿದ್ದೇನೆ ಎಂದು ಛಲವಾದಿ ವಿವರಿಸಿದರು.