ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ (Hasanamba) ದೇವಿ ದರ್ಶನಕ್ಕೆ ಇಂದು ಭಕ್ತಸಾಗರವೇ ಹರಿದು ಬಂದಿದೆ. ಬೆಳಗ್ಗೆ 6 ಗಂಟೆಯಿಂದಲೂ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ.
ಒಂದು ಸಾವಿರ ಹಾಗೂ ಮುನ್ನೂರು ರೂ.ನ ವಿಶೇಷ ದರ್ಶನದ ಪಾಸ್ ಪಡೆದವರು ದರ್ಶನಕ್ಕೆ ಹೋಗಲು ಗಂಟೆಗಟ್ಟಲೆ ಕಾಯಬೇಕಾಯಿತು. ವಿಶೇಷ ಚೇತನ ಪತ್ನಿಯ ಆಸೆ ಈಡೇರಿಸಲು ಪತಿಯೊಬ್ಬರು ತನ್ನ ಪತ್ನಿಯನ್ನು ಎತ್ತಿಕೊಂಡು ಬಂದು ದರ್ಶನ ಮಾಡಿಸಿದರು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬೀಚೇನಹಳ್ಳಿಯ ನಾಗರಾಜ್ ತಮ್ಮ ಪತ್ನಿ ಗೌರಮ್ಮರನ್ನು ಎತ್ತಿಕೊಂಡು ಬಂದು ದರ್ಶನ ಮಾಡಿಸಿದರು.
ಕಳೆದ ವರ್ಷ ಕೂಡ ನಾಗರಾಜ್ ಪತ್ನಿಗೆ ದೇವಿ ದರ್ಶನ ಮಾಡಿಸಿದರು. ಭಾರೀ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ನಡುವೆ ವಿಶೇಷ ಚೇತನೆಯನ್ನು ಹೊತ್ತು ದರ್ಶನಕ್ಕೆ ಬಂದ ನಾಗರಾಜ್‍ಗೆ ಪೊಲೀಸರು ಆದ್ಯತೆ ನೀಡಿ, ನೇರವಾಗಿ ಗರ್ಭಗುಡಿ ಸಮೀಪ ಕರೆದೊಯ್ದು ಮಾನವೀಯತೆ ಮೆರೆದರು.
ಇಂದು ಸರ್ಕಾರಿ ನೌಕರರು ಹಾಗೂ ನ್ಯಾಯಾಂಗ ಇಲಾಖೆಯವರ ಕುಟುಂಬಕ್ಕೆ ದರ್ಶನದ ವ್ಯವಸ್ಥೆ ಮಾಡಿದ್ದರಿಂದ ನೂಕುನುಗ್ಗಲು ಉಂಟಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: ಹಾಸನಾಂಬ ಜಾತ್ರಾ ಮಹೋತ್ಸವ – ಭಕ್ತರಿಗೆ ದರ್ಶನ ಕೊಟ್ಟ ಹಾಸನಾಂಬೆ