Connect with us

Bengaluru City

ಮಂಡ್ಯ ಮನೆಯನ್ನು ರಾತ್ರೋರಾತ್ರಿ ಖಾಲಿ ಮಾಡಿದ್ದಕ್ಕೆ ಕಾರಣ ತಿಳಿಸಿದ ರಮ್ಯಾ

Published

on

ಬೆಂಗಳೂರು: ಮಾಲೀಕ ಮನೆಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ನಾನು ಮಂಡ್ಯದ ಮನೆಯನ್ನು ಖಾಲಿ ಮಾಡಿದ್ದೇನೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು ಸ್ಪಷ್ಟನೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಮಂಡ್ಯದಲ್ಲಿ ಟಿಕೆಟ್ ಸಿಗುವುದು ಅನುಮಾನದ ಹಿನ್ನೆಲೆಯಲ್ಲಿ ತಮ್ಮ ನಿವಾಸವನ್ನು ಖಾಲಿ ಮಾಡಿದ್ದಾರೆ ಎನ್ನುವ ಸುದ್ದಿಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ರಾತ್ರೋರಾತ್ರಿ ನಾನು ನಿವಾಸವನ್ನು ಖಾಲಿ ಮಾಡಿಲ್ಲ. ಮಂಡ್ಯದಲ್ಲಿ ನಾನು ಬಾಡಿಗೆ ಮನೆಯಲ್ಲಿದ್ದೆ. ಕೆಲ ದಿನಗಳ ಹಿಂದೆ ಮನೆ ಮಾಲೀಕ ನಾನು ಮರಳುತ್ತಿದ್ದೇನೆ. ಹೀಗಾಗಿ ನನಗೆ ಆ ಮನೆ ಬೇಕೆಂದು ಹೇಳಿದರು. ಜವಾಬ್ದಾರಿಯುತ ಬಾಡಿಗೆದಾರಳಾಗಿ ಮಾಲೀಕನ ಮಾತನ್ನು ಕೇಳಬೇಕಾದದ್ದು ನನ್ನ ಕರ್ತವ್ಯ. ಹೀಗಾಗಿ ನಾನು ಮನೆಯನ್ನು ಖಾಲಿ ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಆರೋಗ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಈಗ ನಾನು ಗುಣಮುಖನಾಗಿದ್ದೇನೆ ಎಂದು ರಮ್ಯಾ ತಿಳಿಸಿದ್ದಾರೆ. ಇದನ್ನೂ ಓದಿ: ಮನೆ ಖಾಲಿ ಮಾಡೋ ವಿಚಾರದಲ್ಲಿ ಸುಳ್ಳು ಹೇಳಿದ್ರಾ ರಮ್ಯಾ?

ಚರ್ಚೆಯಾಗಿದ್ದು ಯಾಕೆ?
ಅಂಬಿ ಅಂತಿಮ ದರ್ಶನಕ್ಕೆ ಬಾರದೇ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಮಾಜಿ ಸಂಸದೆ ರಮ್ಯಾ, ರಾತ್ರೋ ರಾತ್ರಿ ಮಂಡ್ಯದಿಂದ ಮನೆ ಖಾಲಿ ಮಾಡೋ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದರೇ ಎನ್ನುವ ಪ್ರಶ್ನೆ ಎದ್ದಿತ್ತು.

ಭಾನುವಾರ ತಡರಾತ್ರಿ ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ಅವರ ಮನೆಯಲ್ಲಿದ್ದ ವಸ್ತುಗಳನ್ನು ಎರಡು ಲಾರಿಗಳಲ್ಲಿ ತುಂಬಿ ಸಾಗಾಟ ಮಾಡಲಾಗಿತ್ತು. ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯ ನಗರದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು. ಅದಾದ ನಂತರ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ರಮ್ಯಾ, ಸದ್ದಿಲ್ಲದೆ ಮಂಡ್ಯದಿಂದ ಮನೆ ಖಾಲಿ ಮಾಡಿ ವರ್ಷಗಟ್ಟಲೇ ಈ ಕಡೆ ತಲೆ ಹಾಕಿರಲಿಲ್ಲ.

ಬಳಿಕ ಇದ್ದಕ್ಕಿದ್ದಂತೆ ಮಂಡ್ಯಕ್ಕೆ ಆಗಮಿಸಿದ ರಮ್ಯಾ ನಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಈಗ ವಿದ್ಯಾಭ್ಯಾಸ ಮುಗಿಸಿ ವಾಪಸ್ ಬಂದಿದ್ದೇನೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಹೇಳಿ ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದ್ದರು. ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಕಂಡಿದ್ದ ರಮ್ಯಾ ಅವರಿಗೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಿಸಿತುಪ್ಪವಾಗಿ ಪರಿಣಮಿಸಿತ್ತು.

ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ, ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿತ್ತು. ಅದರಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ.

ಮಂಡ್ಯದಲ್ಲಿ ನನಗೆ ರಾಜಕೀಯ ನೆಲೆಯಿಲ್ಲ ಎಂದು ಯೋಚಿಸಿದ ರಮ್ಯಾ ಈ ಹಿಂದೆಯೇ ಮಂಡ್ಯ ತೊರೆಯುವ ಯೋಚನೆ ಮಾಡಿದ್ದರು. ಇದೇ ವೇಳೆ ಅಂಬರೀಶ್ ಅವರು ಮೃತಪಟ್ಟಾಗಲೂ ಅವರ ಅಂತಿಮ ದರ್ಶನ ಪಡೆಯಲು ರಮ್ಯಾ ಮಂಡ್ಯಕ್ಕೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಅಂಬಿ ಅಭಿಮಾನಿಗಳು ರಮ್ಯಾ ನಮ್ಮ ಪಾಲಿಗೆ ಸತ್ತಂತೆ ಎಂದು ಸಿಟ್ಟು ಹೊರಹಾಕಿದ್ರು. ಈ ಎಲ್ಲ ಬೆಳವಣಿಗೆ ನಡುವೆಯೇ ರಾತ್ರೋರಾತ್ರಿ ರಮ್ಯಾ ಅವರ ಮನೆಯಲ್ಲಿದ್ದ ವಸ್ತುಗಳನ್ನು ಎರಡು ಲಾರಿಗಳ ಮೂಲಕ ಹೊರಗೆ ಸಾಗಿಸಲಾಗಿತ್ತು. ಮಂಡ್ಯದಲ್ಲಿ ನನಗಿನ್ನು ರಾಜಕೀಯವಾಗಿ ಭವಿಷ್ಯವಿಲ್ಲ ಎಂದು ತಿಳಿದು ಶಾಶ್ವತವಾಗಿ ರಮ್ಯಾ ಮಂಡ್ಯವನ್ನು ತೊರೆದಿದ್ದಾರೆ ಎನ್ನುವ ಚರ್ಚೆ ಜಿಲ್ಲೆಯಲ್ಲಿ ಆರಂಭವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *