ಅವನೊಬ್ಬ ಹುಟ್ಟು ಅಸ್ತಮಾ ರೋಗಿ. ಆದ್ರೆ, ರೋಗ ದೇಹಕ್ಕಷ್ಟೇ ಹೊರತು ಮನಸ್ಸಿಗಲ್ಲ ಅನ್ನೋದನ್ನು ಸಾಬೀತು ಮಾಡಿದಾತ. ವೈದ್ಯಕೀಯ ಶಿಕ್ಷಣ ಪಡೆದಿದ್ದವನಿಗೆ ಕ್ರಾಂತಿಯ ಹುಚ್ಚು ತಲೆಪೂರ್ತಿ ಆವರಿಸಿ ಬಿಟ್ಟಿತ್ತು. ವ್ಯವಸ್ಥೆಯ ವಿರುದ್ಧ ಸೆಟೆದು ನಿಂತವನಿಗೆ ಜಗತ್ತಿನ ಡೊಂಕ ತಿದ್ದುವ ಅದಮ್ಯ ಬಯಕೆನೂ ಇತ್ತು. ಮಣ್ಣಿಗೆ ಮಣ್ಣಿಗೆ ಕ್ರಾಂತಿಯ ಘಮ ಸಿಂಪಡಿಸಿದವನು ಜಗತ್ತೇ ಹೆಮ್ಮೆಯಿಂದ ತಿರುಗಿ ನೋಡೋ ಹಾಗೆ ಮಾಡ್ಬಿಟ್ಟ. ಹೆಸ್ರು ಕೇಳಿದ್ರೆ ನರನಾಡಿಗಳಲ್ಲೆಲ್ಲಾ ಮಿಂಚಿನ ಸಂಚಲನ ಉಂಟು ಮಾಡೋ ಕ್ರಾಂತಿಯ ಕಂದನೇ ಅರ್ನೆಸ್ಟೋ ಚೆಗುವೆರಾ.
ನಾನೆಂದಿಗೂ ಸೋತು ಮನೆಗೆ ವಾಪಾಸಾಗೋದಿಲ್ಲ. ಸೋಲೋದಕ್ಕಿಂತ ಸಾವನ್ನೇ ಹೆಚ್ಚು ಇಷ್ಟಪಡ್ತೀನಿ ಅಂದಿದ್ದ ಛಲಗಾರ ಚೆಗುವೆರಾ. ಅವನದ್ದು ಹೋರಾಟದ ಬದುಕು ಅನ್ನೋದಕ್ಕಿಂತ ಹೋರಾಟವೇ ಬದುಕಾಗಿತ್ತು. ಅವನೊಬ್ಬ ಮಹಾನ್ ಮಾನವತಾವಾದಿ. ಗೆರಿಲ್ಲಾ ಯುದ್ಧದಲ್ಲಿ ಬಲಶಾಲಿಗಳ ಹೆಡೆಮುರಿಕಟ್ಟುತ್ತಿದ್ದ ಛಲದಂಕಮಲ್ಲ. ಕುಂತಲ್ಲೇ ಜಗತ್ತಿನ ಆಗುಹೋಗುಗಳ ಬಗ್ಗೆ ಬರೆಯುತ್ತಿದ್ದ. ಮಾತಿಗೆ ನಿಂತ್ರೆ ಎದುರಿದ್ದವರನ್ನು ಮಂತ್ರಮುಗ್ಧಗೊಳಿಸ್ತಿದ್ದ ಮೋಡಿಗಾರ. ಸತ್ತು ನಾಲ್ಕು ದಶಕಗಳೇ ಕಳೆದ್ರೂ ಅಂದಿನ ಖದರ್ ಇನ್ನೂ ಉಳಿಸ್ಕೊಂಡಿರುವವನು ಅವನೊಬ್ಬನೇ, ಅರ್ನೆಸ್ಟೊ ಚೆಗುವೆರಾ.
Advertisement
ಅದು 1928ನೇ ಇಸವಿಯ ಜೂನ್ 14ನೇ ತಾರೀಕು. ಲಿಂಚ್ ಹಾಗೂ ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪ್ಯಾನಿಷ್-ಐರಿಷ್ ದಂಪತಿಗಳಿಗೆ ಮೊದಲ ಮಗ ಹುಟ್ಟಿದ್ದ. ಅಸ್ತಮಾದಿಂದ ತೀವ್ರ ನರಳ್ತಾ ಇದ್ದ ಮಗು ಬೇರೆ. ಚೆ ಮೌನಿ. ಅಂತರ್ಮುಖಿಯಾಗಿದ್ದ. ಯೌವ್ವನಾವಸ್ಥೆಗೆ ಬರ್ತಿದ್ದಂತೆ ಚಿಗುರು ಮೀಸೆಯ ತರುಣನಿಗೆ ಹೋರಾಟದ ಅಮಲು ಏರಿಬಿಟ್ಟಿತ್ತು. ಅದು 1948ನೇ ಇಸವಿ. ಚೆಗುವೆರಾ ವೈದ್ಯಕೀಯ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಬ್ಯೂನಸ್ ಐರಿಸ್ ಯೂನಿವರ್ಸಿಟಿಗೆ ಸೇರ್ಕೊಂಡ. ಆದ್ರೆ, ಬೆಂಚ್ ಮೇಲೆ ಕೂತು ಸವಿಯುವ ಪುಸ್ತಕದ ಶಿಕ್ಷಣ ಆತನಿಗೆ ರುಚಿಸಲಿಲ್ಲ. 1951ರಲ್ಲಿ ಯೂನಿವರ್ಸಿಟಿಯಿಂದ ಒಂದು ವರ್ಷ ರಜೆಯ ಅನುಮತಿ ಪಡ್ಕೊಂಡ ಚೆಗುವೇರಾ ಪ್ರಪಂಚ ಸುತ್ತೋ ಕನಸು ಕಂಡಿದ್ದ. ಗೆಳೆಯ ಅಲ್ಬರ್ಟೋ ಗ್ರೆನಡೋ ಜೊತೆ ಸೇರಿ ಮೋಟಾರ್ ಸೈಕಲ್ ಗೆ ಕಿಕ್ ಹೊಡೆದೋನೆ ದಕ್ಷಿಣ ಅಮೆರಿಕಾದ ಕಡೆ ಹೊರಟುಬಿಡ್ತಾನೆ. ಆಗ ಆತನ ಸವಾರಿ ಶರವೇಗದಂತಿತ್ತು.
Advertisement
ಮೋಟಾರ್ ಬೈಕಿನ ಚಕ್ರಗಳಿಗೆ ಚೆಗುವೆರಾ ವಿಶ್ರಾಂತಿಯೇ ಕೊಡಲಿಲ್ಲ. ಆತನ ಕ್ರಾಂತಿಯ ದಾಹ ತಣಿಸೋಕೆ ಬೈಕ್ ಟ್ಯಾಂಕಲ್ಲಿದ್ದ ನೂರಾರು ಲೀಟರ್ ಪೆಟ್ರೋಲ್ ದಹನವಾಗಿತ್ತು. ಅಂದ ಹಾಗೆ ಚೆಗುವೆರಾ ಹೋರಾಟದ ಹಾದಿಗೆ ಒಂದು ರೂಪ ಕೊಟ್ಟಿದ್ದು ಇದೇ ಪ್ರವಾಸಗಳು. ಬಹುಶಃ ಅಂದು ಪ್ರವಾಸ ಹೋಗಿರದೇ ಇದ್ದಿದ್ರೆ ಚೆಗುವೆರಾ ಅನ್ನೋ ವ್ಯಕ್ತಿಯ ಬಗ್ಗೆ ಜಗತ್ತು ಬಿಡಿ, ಪಕ್ಕದ ಬೀದಿಗೇ ಗೊತ್ತಾಗ್ತಿರ್ಲಿಲ್ವೇನೋ. ಅಂದಹಾಗೆ ಚೆಗುವೆರಾ ಯುವಕನಾಗಿದ್ದಾಗ್ಲೇ ಪ್ರಖರ ಮಾತುಗಾರನಾಗಿದ್ದ. ಆತನ ನಾಲಿಗೆಯಿಂದ ಹೊರಬೀಳುತ್ತಿದ್ದ ಒಂದೊಂದು ಶಬ್ದವೂ ಹರಿತವಾದ ಕತ್ತಿಯ ಅಲಗಿನ ಹಾಗಿತ್ತು. ಆದ್ರೆ, ಬರೀ ಮಾತಿನ ಮಂಟಪ ಕಟ್ಟಿದ್ರೆ ಆದೀತೇ. ಖಂಡಿತಾ ಇಲ್ಲ. ಅಲ್ಲಿ ಬೇಕಾಗಿದ್ದಿದ್ದು ಶಾಸ್ತ್ರವಲ್ಲ. ಬದಲಾಗಿ ಶಸ್ತ್ರಗಳ ತಪಸ್ಸು.
Advertisement
Advertisement
ಲ್ಯಾಟಿನ್ ಅಮೆರಿಕದಲ್ಲಿ ಸಾಮ್ರಾಜ್ಯಶಾಹಿಯ ಕ್ರೂರಮುಖ, ಗ್ವಾಟೆಮಾಲಾ, ಕ್ಯೂಬಾ ಹಾಗೂ ಮೆಕ್ಸಿಕೋಗಳಲ್ಲಿ ನಡೀತಿದ್ದ ದೌರ್ಜನ್ಯಗಳನ್ನ ಚೆ ಬಹಳ ಹತ್ತಿರದಿಂದ ಗಮನಿಸಿದ್ದ. ದಾಸ್ಯ ವಿಮುಕ್ತಿಗಾಗಿ ಸಾಲುಸಾಲಾಗಿ ಚಳುವಳಿಗಳೇನೋ ನಡೀತಿತ್ತು. ಆದ್ರೆ, ಅದನ್ನು ಮುನ್ನಡೆಸುವ ನಾಯಕನ ಕೊರತೆ ಇತ್ತು. ಬಾಪ್ಟಿಸ್ಟನ ದುರಾಡಳಿತದಿಂದ ಬೇಸತ್ತಿದ್ದ ಜನ ಚೆಗುವೆರಾನನ್ನೇ ನೆಚ್ಚಿಕೊಂಡ್ರು.
ಸತತ ಹೋರಾಟದ ಫಲವಾಗಿ ಅಂತಿಮವಾಗಿ 1959 ಜನವರಿ 1 ರಂದು ಕ್ಯೂಬಾ ವಿಮೋಚನೆಗೊಂಡು ಸಮಾಜವಾದಕ್ಕೆ ತನ್ನನ್ನು ಅರ್ಪಿಸಿಕೊಂಡಿತು. ಮುಂದೆ ಚೆಗುವೆರಾನ ಕ್ರಾಂತಿಕಾರಿ ಮನಸ್ಸು ತೀವ್ರ ಶೋಷಣೆಗೊಳಗಾಗಿದ್ದ ಆಫ್ರಿಕಾದ ಕಾಂಗೋ ಹಾಗೂ ಲ್ಯಾಟಿನ್ ಅಮೆರಿಕಾದ ಬೊಲಿವಿಯಾದತ್ತ ಹೊರಳಿತ್ತು. ಸಿಐಎ ಕೈಗೊಂಬೆಯಾಗಿದ್ದ ಬೊಲಿವಿಯಾ ಸರ್ವಾಧಿಕಾರಿ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸ್ಕೊಂಡ. ಆ ಸಂದರ್ಭ ನಿಜಕ್ಕೂ ಅತ್ಯಂತ ಕಠೋರವಾಗಿತ್ತು. ಇಲ್ಲಿ ಚೇ ಅನುಸರಿಸಿದ್ದ ಗೆರಿಲ್ಲಾ ಯುದ್ಧದ ಬಗ್ಗೆ ಹೇಳದಿದ್ರೆ ಆತನ ತಂತ್ರಗಾರಿಕೆ, ಯೋಜನೆಯ ಬಗ್ಗೆ ಅರಿವಾಗ್ಲಿಕ್ಕಿಲ್ಲ. ಗೆರಿಲ್ಲಾ ಸಂಘಟಿತ ಯುದ್ಧವೇನಲ್ಲ. ಆದ್ರೆ, ಇಲ್ಲಿ ನಾಗರಿಕರ ಕೈಗೆ ಶಸ್ತ್ರ ಬರ್ತಿತ್ತು. ಇದು ಸಣ್ಣ ಸಣ್ಣ ಗುಂಪುಗಳ ಹೋರಾಟವಾಗಿರ್ತಿತ್ತು. ದೊಡ್ಡ ಮಟ್ಟದ ಸೈನ್ಯದ ಮುಂದೆ ತೋಳ್ಬಲಕ್ಕಿಂತ ಬುದ್ಧಿಬಲವನ್ನು ಉಪಯೋಗಿಸಿ ಮಾಡೋ ಸಶಸ್ತ್ರ ಹೋರಾಟ ಈ ಗೆರಿಲ್ಲಾ. ಕೊನೆಗೆ ಚೆಗುವೆರಾ ತನ್ನ ಜೀವವನ್ನೇ ಪಣಕ್ಕಿಟ್ಟು ಬೊಲೀವಿಯನ್ನರಿಗೆ ನೆಮ್ಮದಿಯ ಬದುಕನ್ನ ಕಟ್ಟಿಕೊಟ್ಟಿದ್ದ.
ಅಂದ ಹಾಗೆ, ಚೇ ಬಹಳಾ ಇಷ್ಟವಾಗೋದು ಎರಡು ಕಾರಣಕ್ಕೆ. ಒಂದು ಆತನಲ್ಲಿದ್ದ ಅದಮ್ಯ ಇಚ್ಛಾಶಕ್ತಿಗೆ. ಇನ್ನೊಂದು ಅದನ್ನು ಚೇಸ್ ಮಾಡೋ ರೀತಿಗೆ. ಈ ನಡುವೆ ಚೆಗುವೆರಾನ ಕಂಡು ಅಮೆರಿಕ ಕತ್ತಿ ಮಸೀತಿತ್ತಲ್ಲಾ. ಹೀಗಾಗಿ ಚೆ ಯನ್ನು ಸಾಯಿಸಿಯಾದರೂ ಸರಿ ಅಥವಾ ಜೀವಂತವಾದರೂ ಸರಿ, ಸೆರೆಹಿಡಿಯಲೇಬೇಕೆಂದು ಸಿಐಎಯನ್ನು ಛೂ ಬಿಟ್ಟಿತ್ತು. ಬೊಲಿವಿಯನ್ ಸರ್ಕಾರದ ಮೇಲೆ ಒತ್ತಡ ಹೇರಿದ್ದ ಅಮೆರಿಕ ಚೆಗವೇರಾನ ಸಾವಿಗೆ ಮುಹೂರ್ತ ಫಿಕ್ಸ್ ಮಾಡಿತ್ತು. 1967 ರ ಅಕ್ಟೋಬರ್ 8 ರಂದು ಚೆಯನ್ನು ಸಿಐಎ ಬೆಂಬಲಿತ ಬೋಲಿವಿಯಾದ 1800 ಜನರಿದ್ದ ಪಡೆ ಸುತ್ತುವರೆದಿತ್ತು.
ಮೈಮೇಲೆ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಗಾಯದ ನೋವಿನಿಂದ ಬಳಲಿದ್ದ ಚೆಗುವೇರಾಗೆ ಅಕ್ಟೋಬರ್ 9ರಂದು ಮರಣದಂಡನೆ ಶಿಕ್ಷೆ ವಿಧಿಸಲಾಯ್ತು. ಚೇ ಸತ್ತ ನಂತ್ರ ಅವನ ಮುಖವನ್ನು ಪಡಿಯಚ್ಚು ತೆಗೆದು ಅವನ ದೇಹವನ್ನು ಹತ್ತಿರದಿಂದ ಫೋಟೋ ತೆಗೆಯಲಾಯಿತು. ಅವನ ಕೈಗಳನ್ನು ಮುಂಗೈ ಬಳಿ ಕತ್ತರಿಸಿ ಅವುಗಳನ್ನು ಆಲ್ಕೊಹಾಲಿನಲ್ಲಿ ರಕ್ಷಿಸಿಟ್ಟರು. ಕಾರಣ ನಾವು ಕೊಂದ ವ್ಯಕ್ತಿ ಚೆಗೆವಾರ ಎಂಬುದರ ಋಜುವಾತುವಿಗಾಗಿ ಅವರ ಹಾಗೆ ಮಾಡಿದರು. ಚೆ. ಸತ್ತ ಸುದ್ದಿ ತಿಳಿದು ಜಗತ್ತಿನಾದ್ಯಂತ ಅವನ ಸಂಗಾತಿಗಳು ಶೋಕತಪ್ತರಾದರು. ಎಂಥಾ ವಿಕೃತ ಮನಸ್ಥಿತಿ. ಅಮೆರಿಕಾಗೆ ಎಂಥಾ ತಳಮಳ ಕಾಡಿದ್ದಿರಬಹುದು ಅಲ್ವಾ..?
ಆರ್ನೆಸ್ಟೋ ಚೆಗೆವಾರ ಜಗತ್ತಿನಿಂದ ದೂರವಾಗಿ ಸುಮಾರು ನಾಲ್ಕುವರೆ ದಶಕಗಳೇ ಕಳೆದಿವೆ. ಆದ್ರೆ, ಇದುವರೆಗೂ ಯಾವ್ದೇ ಸಾಮ್ರಾಜ್ಯಶಾಹಿ ದೇಶಗಳಿಗೂ ಚೆ ನ ಪ್ರಭಾವದಿಂದ ಅಲ್ಲಿನ ಯುವಜನರನ್ನು ದೂರ ಮಾಡಲು ಸಾಧ್ಯನೇ ಆಗಿಲ್ಲ. ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಹೋರಾಟಗಳಿಗೆಲ್ಲಾ ಚೆ ಈಗಲೂ ಸ್ಪೂರ್ತಿಯೇ. ಸಮಾನತೆಯ ಸಮಾಜವನ್ನು ಕಟ್ಟುವ ಕನಸು ಕಾಣುತ್ತಿರುವವರಿಗೆ, ಅನ್ಯಾಯವನ್ನು ಪ್ರತಿಭಟಿಸುತ್ತಿರುವವರಿಗೆ ಹಾಗೂ ಜಗದಗಲ ನಡೆಯುವ ಶೋಷಣೆಯನ್ನು ಕೊನೆಗಾಣಿಸಬೇಕೆಂದು ಹಂಬಲಿಸುತ್ತಿರುವ ಎಲ್ಲರ ಪಾಲಿಗೆ ಕ್ರಾಂತಿಯ ಕಂದ ಆತ. ಛೇ.. ಚೆದು ಸಾಯೋ ವಯಸ್ಸಂತೂ ಖಂಡಿತಾ ಅಲ್ಲ ಕಣ್ರೀ.
– ಕ್ಷಮಾ ಭಾರದ್ವಾಜ್, ಉಜಿರೆ
https://www.youtube.com/watch?v=G9DyXX7YKuk