ಮೈಸೂರು: ಜಿಲ್ಲಾಡಳಿತ ದಸರಾ (Dasara) ಲೆಕ್ಕಚಾರ ದಾಖಲೆ ಬಿಡುಗಡೆ ಮಾಡಿದ್ದು, ಈ ಬಾರಿ ನೆರವೇರಿದ ಅದ್ಧೂರಿ ದಸರಾಗೆ ಬರೋಬ್ಬರಿ 28 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿದೆ.
ಕಳೆದ ಎರಡು ವರ್ಷ ಕೊರೊನಾದಿಂದಾಗಿ (Corona) ಅರಮನೆ (Mysore Palace) ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಈ ಬಾರಿ ಅದ್ಧೂರಿಯಾಗಿ ನಡೆದಿದೆ. ಅದ್ಧೂರಿ ಆಚರಣೆಗೆ ಮೈಸೂರು ಜಿಲ್ಲಾಡಳಿತಕ್ಕೆ ವಿವಿಧ ಮೂಲಗಳಿಂದ ಒಟ್ಟು 31 ಕೋಟಿ 8 ಲಕ್ಷ ರೂಪಾಯಿ ಹಣ ಸಂದಾಯವಾಗಿತ್ತು. ಇದರಲ್ಲಿ 76 ಲಕ್ಷ ರೂಪಾಯಿ ಗೋಲ್ಡ್ ಕಾರ್ಡ್ (Dasara GoldCard) ಹಾಗೂ ದಸರಾ ಟಿಕೆಟ್ ಮಾರಾಟದಿಂದಲೇ ಬಂದಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗೆ 5 ವರ್ಷ ಜೈಲು
ಬಂದ 31 ಕೋಟಿ 8 ಲಕ್ಷ ರೂಪಾಯಿಯಲ್ಲಿ 28 ಕೋಟಿ 74 ಲಕ್ಷ ರೂಪಾಯಿ ದಸರಾಗೆ ಖರ್ಚಾಗಿದೆ. ಇದರಲ್ಲೇ ಮಂಡ್ಯ (Mandya), ಚಾಮರಾಜನಗರ (Chamarajanagar) ಹಾಗೂ ಹಾಸನ (Hassan) ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ದಸರಾ ಅನುದಾನ ಕೂಡ ಸೇರಿದೆ. ಮೈಸೂರಿನ ಯದುವಂಶದವರಿಗೆ ಗೌರವಧನವಾಗಿ (ರಾಜಧನ) 47 ಲಕ್ಷ ರೂಪಾಯಿ ನೀಡಲಾಗಿದೆ. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ
ಯುವ ದಸರಾ ಹಾಗೂ ಯುವ ಸಂಭ್ರಮಕ್ಕೆ 6 ಕೋಟಿ 36 ಲಕ್ಷ ರೂಪಾಯಿ ವೆಚ್ಚವಾಗಿದೆ. ದಸರಾ ಮೆರವಣಿಗೆಗೆ 2 ಕೋಟಿ 22 ಲಕ್ಷ, ಪಂಜಿನ ಕವಾಯತಿಗೆ 1 ಕೋಟಿ 17 ಲಕ್ಷ ರೂ.ಗಳಷ್ಟು ಹಣ ಖರ್ಚಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekar) ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವರು, ಒಟ್ಟು 22 ವಿವಿಧ ಸಮಿತಿ ಅಧಿಕಾರಿಗಳು ತಾವು ಖರ್ಚು ಮಾಡಿರುವ ಹಣದ ವಿವರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಆದರೆ, ಲೆಕ್ಕ ಸಲ್ಲಿಸುವ ವೇಳೆಗೆ ಜಿಲ್ಲಾಧಿಕಾರಿ ಬದಲಾದ ಕಾರಣ ಈ ಲೆಕ್ಕದ ಪರಿಶೀಲನೆ ನಡೆದಿಲ್ಲ. ಹೀಗಾಗಿ, ಉಪ ಸಮಿತಿ ನೀಡಿರುವ ಲೆಕ್ಕದ ಪರಿಶೀಲನೆ ಜವಾಬ್ದಾರಿ ಹೊಸ ಜಿಲ್ಲಾಧಿಕಾರಿ ಹೆಗಲಿಗೆ ಬಿದ್ದಿದೆ. ಇವರು ಲೆಕ್ಕ ಪರಿಶೀಲಿಸಿದ ಬಳಿಕ ಎಲ್ಲಾ ಉಪ ಸಮಿತಿಗಳ ಖರ್ಚಿನ ಪಟ್ಟಿ ಅಂತಿಮವಾಗುತ್ತದೆ ಎಂದು ತಿಳಿಸಿದ್ದಾರೆ.